ಐಎಸ್ಐ ಜಾಲದಲ್ಲಿ ಇಸ್ರೋದ ಅಧಿಕಾರಿ : 20 ವರ್ಷಗಳಿಂದ ಪಾಕ್ ಗೆ ಮಾಹಿತಿ ರವಾನೆ
ನವದೆಹಲಿ, ಅ.30- ಭಾರತದ ವಿವಿಧೆಡೆ ಪಾಕಿಸ್ತಾನ ಗೂಢಚಾರ ಸಂಸ್ಥೆ-ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ನ (ಐಎಸ್ಐ) ಬೇಹುಗಾರರು ಹಲವು ತಿಂಗಳಿನಿಂದ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಅಧಿಕಾರಿಯೊಬ್ಬರೂ ಈ ಜಾಲದಲ್ಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಇಡೀ ದೇಶವೇ ಬೆಚ್ಚಿಬೀಳಿಸುವಂತೆ ಮಾಡಿದೆ. ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಈಗಾಗಲೇ ನಿಯೋಜಿವಾಗಿರುವ ಪಾಕಿಸ್ತಾನದ ಈ ಏಜೆಂಟರು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ಸುಳಿವುಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿರುವ ಜೊತೆಗೆ 2008ರ ಮುಂಬೈ ಮಾದರಿ ದಾಳಿಗೆ ವ್ಯವಸ್ಥಿತ ಸಂಚು ರೂಪಿಸಿದ್ದ ಸಂಗತಿಯೂ ಬಯಲಾಗಿದೆ.
ಗೂಢಚರ್ಯೆ ಆರೋಪದಲ್ಲಿ ಬಂಧಿತನಾಗಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿ ಅಧಿಕಾರಿ ಮೆಹಮೂದ್ ಅಖ್ತರ್ ಭಾರತ ಬಿಡುವ ಮುನ್ನ ದೆಹಲಿಯಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಐಎಸ್ಐನ 10 ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಹೆಸರನ್ನು ಬಹಿರಂಗಗೊಳಿಸಿದ್ದಾನೆ.
ಕರ್ನಲ್ ಸಯ್ಯದ್ ಫಾರೂಖ್, ಆತನ ಸಹಾಯಕ ಅಧಿಕಾರಿ ಖದೀಮ್ ಹುಸೇನ್, ಮೇಜರ್ ಸಹೀದ್ ಇಕ್ಬಾಲ್ ಮತ್ತು ಉಪ ನಿರ್ದೇಶಕ ಡಾ. ಮುದಾಸಿರ್ ಇಕ್ಬಾಲ್ ಮೊದಲಾದ ಐಎಸ್ಐ ಸದಸ್ಯರ ಹೆಸರು ಮತ್ತು ಅವರ ಮಾಹಿತಿಗಳನ್ನು ಅಖ್ತರ್ ನೀಡಿದ್ದು, ಬೇಹುಗಾರಿಕೆ ಜಾಲ ಭೇದಿಸುವ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಈ ವ್ಯಕ್ತಿಗಳು ಹಲವು ತಿಂಗಳುಗಳಿಂದ ಐಎಸ್ಐ ಮತ್ತು ಪಾಕಿಸ್ತಾನಿ ಸೇನೆ ಎರಡಕ್ಕೂ ಕಾರ್ಯನಿರ್ವಹಿಸುತ್ತಾ ಭಾರತದ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗೆ ಸೇರಿದ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾರೆ. ಅವರ ಗೂಢಚರ್ಯೆ ಕಾರ್ಯಗಳು ಸಂದರ್ಭಕ್ಕೆ ಅನುಗುಣವಾಗಿ ಅಗಾಗ ಬದಲಾವಣೆಯಾಗುತ್ತಿರುತ್ತವೆ ಎಂಬ ಸ್ಫೋಟಕ ಮಾಹಿತಿಯನ್ನೂ ಅತ ಬಾಯ್ಬಿಟ್ಟಿದ್ದಾನೆ.
ಅಖ್ತರ್ ಐಎಸ್ಐಗಾಗಿ ಅತ್ಯಂತ ವ್ಯವಸ್ಥಿತ ಬೇಹುಗಾರಿಕೆ ಜಾಲವೊಂದನ್ನು ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಭಾರತ-ಪಾಕ್ ಗಡಿಯಲ್ಲಿ ಬಿಎಸ್ಎಫ್ ಯೋಧರ ನಿಯೋಜನೆಗೆ ಸಂಬಂಧಿಸಿದಂತೆ ದಾಖಲೆಗಳು ಸೇರಿದಂತೆ ಹಲವು ಗೋಪ್ಯ ಮಾಹಿತಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇಸ್ರೋ ಅಧಿಕಾರಿ ಷಾಮೀಲು:
ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಅಧಿಕಾರಿಯೊಬ್ಬರ ಮೂಲಕ ಆಖ್ತರ್ ಅತ್ಯಂತ ಸೂಕ್ಷ್ಮ ಮಾಹಿತಿ ಕಲೆ ಹಾಕಿ ಪಾಕ್ಗೆ ರವಾನಿಸುತ್ತಿದ್ದ ಎಂಬ ಆತಂಕಕಾರಿ ಸಂಗತಿಯೂ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಅಧಿಕಾರಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ತನಿಖೆಗೆ ಒಳಪಡಿಸಲಾಗಿದೆ. ಈಗಾಗಲೇ ಬಂಧಿತನಾದ ಅಖ್ತರ್ನನ್ನು ಭಾರತದಲ್ಲಿ ಇರಿಸಿಕೊಳ್ಳಲು ಸಮ್ಮತಿ ಇಲ್ಲ ಎಂಬ ಕಾರಣದಿಂದ ಆತನನ್ನು ಶನಿವಾರ ಇಸ್ಲಾಮಾಬಾದ್ಗೆ ಅಟ್ಟಲಾಗಿದೆ. ಅಖ್ತರ್ ಕುಟುಂಬದ ಮೂವರು ಸದಸ್ಯರು ರಾಜಸ್ತಾನದ ಅಮೃತಸರದಲ್ಲಿರುವ ಅತ್ತಾರಿ ಎಂಬಲ್ಲಿಗೆ ಬಂದಿದ್ದು ಅವರೆಲ್ಲರನ್ನೂ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ.
20 ವರ್ಷಗಳಿಂದ ಮಾಹಿತಿ ರವಾನೆ :
ಸಂಸತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕದ್ದು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಸಮಾಜವಾದಿ ಪಕ್ಷದ ಸಂಸದ ಮುನ್ನಾವರ್ ಸಲೀಂ ಆಪ್ತ ಕಾರ್ಯದರ್ಶಿ ಫರಾತ್ ಕಳೆದ 20 ವರ್ಷಗಳಿಂದಲೂ ಬೇಹುಗಾರಿಕೆ ನಡೆಸುತ್ತಿದ್ದ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಭೂಪಾಲ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಮುನ್ನಾವರ್ ತಮ್ಮ ಮೇಲೆ ಬಂದಿರುವ ಆರೋಪ ಸಾಬೀತಾದರೆ ಇಡೀ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ಧಾರೆ. ನನ್ನ ಜೀವನ ತೆರೆದ ಪುಸ್ತಕ. ಫರಾತ್ ಬೇಹುಗಾರಿಕೆಯಲ್ಲಿ ಷಾಮೀಲಾದ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಒಂದು ವರ್ಷದಿಂದ ನನ್ನ ಬಳಿ ಕೆಲಸ ಮಾಡುತ್ತಿದ್ದ. ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಕ್ಕೆ ಮೊದಲು ಪಾರ್ಲಿಮೆಂಟ್ ಮತ್ತು ಸರ್ಕಾರಕ್ಕೆ ಆತನ ಹೆಸರನ್ನು ಪರಿಶೀಲನೆ ಮಾಡಿಸಿ ದೃಢಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.