ಐಎಸ್ ಉಗ್ರರನ್ನು ಓಡಿಸಲು ಇರಾಕ್ ಸಜ್ಜು : ಭಾರಿ ಕಾಳಗಕ್ಕೆ ರಣರಂಗ ರೆಡಿ
ಇಬ್ರಿಲ್ (ಇರಾಕ್), ಅ.17-ಮಸೂಲ್ ನಗರವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳಿಂದ ವಿಮೋಚನೆಗೊಳಿಸಲು ಸೇನಾ ಕಾರ್ಯಾಚರಣೆ ಆರಂಭಿಸುವುದಾಗಿ ಇರಾಕ್ ಪ್ರಧಾನಿ ಹೈದರ್ ಅಲ್-ಅಬಾದಿ ಘೋಷಿಸಿದ್ದಾರೆ. ಇದರೊಂದಿಗೆ ಐಎಸ್ ಮತ್ತು ಇರಾಕಿ ಯೋಧರ ನಡುವೆ ದೊಡ್ಡ ಮಟ್ಟದ ಕಾಳಗಕ್ಕೆ ರಣರಂಗ ಸಜ್ಜಾಗಿದಂತಾಗಿದೆ. ಇರಾಕ್ನ ಎರಡನೇ ಅತಿ ದೊಡ್ಡ ನಗರ ಮಸೂಲ್ನಿಂದ ಐಎಸ್ ಬಂಡುಕೋರರನ್ನು ಬಡಿದಟ್ಟಲು ಬಹು ನಿರೀಕ್ಷಿತ ಸೇನಾ ದಾಳಿ ಆರಂಭವಾಗುವ ಬಗ್ಗೆ ಇರಾಕ್ ಪ್ರಧಾನಿ ಹೇಳಿಕೆಯನ್ನು ಸರ್ಕಾರಿ ಸ್ವಾಮ್ಯದ ದೂರದರ್ಶನ ಇಂದು ಬೆಳಿಗ್ಗೆ ಬಿತ್ತರಿಸಿದೆ.
ಭಯೋತ್ಪಾದನೆ ನಿಗ್ರಹ ದಳದ ಮಿಲಿಟರಿ ಸಮವಸ್ತ್ರ ಧರಿಸಿದ್ದ ಹೈದರ್ ಅವರು ಹಿರಿಯ ಸೇನಾಧಿಕಾರಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿರುವುದು ಟಿವಿಯಲ್ಲಿ ಬಿತ್ತರವಾಗಿದೆ. ಸೇನಾಪಡೆಗಳು ಇಂದು ಮಸೂಲ್ ನಗರವನ್ನು ಐಎಸ್ ಉಗ್ರಗಾಮಿಗಳಿಂದ ಮುಕ್ತಗೊಳಿಸಲಿದೆ. ಬಂಡುಕೋರರನ್ನು ಸದೆ ಬಡಿದು ನಿಮ್ಮ ಘನತೆ-ಗೌರವವನ್ನು ರಕ್ಷಿಸುತ್ತೇವೆ ಎಂದು ಇರಾಕ್ ಪ್ರಧಾನಿ ರಾಷ್ಟ್ರದ ಜನತೆಗೆ ಭರವಸೆ ನೀಡಿದ್ದಾರೆ.
► Follow us on – Facebook / Twitter / Google+