ಐಎಸ್ ಉಗ್ರರ ನರಕದಲ್ಲಿ ನರಳುತ್ತಿದ್ದಾರೆ 10 ಲಕ್ಷ ಸಿರಿಯನ್ನರು

ISIS-02

ವಿಶ್ವಸಂಸ್ಥೆ, ನ.22-ಅತ್ಯಂತ ಕ್ರೂರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಪ್ರಾಬಲ್ಯ ಹೊಂದಿರುವ ಸಿರಿಯಾದಲ್ಲಿ ಸುಮಾರು 10 ಲಕ್ಷ ಮಂದಿ ಅವರ ಹಿಡಿತದಲ್ಲಿ ಸಿಲುಕಿ ನರಳುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಸಿರಿಯಾದ ವಿವಿಧೆಡೆ ಸುಮಾರು 9,74,080 ಜನರು ಐಎಸ್ ಉಗ್ರರ ವಶದಲ್ಲಿದ್ದಾರೆ. ಭಯೋತ್ಪಾದರ ಹಿಡಿತದಲ್ಲಿದ್ದ ಸಿರಿಯನ್ನರ ಸಂಖ್ಯೆ ಆರು ತಿಂಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ನೆರವು ವಿಭಾಗದ ಮುಖ್ಯಸ್ಥ ಸ್ಟೀಫನ್ ಓಬ್ರಿಯಾನ್ ಭದ್ರತಾ ಮಂಡಳಿಗೆ ನೀಡಿರುವ ಅಂಕಿಅಂಶದಲ್ಲಿ ತಿಳಿಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ 4,86,700 ಮಂದಿ ಸಿರಿಯನ್ನರು ಐಎಸ್ ಬಂಡುಕೋರರ ವಶದಲ್ಲಿದ್ದರು.

ಇತ್ತೀಚಿನ ದಿನಗಳಲ್ಲಿ ಸಿರಿಯಾದಲ್ಲಿ ಉಗ್ರರ ಪ್ರಾಬಲ್ಯ ಮತ್ತು ಉಪಟಳ ತೀವ್ರ ಹೆಚ್ಚಾಗಿದ್ದು, ತಮ್ಮ ವಶದಲ್ಲಿರುವ ನಾಗರಿಕರಿಗೆ ನರಕ ಸದೃಶ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಾಯುದಾಳಿಗೆ 10 ಬಲಿ :

ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ನಿಗ್ರಹಿಸಲು ಕಾರ್ಯಾಚರಣೆ ತೀವ್ರಗೊಳಿಸಿರುವ ಅಮೆರಿಕ ನೇತೃತ್ವದ ಯುದ್ಧ ವಿಮಾನಗಳು ಸಿರಿಯಾದ ರಖ್ಖಾ ಮೇಲೆ ನಡೆಸಿದ ದಾಳಿಯಲ್ಲಿ 10 ನಾಗರಿಕರು ಬಲಿಯಾಗಿದ್ದಾರೆ. ಉಗ್ರರನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ದಾಳಿಗೆ ನಾಗರಿಕರು ಬಲಿಯಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

► Follow us on –  Facebook / Twitter  / Google+

Sri Raghav

Admin