ಐಟಿ ದಾಳಿಗೆ ಜಗ್ಗದ ಡಿಕೆಶಿ ಮತ್ತೆ ಗುಜರಾತ್ ಶಾಸಕರ ನೇತೃತ್ವ, ರಾಜ್ಯಪಾಲರ ಭೇಟಿ
ಬೆಂಗಳೂರು,ಆ.5-ಇಡೀ ದೇಶದ ಕುತೂಹಲ ಕೆರಳಿಸಿರುವ ಭಾರೀ ಐಟಿ ದಾಳಿ ನಂತರವೂ ಕುಗ್ಗದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ವತಃ ತಾವೇ ನೇತೃತ್ವ ವಹಿಸಿ ಇಂದು ಗುಜರಾತ್ ಶಾಸಕರನ್ನು ರಾಜ್ಯಪಾಲರಿಗೆ ಭೇಟಿ ಮಾಡಿಸಿ ವಿಧಾನಸೌಧ ಸೇರಿದಂತೆ ಬೆಂಗಳೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸಿದರು. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಐಟಿ ದಾಳಿಗೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್ ಅವರ ಆತ್ಮವಿಶ್ವಾಸ ಕುಂದಿರಬಹುದೆಂಬ ನಿರೀಕ್ಷೆಯನ್ನು ಹುಸಿ ಮಾಡಿ ಯಥಾಪ್ರಕಾರ ಎಂದಿನಂತೆ ಗುಜರಾತ್ ಶಾಸಕರ ಉಸ್ತುವಾರಿಗೆ ಹೆಗಲು ನೀಡಿದ್ದು , ಜನರಲ್ಲಿ ಅಚ್ಚರಿ ಮೂಡಿಸಿತು.
ಡಿ.ಕೆ.ಶಿವಕುಮಾರ್ ಐಟಿ ದಾಳಿ ವೇಳೆ ಮನೆ ಬಿಟ್ಟು ಕದಲದಿದ್ದಾಗ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರು ಗುಜರಾತ್ ಕಾಂಗ್ರೆಸ್ನ 44 ಶಾಸಕರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇಂದು ಬೆಳಗ್ಗೆ ಐಟಿ ದಾಳಿ ಪೂರ್ಣಗೊಳ್ಳುತ್ತಿದ್ದಂತೆ ಅವರ ಮನೆ ದೇವರಾದ ನೊಣವಿನಕೆರೆ ಅಜ್ಜಯ್ಯನ ದರ್ಶನ ಮಾಡಿ ಪೂಜೆ ಸಲ್ಲಿಸಿ ನೇರವಾಗಿ ಈಗಲ್ಟನ್ ರೆಸಾರ್ಟ್ಗೆ ತಲುಪಿದರು.
ಅಲ್ಲಿಂದ ಗುಜರಾತ್ನ 44 ಕಾಂಗ್ರೆಸ್ ಶಾಸಕರನ್ನು ಎರಡು ವೋಲ್ವೊ ಬಸ್ಗಳಲ್ಲಿ ಕರೆತಂದು ಬೆಂಗಳೂರು ದರ್ಶನ ಮಾಡಿಸಿದರು. ಈ ವೇಳೆ ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆ ಬಳಿ ಗುಜರಾತ್ ಶಾಸಕರು ಗಾಂಧೀಜಿಯವರ ಅತಿ ಪ್ರಿಯವಾದ ರಘುಪತಿ ರಾಘವ ರಾಜರಾಮ್ , ಪತಿತಪಾವನ ಸೀತಾರಾಮ್ ಎಂಬ ಭಜನೆ ಮಾಡಿ ಭಕ್ತಿಗೌರವ ಸಲ್ಲಿಸಿದರು.
< Eesanje News 24/7 ನ್ಯೂಸ್ ಆ್ಯಪ್ >