ಐಪಿಎಲ್‍ನಲ್ಲಿ ಕನ್ನಡಿಗರ ಕಲರವ

Spread the love

ILP--01
ಸ್ಥಳೀಯ , ದೇಶಿಯ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗಮನ ಸೆಳೆದಿರುವ ಕನ್ನಡದ ಕಲಿಗಳು ಐಪಿಎಲ್ 11ರಲ್ಲೂ ತಮ್ಮ ಅಮೋಘ ಪ್ರದರ್ಶನದಿಂದ ಆಯಾ ತಂಡಗಳ ಮುದ್ದಿನ ಕಣ್ಮಣಿಗಳಾಗಿದ್ದಾರೆ. ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರುತ್ತಿರುವ ಕನ್ನಡಿಗ ಆಟಗಾರರು ತಾವು ಪ್ರತಿನಿಧಿಸಿರುವ ತಂಡಗಳನ್ನು ಪ್ಲೇಆಫ್‍ಗೇರಿಸಲೇಬೇಕೆಂಬ ಛಲ ತೊಟ್ಟಿದ್ದರಿಂದಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಬಲಿಷ್ಠ ಬ್ಯಾಟಿಂಗ್ ಅಸ್ತ್ರವೆಂದೇ ಬಿಂಬಿಸಿಕೊಂಡಿದ್ದ ಆರ್‍ಸಿಬಿ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್ ತಮ್ಮ ತಂಡವನ್ನು ಪ್ಲೇಆಫ್‍ಗೇರುವ ಕನಸನ್ನು ಜೀವಂತವಾಗಿರಿಸಿದ್ದಾರೆ.  ಸಮರ್ಥ ಬೌಲಿಂಗ್ ಪಡೆಯನ್ನೇ ಹೊಂದಿರುವ ಸನ್‍ರೈಸರ್ಸ್ ವಿರುದ್ಧ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದಿಂದ ರಾಬಿನ್ ಉತ್ತಪ್ಪ ತಮ್ಮ ತಂಡಕ್ಕೆ ಆಸರೆಯಾಗಿ ಮಿಂಚಿದರೆ, ಎಸ್‍ಆರ್‍ಎಚ್‍ನ ಬ್ಯಾಟಿಂಗ್ ಬಲವನ್ನು ದಮನಗೊಳಿಸಿದ್ದು ಬೆಂಗಳೂರಿನವರೇ ಆದ ಪ್ರಸಿದ್ಧಕೃಷ್ಣ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಇಂದಿನ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮಣಿಸಿ ಪ್ಲೇಆಫ್‍ಗೇರಬೇಕಾದರೆ ಕನ್ನಡಿಗರಾದ ಲೋಕೇಶ್ ರಾಹುಲ್, ಮಯಾಂಕ್ ಅಗರ್‍ವಾಲ್, ಕರುಣ್‍ನಾಯರ್ ಮತ್ತೊಮ್ಮೆ ಮಿಂಚಲೇಬೇಕಾಗಿದೆ. ಪ್ಲೇಆಫ್‍ಗೆ ನಿರ್ಣಾಯಕವಾಗಿರುವ ಪಂದ್ಯದಲ್ಲಿ ಮಾತ್ರ ಮಿಂಚದ ಕನ್ನಡಿಗ ಆಟಗಾರರು ಸರಣಿಯುದ್ದಕ್ಕೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧವಾದ ಬೌಲಿಂಗ್‍ನಿಂದ ತಂಡದ ಗೆಲುವಿಗೆ ತಮ್ಮದೇ ಕಾಣಿಕೆಯನ್ನು ನೀಡುತ್ತಿದ್ದಾರೆ.

ರಾಹುಲ್ ಬ್ಯಾಟಿಂಗ್ ಅಬ್ಬರ:
ಕಿಂಗ್ಸ್ ಇಲೆವೆನ್‍ನಲ್ಲಿ ಕ್ರಿಸ್‍ಗೇಲ್, ಆರೋನ್‍ಪಿಂಚ್‍ರಂತಹ ಟ್ವೆಂಟಿ-20 ಸ್ಪೆಷಾಲಿಸ್ಟ್‍ಗಳು ಎಡವಿದರೂ ಕೂಡ ಕನ್ನಡಿಗ ಕೆ.ಎಲ್.ರಾಹುಲ್ ಪ್ರತಿಯೊಂದು ಪಂದ್ಯದಲ್ಲೂ ಮಿಂಚುತ್ತಿರುವುದು ಆ ಆಟಗಾರರ ಆಟವನ್ನೇ ಮಂಕಾಗಿಸಿದ್ದಾರೆ. ರಾಹುಲ್ ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 6 ಅರ್ಧಶತಗಳೊಂದಿಗೆ 652 ರನ್ ಗಳಿಸಿರುವುದೇ ಅವರ ಬ್ಯಾಟಿಂಗ್ ಅಬ್ಬರಕ್ಕೆ ಕೈಗನ್ನಡಿಯಾಗಿದೆ.

ರಾಬಿನ್ ಅಕ್ರಮಣ:
ಕೋಲ್ಕತ್ತಾ ನೈಟ್‍ರೈಡರ್ಸ್ ತಂಡದಲ್ಲಿ ಸುನೀಲ್‍ನಾರೇನ್, ಆ್ಯಂಡ್ರುರಸಲ್, ಕ್ರಿಸ್‍ಲೀನ್ ಸ್ಫೋಟಕ ಬ್ಯಾಟಿಂಗ್‍ನಿಂದ ಎಲ್ಲರ ಗಮನ ಸೆಳೆಯುತ್ತಿರುವ ಬೆನ್ನಲ್ಲೇ ಕೊಡಗಿನ ಕುವರ ಕೀಪಿಂಗ್‍ನಲ್ಲಿ ಮಾತ್ರ ಮಿಂಚದೆ ಬ್ಯಾಟಿಂಗ್‍ನಿಂದಲೂ ತಂಡಕ್ಕೆ ಆಸರೆಯಾಗಿದ್ದಾರೆ. 14 ಪಂದ್ಯಗಳಲ್ಲಿ ರಾಬಿನ್ 1 ಅರ್ಧಶತಕ ಸೇರಿದಂತೆ 346 ರನ್‍ಗಳನ್ನು ಗಳಿಸಿದ್ದಾರೆ.

ಬೆರಗುಮೂಡಿಸಿದ ಕೃಷ್ಣಪ್ಪ ಗೌತಮ್:
ಐಪಿಎಲ್ ಹರಾಜು ಸಮಯದಲ್ಲೇ 65 ಕೋಟಿ ಬಿಕರಿಯಾಗುವ ಮೂಲಕ ಬೆರಗು ಮೂಡಿಸಿದ್ದ ಮತ್ತೊಬ್ಬ ಕನ್ನಡಿಗ ಕೃಷ್ಣಪ್ಪ ಗೌತಮ್ ಉತ್ತಮ ಅಲೌಂಡರ್ ಆಟದಿಂದ ಗಮನ ಸೆಳೆದಿದ್ದಾರೆ, ರೋಹಿತ್ ಶರ್ಮಾರ ಉತ್ತಮ ಬೌಲಿಂಗ್ ಪಡೆಯನ್ನೇ ಮಂಕಾಗಿಸಿ ಅರ್ಧಶತಕ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದ್ದ ಗೌತಮ್ ನಿನ್ನೆ ನಡೆದ ನಿರ್ಣಾಯಕ ಪಂದ್ಯದಲ್ಲೂ ಆರ್‍ಸಿಬಿ ವಿರುದ್ಧ ರೋಚಕ ಬ್ಯಾಟಿಂಗ್ ಮೂಲಕ 14 ರನ್ ಗಳಿಸಿದರೆ, ಒಂದು ವಿಕೆಟ್ ಕೆಡವುವ ಮೂಲಕ ತಂಡವನ್ನು ಪ್ಲೇಆಫ್‍ಗೇರಿಸಿದ್ದಾರೆ. ಗೌತಮ್ ಆಡಿದ 14 ಪಂದ್ಯಗಳಲ್ಲಿ 117 ರನ್‍ಗಳಿಸುವುದರ ಜೊತೆಗೆ 9 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

ಶ್ರೇಯಸ್ ಬೌಲಿಂಗ್ ಮಿಂಚು:
ಕಳೆದ ಐಪಿಎಲ್‍ನಲ್ಲಿ ಮುಂಬೈ ತಂಡದ ಚಾಂಪಿಯನ್ಸ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಪಾಲ್ ಈ ಬಾರಿಯೂ ಅದೇ ಹುಮ್ಮಸ್ಸಿನಲ್ಲಿದ್ದರೆ ಆರ್‍ಸಿಬಿ ವಿರುದ್ಧದ ಪಂದ್ಯದಲ್ಲಿ ಗೋಪಾಲ್ ಪ್ರಮುಖ 4 ವಿಕೆಟ್ ಕಬಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇದುವರೆಗೂ 10 ಪಂದ್ಯಗಳಿಂದ 10 ವಿಕೆಟ್ ಕೆಡವಿ ಫ್ರಾಂಚೈಸಿಗಳ ಮನ ಗೆದ್ದಿದ್ದಾರೆ.

ಪ್ರಸಿದ್ಧ ಕೃಷ್ಣ ಮ್ಯಾಜಿಕ್:
ದಿನೇಶ್‍ಕಾರ್ತಿಕ್‍ರ ಕೆಕೆಆರ್ ತಂಡದಲ್ಲಿ ಪ್ರಮುಖ ಬೌಲರ್ ಆಗಿ ಬೆಳೆಯುತ್ತಿರುವ ಪ್ರಸಿದ್ಧ ಕೃಷ್ಣ ಕೂಡ ತಮ್ಮ ಬೌಲಿಂಗ್ ಮೊನಚನ್ನು ಪ್ರದರ್ಶಿಸುತ್ತಿದ್ದಾರೆ, ಎಸ್‍ಆರ್‍ಎಚ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ 4 ವಿಕೆಟ್ ಕಬಳಿಸಿ ತಂಡವನ್ನು ಪ್ಲೇಆಫ್‍ಗೇರಿಸಿದ್ದಾರೆ. ಇನ್ನು ಎಸ್‍ಆರ್‍ಎಚ್ ತಂಡದಲ್ಲಿರುವ ಪ್ರಮುಖ ಆಟಗಾರ ಮನೀಷ್ ಪಾಂಡೆ ಕೂಡ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ಉತ್ತಮ ಫೀಲ್ಡಿಂಗ್‍ನಿಂದ ಗಮನ ಸೆಳೆದಿದ್ದಾರೆ.
ಐಪಿಎಲ್ 11ರಲ್ಲಿ ಆಡಿರುವ 14 ಪಂದ್ಯಗಳಿಂದ 3 ಅರ್ಧಶತಕಗಳೊಂದಿಗೆ 276 ರನ್ ಗಳನ್ನು ಗಳಿಸಿದ್ದಾರೆ. ಹೀಗೆ 2018ರ ಐಪಿಎಲ್‍ನಲ್ಲಿ ತಮ್ಮದೇ ಆದ ಸ್ಟೈಲಿಷ್ ಆಟದಿಂದ ಕ್ರೀಡಾ ಪ್ರೇಮಿಗಳಲ್ಲಿ ಮನೆ ಮಾಡಿರುವ ಕನ್ನಡಿಗರು ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸುವಂತಾಗಲಿ.

ಕೊಹ್ಲಿಗೆ ಬೇಡವಾದರೆ ಕನ್ನಡಿಗರು
ಹೆಸರಿಗಷ್ಟೇ ಬೆಂಗಳೂರಿನ ಸೊಗಡನ್ನು ಹೊಂದಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್‍ಸಿಬಿ ತಂಡದಲ್ಲಿ ನೈಜ ಕನ್ನಡಿಗರಿಗೆ ಅವಕಾಶ ನೀಡದಿರುವುದೇ ತಂಡದ ಹೀನಾಯ ಸೋಲಿಗೆ ಪ್ರಮುಖ ಕಾರಣವೆನ್ನಬಹುದಾಗಿದೆ. ಕೊಹ್ಲಿಗೆ ಬೇಡವಾದ ಕನ್ನಡಿಗರು ಇತರ ತಂಡಗಳಲ್ಲಿ ಮಿಂಚಿನ ಆಟವಾಡುತ್ತಿರುವುದು ಗಮನಿಸಿದರೆ ಕನ್ನಡಿಗರ ಸಾಮಥ್ರ್ಯ ಏನು ಎಂಬುದು ಅರ್ಥವಾಗುತ್ತದೆ.   ಆದರೆ ಕೊಹ್ಲಿ ತಂಡದಲ್ಲಿದ್ದ ಪವನ್‍ದೇಶಪಾಂಡೆ ಹಾಗೂ ಅನಿರುದ್ಧ ಅಶೋಕ್ ಜೋಷಿಗೆ ಒಂದೇ ಒಂದು ಪಂದ್ಯದಲ್ಲೂ ಅವಕಾಶ ನೀಡದಿರುವುದು ತಂಡದ ಹೀನಾಯ ಸೋಲಿಗೆ ಕಾರಣವೆನ್ನುವುದು ಖಂಡನೀಯ.

Facebook Comments

Sri Raghav

Admin