ಒಂಟಿ ಮನೆಯಲ್ಲಿ ಕಳ್ಳತನಕ್ಕೆ ಬಂದವನು ಮಾಲೀಕನನ್ನೇ ಕೊಂದು ಪರಾರಿಯಾದ..?

Theft

ಯಲಹಂಕ, ಜೂ.21- ಬೆಳ್ಳಂಬೆಳಗ್ಗೆ ಒಂಟಿ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನಿಸುತ್ತಿದಾಗ ಎಚ್ಚರಗೊಂಡ ಮನೆ ಮಾಲೀಕನನ್ನು ಭೀಕರವಾಗಿ ಕೊಲೆ ಮಾಡಿ ಕಳ್ಳ ಪರಾರಿಯಾಗಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್.ಐ.ಜಿ ಕಾಲೋನಿಯಲ್ಲಿ ನಡೆದಿದೆ. ಅನಂತರಾಮಯ್ಯ (68) ಕೊಲೆಯಾದ ದುರ್ದೈವಿ.  ಮೂಲತಃ ಮೈಸೂರಿನವರಾದ ಇವರು ಎಸ್ಕಾರ್ಟ್ ಕಂಪೆನಿಯ ನಿವೃತ್ತ ನೌಕರರು. ಪ್ರಸ್ತುತ ಖಾಸಗಿ ಅಪಾರ್ಟ್‍ಮೆಂಟ್‍ನ ನಿರ್ವಹಣಾ ಮೇಲ್ವಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಈಶಾನ್ಯ ವಿಭಾಗದ ಡಿಸಿಪಿ ಡಾ.ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   ಯಲಹಂಕ ನ್ಯೂಟೌನ್‍ನ ಹೌಸಿಂಗ್‍ಬೋರ್ಡ್ ಕಾಲೋನಿಯಲ್ಲಿ ವಾಸವಾಗಿದ್ದ ಅನಂತರಾಮಯ್ಯ ನೆಲಮಹಡಿಯಲ್ಲಿ ರಾತ್ರಿ ಒಬ್ಬರೇ ಮಲಗಿದ್ದರೆ, ಮೊದಲ ಮಹಡಿಯಲ್ಲಿ ಇವರ ಮಗ ಮಲಗಿದ್ದರು.  ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ನೆಲಮಹಡಿಗೆ ನುಗ್ಗಿದ ಕಳ್ಳ, ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಅನಂತರಾಮಯ್ಯ ಎಚ್ಚರಗೊಂಡು ಹಿಡಿಯಲು ಮುಂದಾದಾಗ ಅವರ ತಲೆಗೆ ಬಲವಾದ ಮಾರಕಾಸ್ತ್ರದಿಂದ ಹೊಡೆದು ಸೂಟ್‍ಕೇಸ್ ಹಿಡಿದು ಪರಾರಿ ಯಾಗುತ್ತಿದ್ದ ವೇಳೆ ಅನಂತರಾಮಯ್ಯ ಕಿರುಚಿಕೊಂಡಿದ್ದಾರೆ.

ಮೇಲ್ಮಹಡಿಯಲ್ಲಿದ್ದ ಮಗ ಮಾಧವ್ ಎಚ್ಚರಗೊಂಡು ಕೆಳಗಿಳಿದು ಬಂದು ನೋಡಿದಾಗ ಕುಸಿದು ಬಿದ್ದಿದ್ದ ತಂದೆಯನ್ನು ಸ್ಥಳಿಯರ ಸಹಾಯದಿಂದ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಕಳ್ಳನ ಪತ್ತೆಗಾಗಿ ಮೂವರು ಎಸಿಪಿ, 8 ಇನ್ಸ್‍ಪೆಕ್ಟರ್‍ಗಳ ತಂಡ  ರಚಿಸಿದ್ದು, ಆರೋಪಿಗಳನ್ನು ಕೂಡಲೆ ಬಂಧಿಸಲಾಗುವುದೆಂದು ಡಿಸಿಪಿ ಹರ್ಷ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಉಪನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin