ಒಂದು ತಿಂಗಳೊಳಗೆ ರಾಜ್ಯದಿಂದ ವಿದೇಶಿ ಪ್ರಜೆಗಳ ಗಡಿಪಾರಿಗೆ ಸೂಚನೆ
ಬೆಂಗಳೂರು,ಫೆ.4-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವೀಸಾ ಅವಧಿ ಮುಗಿದರೂ ಕಾನೂನುಬಾಹಿರವಾಗಿ ಇಲ್ಲಿಯೇ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳನ್ನು ಒಂದು ತಿಂಗಳೊಳಗೆ ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರ ಗೃಹ ಇಲಾಖೆಗೆ ಸೂಚಿಸಿದೆ. ಬೆಂಗಳೂರು ಮಹಾನಗರದಲ್ಲೇ ಸುಮಾರು 6 ಸಾವಿರಕ್ಕೂ ಹೆಚ್ಚು ಆಫ್ರಿಕಾ ದೇಶದ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ಇಲ್ಲಿಯೇ ತಂಗಿದ್ದಾರೆ. ಇದೇ ರೀತಿ ರಾಜ್ಯದ ಇತರ ಭಾಗಗಳಲ್ಲಿ ಸುಮಾರು 14 ಸಾವಿರಕ್ಕೂ ಹೆಚ್ಚು ಮಂದಿ ವೀಸಾ ನವೀಕರಿಸಿಕೊಂಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಯಾರು ವೀಸಾ ನವೀಕರಣ ಮಾಡಿಕೊಳ್ಳದೆ ಬೀಡು ಬಿಟ್ಟಿದ್ದಾರೋ ಅಂಥವರನ್ನು ಪತ್ತೆಹಚ್ಚಿ ತಕ್ಷಣವೇ ಗಡಿಪಾರು ಮಾಡಬೇಕೆಂದು ಗೃಹ ಇಲಾಖೆಗೆ ಕಟ್ಟುನಿಟ್ಟಿನ ತಾಕೀತು ಮಾಡಿದೆ.
ಈಗಾಗಲೇ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಪತ್ರ ಬರೆದಿರುವ ಗೃಹ ಕಾರ್ಯದರ್ಶಿಗಳು ಗಡಿಪಾರಿಗೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ಅನುಮತಿ ಬರುತ್ತಿದ್ದಂತೆ ಇವರನ್ನು ದೇಶದಿಂದ ಹೊರ ಹಾಕುವ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರಿನ ಕೊತ್ತನೂರು, ಹೆಣ್ಣೂರು ಕ್ರಾಸ್, ನಾಗವಾರ, ಲಿಂಗರಾಜುಪರು, ಬಾಗಲೂರು, ಬಾಗಲೂರುಕುಂಟೆ ಸೇರಿದಂತೆ ಮತ್ತಿತರ ಕಡೆ ಉಗಾಂಡ, ಕೀನ್ಯಾ, ನೈಜೀರಿಯಾ, ಸೂಡಾನ್ ಸೇರಿದಂತೆ ಮತ್ತಿತರ ಆಫ್ರಿಕಾದ ಪ್ರಜೆಗಳು ವಿದ್ಯಾಭ್ಯಾಸ ಮತ್ತು ಕೆಲಸಕ್ಕಾಗಿ ಬೆಂಗಳೂರಿಗೆ ಬರುತಿರುತ್ತಾರೆ.
ಭಾರತದ ಯಾವುದೇ ನಗರಕ್ಕೆ ಆಗಮಿಸಬೇಕಾದರೆ ಮೊದಲು ವಿದೇಶಾಂಗ ವ್ಯವಹಾರಗಳ ಇಲಾಖೆಗೆ ವೀಸಾ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಇಲ್ಲಿ ಪರಿಶೀಲನೆ ನಡೆದ ಬಳಿಕ ಅವರಿಗೆ ಇಷ್ಟು ದಿನಗಳ ಅವಧಿಗೆಂದು ವೀಸಾ ನೀಡಲಾಗುತ್ತದೆ. ಆರು ತಿಂಗಳು, ಒಂದು ವರ್ಷ, ಎರಡು ವರ್ಷದ ಅವಧಿಗೆ ವೀಸಾ ಪಡೆಯುವ ಆಫ್ರಿಕಾ ಪ್ರಜೆಗಳು ಪುನಃ ಇದನ್ನು ನವೀಕರಣ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಒಂದು ಬಾರಿ ವೀಸಾ ಮುಗಿದರೆ ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಹೀಗೆ ಕರ್ನಾಟಕದಲ್ಲೇ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಆಫ್ರಿಕಾ ಪ್ರಜೆಗಳು ನಕಲಿ ವೀಸಾ ಪಡೆದು ತಂಗಿರುವುದು ಪತ್ತೆಯಾಗಿದೆ. ಬೆಂಗಲೂರಿನಲ್ಲಿ ಆರು ಸಾವಿರ ಮಂದಿ ಇದ್ದರೆ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ 2ನೇ ಹಂತದ ನಗರಗಳಲ್ಲೂ ಇವರು ಇರುವುದನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಿದೆ.
ಕಾನೂನು ಬಾಹಿರ ಚಟುವಟಿಕೆ:
ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಬರುವ ಆಫ್ರಿಕಾನ್ ಪ್ರಜೆಗಳು ಬಹುತೇಕ ಕಡೆ ಕಾನೂನು ಬಾಹಿರ ಚಟುವಟಿಕೆಗಳಲ್ಲೇ ತೊಡಗಿಕೊಳ್ಳುತ್ತಾರೆ. ಡ್ರಗ್ಸ್ ಸೇವನೆ, ಕಳ್ಳತನ, ಪಿಕ್ಪಾಕೆಟ್, ಮಹಿಳೆಯರ ಸರ ಅಪಹರಣ, ದ್ವಿಚಕ್ರ ವಾಹನ ಕದಿಯುವುದು, ಕೊಕೇನ್ ಮಾರಾಟ ಸೇರಿದಂತೆ ಬಹುತೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದೇ ಪ್ರವೃತ್ತಿಯಾಗಿದೆ. ಅಲ್ಲದೆ ಆಗಾಗ್ಗೆ ಅತಿಯಾದ ಮದ್ಯಪಾನ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪುಂಡಾಟಿಕೆ ಮಾಡುವುದು, ಹೋಟೆಲ್ಗಳಲ್ಲಿ ತಿಂದ ಮೇಲೆ ಬಿಲ್ ಕೊಡದಿರುವುದು, ವೇಶ್ಯಾವಾಟಿಕೆ ಮುಂತಾದ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ನಾಲ್ಕು ದಿನಗಳ ಹಿಂದೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಗಾಂಡ ಮಹಿಳೆಯನ್ನು ಹಿಮಾಚಲ ಪ್ರದೇಶದ ಯುವಕನೋರ್ವ ಬರ್ಬರವಾಗಿ ಕೊಲೆ ಮಾಡಿದ್ದರ ಕಾರಣ ಏನೆಂಬುದು ಎಲ್ಲರಿಗೂ ತಿಳಿದ ವಿಷಯ. ಹೀಗೆ ಉದ್ಯೋಗದ ಹೆಸರಿನಲ್ಲಿ ಬಂದು ಇಲ್ಲಿಯೇ ಪುಂಡಾಟಿಕೆ, ಕಾನೂನು ವಿರೋಧಿ ಚಟುವಟಕೆಗಳನ್ನು ನಡೆಸುವವರನ್ನು ಹಂತ ಹಂತವಾಗಿ ಗಡಿಪಾರು ಮಾಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ಕೊಟ್ಟಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS