ಒಕ್ಕಲಿಗರ ಸಂಘದಲ್ಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ಮಂಡನೆಗೆ ವಿಶೇಷ ಸಭೆಗೆ ಆಗ್ರಹ

Okkaliga-Sangha

ಬೆಂಗಳೂರು, ಡಿ.29- ರಾಜ್ಯ ಒಕ್ಕಲಿಗರ ಸಂಘದ ಪ್ರಧಾನಕಾರ್ಯದರ್ಶಿ ಮತ್ತು ಖಜಾಂಚಿಯನ್ನು 2014ರ ಸೆಪ್ಟೆಂಬರ್‍ನಲ್ಲಿ ನಡೆಸಿದ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರಳ ಬಹುಮತದ ಮೂಲಕ ಪದಚ್ಯುತಗೊಳಿಸಲಾಗಿದೆ. ಅದರಂತೆ ಈಗಲೂ ಸರಳ ಬಹುಮತದ ಮೂಲಕ ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸನಿರ್ಣಯ ಮಂಡಿಸಲು ಸಂಘದ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಕರೆಯಬೇಕೆಂದು ಆಗ್ರಹಿಸಲಾಗುತ್ತಿದೆ. ಆಗ ಪ್ರಧಾನಕಾರ್ಯದರ್ಶಿಯಾಗಿದ್ದ ಪ್ರೊ.ಎಂ.ನಾಗರಾಜ್, ಖಜಾಂಚಿಯಾಗಿದ್ದ ಡಿ.ಎನ್.ಬೆಟ್ಟೇಗೌಡ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು.

ಇವರಿಬ್ಬರನ್ನು ಪದಚ್ಯುತಗೊಳಿಸುವಾಗ ಅವಿಶ್ವಾಸ ನಿರ್ಣಯ ತರಲು ಮೂರನೇ ಎರಡರಷ್ಟು ಬಹುಮತವಿರಬೇಕು ಎಂಬ ನಿಯಮವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ನೀಡಿರುವ ತೀರ್ಪನ್ನು ಉಲ್ಲೇಖಿಸಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅಧ್ಯಕ್ಷರಾದ ಅಪ್ಪಾಜಿಗೌಡರೇ ಸಹಿ ಹಾಕಿರುವ ನೋಟೀಸನ್ನು ನೀಡಲಾಗಿತ್ತು.  ಆಗ 22 ಮಂದಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರಕ್ಕೆ ಸಹಿ ಹಾಕಿದ್ದರು. ಮೂರನೇ ಎರಡರಷ್ಟು ಬಹುಮತ ಬೇಕಾದರೆ ಸಂಘದ ಒಟ್ಟು 35 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಲ್ಲಿ 24 ಮಂದಿ ನಿರ್ದೇಶಕರು ಸಹಿ ಹಾಕಬೇಕಿತ್ತು.

ನಾಗರಾಜ್ ಮತ್ತು ಬೆಟ್ಟೇಗೌಡ ಅವರನ್ನು ಪದಚ್ಯುತಗೊಳಿಸಿದಾಗ ಮೂರನೇ ಎರಡರಷ್ಟು ಬಹುಮತ ಪಾಲಿಸದೆ ಸರಳ ಬಹುಮತವನ್ನು ಪರಿಗಣಿಸಲಾಗಿತ್ತು. ನಂತರ ಆ ಎರಡು ಹುದ್ದೆಗೆ ಚುನಾವಣೆ ನಡೆಸುವ ಮೂಲಕ ಬೇರೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈಗ ಸಂಘದ ನಿರ್ದೇಶಕರಾದ ಅ.ದೇವೇಗೌಡ, ಡಿ.ಎನ್.ಬೆಟ್ಟೇಗೌಡ, ಪ್ರೊ.ಎಂ.ನಾಗರಾಜ್ ಸೇರಿದಂತೆ 19 ಮಂದಿ ನಿರ್ದೆಶಕರು ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ, ಉಪಾಧ್ಯಕ್ಷರಾದ ಪ್ರಸನ್ನ, ಸಿ.ಎನ್.ಶಶಿಕಿರಣ, ಪ್ರಧಾನಕಾರ್ಯದರ್ಶಿ ಉಲ್ಲೂರು ಸಿ.ಮಂಜುನಾಥ್, ಖಜಾಂಚಿ ಬಿ.ಸಿ.ಕೆ.ಕಾಳೇಗೌಡ ವಿರುದ್ಧ ಅವಿಶ್ವಾಸ ಮಂಡನೆಯ ನೋಟಿಸನ್ನು ಡಿ.27ರಂದು ನೀಡಿದ್ದಾರೆ.

ಸರಳ ಬಹುಮತದ ಮೂಲಕ ಅವಿಶ್ವಾಸ ನಿರ್ಣಯ ತರಲು ಕನಿಷ್ಠ 18 ಮಂದಿ ನಿರ್ದೇಶಕರ ಸಹಿ ಅಗತ್ಯ. ಆದರೆ, ಈಗ 19 ಮಂದಿ ಸಹಿ ಹಾಕಿರುವುದರಿಂದ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಕರೆಯುವ ಅಗತ್ಯ ಉಂಟಾಗಲಿದೆ. ಏಳು ದಿನಗಳ ಒಳಗಾಗಿ ಸಂಘದ ಕಾರ್ಯಕಾರಿ ಸಮಿತಿಯ ವಿಶೇಷ ಸಭೆ ಕರೆದು ಅವಿಶ್ವಾಸ ಮಂಡನೆಗೆ ಅವಕಾಶ ನೀಡಬೇಕೆಂಬ ಆಗ್ರಹವನ್ನು ಮಾಡುತ್ತಿದ್ದಾರೆ. ಅವಿಶ್ವಾಸಮಂಡನೆಗೆ ನೀಡಿರುವ ಕಾರಣವೆಂದರೆ ಸಂಘದ ಕಾರ್ಯನಿರ್ವಹಣೆಯಲ್ಲಿ ವಿಫಲರಾಗಿ ನೀತಿ-ನಿಯಮಗಳನ್ನು ತೂರಿ ವಿಶ್ವಾಸವನ್ನು ಸಂಘದ ಹಾಲಿ ಪದಾಧಿಕಾರಿಗಳು ಕಳೆದುಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin