ಒಕ್ಕಲಿಗ ಸಮುದಾಯಕ್ಕೆ ಬಲ ತುಂಬಲು ನಾನು ಬದ್ಧನಾಗಿದ್ದೇನೆ : ಡಿಕೆಶಿ

Spread the love

dk

ಮಳವಳ್ಳಿ, ಅ.27- ಮೀಸಲು ಕ್ಷೇತ್ರವಾದ ಮಳವಳ್ಳಿ ತಾಲೂಕಿನಲ್ಲಿ ಒಕ್ಕಲಿಗ ಸಮುದಾಯ ರಾಜಕೀಯವಾಗಿ ಅನುಭವಿಸುತ್ತಿರುವ ನೋವನ್ನು ನೀಗಿಸುವ ಮೂಲಕ ಈ ವರ್ಗಕ್ಕೆ ಬಲ ತುಂಬಲು ನಾನು ಬದ್ಧನಾಗಿದ್ದೇನೆ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಒಕ್ಕಲಿಗರ ಸಂಘದ ತಾಲೂಕು ಶಾಖೆ ಪಟ್ಟಣದಲ್ಲಿ ಆಯೋಜಿಸಿದ್ದ ಸಂಘದ ಬೆಳ್ಳಿಹಬ್ಬದ ಕಾರ್ಯಕ್ರಮ, ನೂತನ ಕಟ್ಟಡ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕ್ಷೇತ್ರದಲ್ಲಿ ದಿ. ಎಂ.ವಿ.ಚಂದ್ರಶೇಖರಮೂರ್ತಿ, ಕೆ.ಎನ್.ನಾಗೇಗೌಡ, ಹಾಗೂ ಪ್ರಸ್ತುತ ಮರಿತಿಬ್ಬೇಗೌಡರಂತಹ ಕೆಲವೇ ನಾಯಕರಿಗೆ ಅವಕಾಶ ಸಿಕ್ಕಿದ್ದು ಬಿಟ್ಟರೆ ರಾಜಕೀಯವಾಗಿ ಈ ವರ್ಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಇದರಿಂದಾಗಿ ತಾಲೂಕಿನಲ್ಲಿ ಸಮುದಾಯ ಸಾಕಷ್ಟು ನೋವು-ಅನ್ಯಾಯ ಅನುಭವಿಸುವಂತಾಗಿದೆ ಎಂದು ಹೇಳಿದರು. ಯಾವುದೇ ಸಚಿವ, ಶಾಸಕರಾದರೂ ಸರಿ ಒಂದು ಜತಿಗೆ ಸೀಮಿತವಾಗಿ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದರು.ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮಳವಳ್ಳಿ ಕೆರೆಯನ್ನಂತೂ ಆಕರ್ಷಕವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಅಭಿವೃದ್ಧಿ ಯೋಜನೆಗಳನ್ನು ಬಳಸಿಕೊಂಡು ಒಕ್ಕಲಿಗ ಸಮುದಾಯ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಾಲೂಕು ಒಕ್ಕಲಿಗ ಸಮುದಾಯ ಒಗ್ಗಟ್ಟಿನಿಂದ ಕೆಲಸ ಮಾಡಿ ಇಂತಹ ಬೃಹತ್ ಸಮಾವೇಶ ನಡೆಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಪಕ್ಷಭೇದ ಮರೆತ ಈ ಸಮಾವೇಶ ನಾಡಿನ ಒಕ್ಕಲಿಗ ಸಮುದಾಯಕ್ಕೆ ಹೊಸ ಮಾದರಿಯಾಗಿದ್ದು, ಇದೇ ಒಗ್ಗಟ್ಟು ಕಾಪಾಡಿಕೊಂಡು ಸಂಘ ಹಾಗೂ ಸಮುದಾಯ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು. ದಿವ್ಯ ಸಾನಿಧ್ಯ ವಹಿಸಿದ್ದ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮಾಜದ ಪ್ರತಿಯೊಬ್ಬ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಎಲ್ಲ ಮುಖಂಡರು ಜನಪ್ರತಿನಿಧಿಗಳದ್ದಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಕರೆ ನೀಡಿದರು.ಆದಿಚುಂಚನಗಿರಿ ಕೊಮ್ಮೇರಹಳ್ಳಿ ಮಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ  ಅಪ್ಪಾಜಿಗೌಡ, ತಾಲೂಕು ಅಧ್ಯಕ್ಷ ಎ.ಬಿ.ಬಸವರಾಜು ಮತ್ತಿತರರಿದ್ದರು.

 

► Follow us on –  Facebook / Twitter  / Google+

Sri Raghav

Admin