ಒಡೆದ ಮನೆಯಾಗಿರುವ ಎಸ್ಪಿ : ಪಕ್ಷದಿಂದ ಐವರು ಮುಖಂಡರ ಉಚ್ಚಾಟನೆ
ಲಕ್ನೋ, ಮೇ 8- ಒಡೆದ ಮನೆಯಾಗಿರುವ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ವಿಭಜನೆಯತ್ತ ಸಾಗಿರುವಾಗಲೇ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಪಕ್ಷದ ಐವರು ಮುಖಂಡರನ್ನು ಉಚ್ಛಾಟಿಸಿದ್ದಾರೆ. ಬಂಡಾಯದ ಕಹಳೆ ಮೊಳಗಿಸಿರುವ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ರ ಪರಮಾಪ್ತ ದೀಪಕ್ ಮಿಶ್ರಾ ಸಹ ಉಚ್ಛಾಟಿತರಲ್ಲಿ ಸೇರಿದ್ದಾರೆ. ಇದರೊಂದಿಗೆ ಪಕ್ಷವು ತೇಪೆ ಹಾಕಲು ಸಾಧ್ಯವಿಲ್ಲದ ಮಟ್ಟಿಗೆ ಹರಿದು ಹಂಚಿ ಹೋಗುವುದು ಬಹುತೇಕ ನಿಶ್ಚಿತವಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಮೇಲೆ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಉತ್ತಮ್ ನರೇಶ್ ತಿಳಿಸಿದ್ದಾರ.
ಮುಲಾಯಂರ ಸಹೋದರ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ತಾವು ಸಮಾಜವಾದಿ ಸೆಕ್ಯೂಲರ್ ಮೋರ್ಚಾ ಎಸ್ಎಸ್ಎಂ) ಎಂಬ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದರೊಂದಿಗೆ ದೇಶದ ಅತಿದೊಡ್ಡ ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷದ ಅಸ್ತಿತ್ವ ಇಬ್ಭಾಗವಾದಂತಾಗಿದೆ. ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಅಖಿಲೇಶ್ ಬಣದ ವಿರುದ್ಧ ಇತ್ತೀಚಿನ ದಿನಗಳಿಂದಲೂ ಧನಿ ಎತ್ತುತ್ತಲೇ ಇರುವ ಶಿವಪಾಲ್, ಎಸ್ಎಸ್ಎಂ ಒಂದೇ ವೇದಿಕೆಯಡಿ ಎಲ್ಲ ಸಮಾಜವಾದಿಗಳನ್ನು ಒಗ್ಗೂಡಿಸಲಿದೆ ಎಂದು ಪ್ರಕಟಿಸಿದ್ದಾರೆ. ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಅಖಿಲೇಶ್ ಅವರಿಗೆ ಈ ಬೆಳವಣಿಗೆ ಬಲವಾದ ಹೊಡೆತ ನೀಡಿದೆ.
< Eesanje News 24/7 ನ್ಯೂಸ್ ಆ್ಯಪ್ >