ಒಬಾಮಾ ಸಹಿ ಫೋರ್ಜರಿ ಮಾಡಿದ್ದ, ನಕಲಿ ನಾಸಾ ಉದ್ಯೋಗಿ ಈಗ ಪೊಲೀಸರ ಅತಿಥಿ
ಭೋಪಾಲ್, ಸೆ.25- ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಟೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ಉದ್ಯೋಗಿ ಎಂದು ಹೇಳಿಕೊಂಡು ಜನರಿಗೆ ಮಂಕುಬೂದಿ ಎರೆಚಿದ್ದ ಐನಾತಿ ವಂಚಕ ಯುವಕನೊಬ್ಬ ಈಗ ಮಧ್ಯಪ್ರದೇಶ ಪೊಲೀಸರ ಅತಿಥಿಯಾಗಿದ್ದಾನೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸಹಿಯನ್ನೂ ನಕಲು ಮಾಡಿರುವ ಗುರುತಿನ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನ್ಸರ್ಖಾನ್(20) ಬಂಧಿತ ಯುವಕ. 12ನೆ ತರಗತಿವರೆಗೆ ಮಾತ್ರ ಓದಿರುವ ಈತ ತಾನು ನಾಸಾದ ಉದ್ಯೋಗಿ. ತನಗೆ ವರ್ಷಕ್ಕೆ 1.8 ಕೋಟಿ ರೂ. ವೇತನ ಬರುತ್ತಿದ್ದು, ಸಂಸ್ಥೆಯ ಬಾಹ್ಯಾಕಾಶ ಮತ್ತು ಆಹಾರ ಯೋಜನೆಯಲ್ಲಿ ತಾನು ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡು ತಿರುಗುತ್ತಿದ್ದ. ಇದನ್ನು ನಂಬಿಸಲು ಅಮೆರಿಕ ಅಧ್ಯಕ್ಷರ ಸಹಿಯನ್ನೇ ಪೋರ್ಜರಿ ಮಾಡಿರುವ ನಕಲಿ ಗುರುತು ಪತ್ರವನ್ನು ತೋರಿಸಿ ಢೋಂಗಿ ಆಟವಾಡಿದ್ದ.
ತನ್ನ ಗೌರವಾರ್ಥ ಸನ್ಮಾನ ಸಮಾರಂಭಕ್ಕೆ ಕಮಲಾಪುರ ಜಿಲ್ಲಾಡಳಿತದ ಉನ್ನತಾಧಿಕಾರಿಗಳನ್ನೂ ಕೂಡ ಆಹ್ವಾನಿಸಿದ್ದ. ಆದರೆ, ಐನಾತಿ ಅನ್ಸರ್ ವರ್ತನೆ ಬಗ್ಗೆ ಅನುಮಾನಗೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಇದು ಕಟ್ಟುಕತೆ ಎಂಬುದು ಗೊತ್ತಾಯಿತು. ಈಗ ಈತ ಪೊಲೀಸರ ವಶದಲ್ಲಿದ್ದಾನೆ.