ಕಂಬಳ ನಿಷೇಧದ ತೆರವು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು,ಜ.30-ಕಂಬಳ ಕ್ರೀಡೆ ನಿಷೇಧದ ತೆರವು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ಕಂಬಳ ನಿಷೇಧ ತೆರವುಗೊಳಿಸುವಂತೆ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿಯವರ ಪೀಠ ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಏನು ತೀರ್ಮಾನವಾಗುತ್ತದೆಯೋ ಕಾದು ನೋಡೋಣ ಎಂದು ಎರಡು ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದರು. ವಿಚಾರಣೆ ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಮುಖ್ಯ ನ್ಯಾಯಮೂರ್ತಿಗಳು ಕೋಣದ ಬದಲು ನಿಮ್ಮನ್ನೇ ಓಡಿಸಬೇಕು ಎಂದು ಹೇಳಿದರು. ಕೋಣಗಳನ್ನು ಓಡಿಸುವಾಗ ಮೆಣಸಿನಪುಡಿ ಹಚ್ಚಿ ಓಡಿಸಲಾಗುತ್ತದೆ. ಅವುಗಳಿಗೆ ಹಿಂಸೆಯಾಗುತ್ತದೆ ಎಂದು ಪ್ರತಿವಾದಿಗಳು ಆರೋಪ ಮಾಡಿದರು. ಈ ಸಂದರ್ಭದಲ್ಲಿ ಸುಪ್ರೀಂ ಆದೇಶದವರೆಗೆ ಕಾಯೋಣ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಚೆನ್ನೈನ ಮರಿನಾ ಬೀಚ್ನಲ್ಲಿ ನಡೆದ ಜಲ್ಲಿಕಟ್ಟು ಪರ ಪ್ರತಿಭಟನೆಯಲ್ಲಿ ತಮಿಳುನಾಡು ಜನತೆ ಅವರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅದು ಕೇವಲ ಜಲ್ಲಿಕಟ್ಟು ವಿಷಯವಲ್ಲ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಬಗ್ಗೆ ಕಳವಳ:
ಪಾವಗಡಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕುಡಿಯುವ ನೀರಿಗಾಗಿ ಎಲ್ಲೆಡೆ ಬೋರ್ವೆಲ್ಗಳನ್ನು ಕೊರೆಯಲಾಗಿದೆ. ಅಂತರ್ಜಲ ಸಮಸ್ಯೆ ತೀವ್ರಗೊಂಡಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದೇನಾಗುತ್ತದೆಯೋ ಎಂಬ ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಪ್ರಾಣಿ ಹಿಂಸೆ ನಿರ್ಬಂಧಕ ಕಾಯ್ದೆಗೆ ತಿದ್ದುಪಡಿ ತಂದು ಕಂಬಳ ಮತ್ತು ಎತ್ತಿನ ಗಾಡಿ ಓಟವನ್ನು ಕಾಯ್ದೆಯಿಂದ ಹೊರಗಿಡಲು ಶನಿವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಫೆ.6ರಿಂದ ಆರಂಭವಾಗುವ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ನಿರ್ಣಯಿಸಲಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >