ಕಣಿವೆಯಲ್ಲಿ ಭಯೋತ್ಪಾದಕರ ಅಟ್ಟಹಾಸ : ಹುತಾತ್ಮರಾದ ಇಬ್ಬರು ಯೋಧರು

2Kiled

ಜಮ್ಮು, ನ.29-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ನಗರೋಟಾ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಮೇಜರ್ ಮತ್ತು ಒಬ್ಬ ಯೋಧ ಹುತಾತ್ಮರಾಗಿ ಅನೇಕರು ಗಾಯಗೊಂಡಿದ್ದಾರೆ. ಇದೇ ವೇಳೆ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಇನ್ನೊಂದು ಭೀಕರ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಈ ಎನ್‍ಕೌಂಟರ್‍ನಲ್ಲಿ ಕೆಲವು ಯೋಧರೂ ಗಾಯಗೊಂಡಿದ್ದಾರೆ. ಈ ಘಟನೆಗಳ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.

ಜಮ್ಮುವಿನಿಂದ 20 ಕಿ.ಮೀ.ದೂರದಲ್ಲಿರುವ ನಗರೋಟಾದ ಆರ್ಮಿ ಅರ್ಟಿಲರಿ ಯೂನಿಟ್ ಶಿಬಿರದ ಮೇಲೆ ಇಂದು ಮುಂಜಾನೆ 5.30ರಲ್ಲಿ ಆತ್ಮಾಹುತಿ ದಳದ ಮೂವರು ಭಯೋತ್ಪಾದಕರು ಗ್ರೆನೇಡ್‍ಗಳನ್ನು ಎಸೆದು ನಂತರ ಗುಂಡಿನ ಸುರಿಮಳೆಗೈದರು. ಈ ಆಕ್ರಮಣದಲ್ಲಿ ಆರ್ಮಿ ಮೇಜರ್ ಮತ್ತು ಯೋಧನೊಬ್ಬ ಬಲಿಯಾದರು. ತಕ್ಷಣ ಎಚ್ಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದ ಸೇನಾಪಡೆಗಳು ಪ್ರತಿದಾಳಿ ನಡೆಸಿದಾಗ ಉಗ್ರರು ಅಧಿಕಾರಿಗಳ ಭೋಜನಶಾಲೆಯಲ್ಲಿ ಅಡಗಿ ಕುಳಿತು ಅಲ್ಲಿಂದಲೇ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಭೀಕರ ಎನ್‍ಕೌಂಟರ್ ನಡೆಯಿತು. ಈ ದಾಳಿ ನಂತರ ಇಡೀ ಪ್ರದೇಶವನ್ನು ಸೇನೆ ಸುತ್ತುವರೆಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಸೇನಾ ನೆಲೆಗೆ ತೀರಾ ಹತ್ತಿರದಲ್ಲಿರುವ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜಮ್ಮು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಮ್ಮುವಿನ ಉಪ ಪೊಲೀಸ್ ಆಯುಕ್ತ ಸೀಮರನ್‍ದೀಪ್ ಸಿಂಗ್ ತಿಳಿಸಿದ್ದಾರೆ. ನಗರೋಟಾ, ಗ್ರೇಟರ್ ಜಮ್ಮು ವಲಯದಲ್ಲಿ ಗಡಿ ರಕ್ಷಣೆ ಮತ್ತು ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆ ನಡೆಸುವ ಮಹತ್ವದ ಸೇನಾ ನೆಲೆಯಾಗಿದೆ. ಇಲ್ಲಿ ಸೇನೆಯ 16ನೇ ದಳದ ಶಿಬಿರವೂ ಇದೆ.

ಗಡಿಯಲ್ಲೂ ಎನ್‍ಕೌಂಟರ್:

ಇನ್ನೊಂದು ಪ್ರಕರಣದಲ್ಲಿ ಕಾಶ್ಮೀರದ ಸಾಂಬಾ ವಲಯದ ರಾಮ್‍ಗಢ್ ಬಳಿ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸಿದ ಮೂವರು ಭಯೋತ್ಪಾದಕರನ್ನು ಬಿಎಸ್‍ಎಫ್ ಯೋಧರು ಹೊಡೆದುರುಳಿಸಿದ್ದಾರೆ.  ಚಂಬಿಲಿಯಾಲ್-ರಾಮ್‍ಗಢ್‍ನಲ್ಲಿ ಮುಂಜಾನೆ ಶಂಕಿತ ಉಗ್ರಗಾಮಿಗಳ ಚಲನವಲನದ ಮಾಹಿತಿ ಮೇರೆಗೆ ಆ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾಗ ಅವಿತು ಕುಳಿತ್ತಿದ್ದ ಉಗ್ರರು ದಾಳಿ ನಡೆಸಿದರು. ಆಗ ಗುಂಡಿನ ಚಕಮಕಿ ನಡೆಯಿತು. ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಹಿರಿಯ ಬಿಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ ಉಗ್ರಗಾಮಿಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಬಳಿ ಪತ್ತೆಯಾಗಿರುವ ಸಾಧನ-ಸಲಕರಣೆಗಳಿಂದ ಅವರು ಪಾಕ್ ಮೂಲದ ಭಯೋತ್ಪಾದಕರು ಎಂಬುದು ಖಚಿತವಾಗಿದೆ. ಗಡಿಯಲ್ಲಿ ಅಡಗಿರಬಹುದಾದ ಇತರ ಉಗ್ರರ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin