ಕತ್ತೆಗಳಿಗೆ ಸನ್ಮಾನಿಸಿ ವಿಭಿನ್ನವಾಗಿನ ಹೊಸ ವರ್ಷ ಆಚರಿಸಿದ ವಾಟಾಳ್

Vatal-NAgraj-041

ಬೆಂಗಳೂರು, ಜ.1- ಸದಾ ಒಂದಿಲ್ಲೊಂದು ಚಳವಳಿಯಲ್ಲಿ ತೊಡಗಿಕೊಳ್ಳುವ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದರು.  ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕತ್ತೆಗಳಿಗೆ ಮೈಸೂರು ಪೇಟ ತೊಡಿಸಿ ಹಾರ ಹಾಕಿ ಸನ್ಮಾನಿಸುವ ಮೂಲಕ ಹೊಸ ವರ್ಷಾಚರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ಹೋಗಿ ಪ್ರಧಾನಿಯವರನ್ನು ಭೇಟಿ ಮಾಡಿ ಬರ ಪರಿಸ್ಥಿತಿ ವಿವರಿಸಿ ಬಂದಿದ್ದಾರೆ. ಆದರೆ, ಮಹದಾಯಿ ಹೋರಾಟದ ಬಗ್ಗೆ ಮಾತನಾಡಿಲ್ಲ. ಈ ಹಿನ್ನೆಲೆಯಲ್ಲಿ ಫೆ.18ರಂದು ರಾಜ್ಯ ಬಂದ್‍ಗೆ ಕರೆ ನೀಡಲಾಗುವುದು ಎಂದು ಹೇಳಿದರು.

ಈ ವರ್ಷ ವಿವಿಧ ರೀತಿಯ ನೂರು ಚಳವಳಿಯನ್ನು ಹಮ್ಮಿಕೊಳ್ಳುತ್ತೇವೆ. ಪ್ರಥಮವಾಗಿ ಇಂದು ಕತ್ತೆ ಚಳವಳಿ ಪ್ರಾರಂಭ ಮಾಡಿದ್ದೇವೆ. ಕತ್ತೆಗಳ ಅಭಿವೃದ್ಧಿಗೆ ಕತ್ತೆ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕೆಂದು ಹೋರಾಟ ಮಾಡುತ್ತೇವೆ ಎಂದು ವ್ಯಂಗ್ಯವಾಡಿದರು. ಈ ವರ್ಷವಾದರೂ ಸರ್ಕಾರಗಳಿಗೆ ಬುದ್ಧಿ ಬಂದು ರಾಜ್ಯದ ಜನರು, ರೈತರ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕು ಎಂದು ವಾಟಾಳ್ ಆಗ್ರಹಿಸಿದರು. ಅನೇಕ ರೀತಿಯ ಹೋರಾಟಗಳನ್ನು ಮಾಡುವ ಮೂಲಕ ಸಮಸ್ಯೆಗಳನ್ನು ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ. ಆದರೂ ಯಾವುದೂ ಸರಿಹೋಗುತ್ತಿಲ್ಲ. ನಾವು ಸುಮ್ಮನೆ ಕೂರುವುದಿಲ್ಲ. ಉಸಿರಿರುವವರೆಗೂ ಕನ್ನಡದ ನೆಲ-ಜಲ-ಭಾಷೆ ಪರವಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ತಿಳಿಸಿದರು.
Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin