ಕನ್ನಡ ಚಲನಚಿತ್ರ ಕಪ್’ಗೆ ಸಿಎಂ ಚಾಲನೆ
ಬೆಂಗಳೂರು, ಸೆ.8- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಮತ್ತು ನಾಳೆ ಸ್ಯಾಂಡಲ್ವುಡ್ ಕಲಾವಿದರ ಕ್ರಿಕೆಟ್ ಕಲರವ ಮೇಳೈಸಿದೆ. ಕಿಚ್ಚ ಸುದೀಪ್ ಉಸ್ತುವಾರಿಯಲ್ಲಿ ನಡೆಯಲಿರುವ ಕನ್ನಡ ಚಲನಚಿತ್ರ ಕಪ್ಗಾಗಿ ಈ ತಂಡಗಳು 6 ಪಂದ್ಯಗಳಲ್ಲಿ ತಮ್ಮ ಬಲಾಬಲ ಪ್ರದರ್ಶಿಸಲಿದ್ದು, ಕಿಚ್ಚ ಸುದೀಪ್ ಸೇರಿದಂತೆ, ನಾಯಕ ನಟರಾದ ಶಿವಣ್ಣ, ಉಪೇಂದ್ರ, ಗಣೇಶ್, ಪುನೀತ್ ರಾಜ್ ಕುಮಾರ್, ಯಶ್ ನಾಯಕತ್ವದಲ್ಲಿ ಈ ತಂಡಗಳು ಆಟವಾಡುತ್ತಿರುವುದು ವಿಶೇಷ.
ಈ 6 ನಟರ ಪ್ರತಿ ತಂಡದಲ್ಲೂ ಒಬ್ಬರು ಅಂತಾರಾಷ್ಟ್ರೀಯ ಮಟ್ಟದ ಆಟಗಾರರಾದ ವಿರೇಂದ್ರ ಸೆಹ್ವಾಗ್, ದಕ್ಷಿಣ ಆಫ್ರಿಕಾದ ಹರ್ಷಗಿಬ್ಸ್, ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್, ನ್ಯೂಜಿಲೆಂಡ್ನ ಓವೈಸಾ ಶಾ, ಆಸ್ಟ್ರೇಲಿಯಾ ದ ಆ್ಯಡಂ ಗಿಲ್ಕ್ರಿಸ್ಟ್ ಸೇರಿದಂತೆ ಹಲವರು ಆಡಲಿದ್ದಾರೆ. ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರರು ಹಾಗೂ ಚಲನ ಚಿತ್ರ ರಂಗದ ನಟರು , ತಂತ್ರಜ್ಞರು, ಸೇರಿದಂತೆ ಹಲವರು ತಂಡಗಳಲ್ಲಿ ತಮ್ಮ ಕ್ರೀಡಾ ಕೌಶಲ್ಯ ಮೆರೆಯಲಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಈ ಪಂದ್ಯಾವಳಿಗೆ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಚಾಲನೆ ನೀಡಿದರು. ಇಂದು 4 ಪಂದ್ಯಗಳು ನಡೆಯಲಿದ್ದು, ನಾಳೆ ಎರಡು ಪಂದ್ಯ ಹಾಗೂ ಫೈನಲ್ಸ್ನಲ್ಲಿ ಗೆದ್ದ ತಂಡ ಕಪ್ ಮುಡಿಗೇರಿಸಿ ಕೊಳ್ಳಲಿದೆ. ಪಂದ್ಯಾವಳಿ ಯಿಂದ ಸಂಗ್ರಹಿತವಾದ ಟಿಕೆಟ್ ಹಣವನ್ನು ಕೊಡಗಿನ ನಿರಾಶ್ರಿತರಿಗೆ ನೀಡಲಾಗುತ್ತಿದ್ದು, ಕನಿಷ್ಠ 50 ರೂ.ನಿಂದ 5000 ರೂ.ವರೆಗೂ ಟಿಕೆಟ್ ದರ ನಿಗಧಿಗೊಳಿಸಲಾಗಿದೆ.
ಕಳೆದ ಒಂದು ವಾರದಿಂದ ನಟರ ತಾಲೀಮು ನಡೆಸುತ್ತಿದ್ದು, ಇಂದು ಹಣಾಹಣಿಗೆ ಇಳಿದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ನಿರ್ಮಾಪಕರು, ನಿರ್ದೇಶಕರು, ಹಂಚಿಕೆದಾರರು, ಪ್ರದರ್ಶಕರು ಸೇರಿದಂತೆ ಎಲ್ಲಾ ವಿಭಾಗದ ತಂತ್ರಜ್ಞರು ಕ್ರೀಡಾಂಗಣದಲ್ಲಿ ಜಮಾಯಿಸಿದ್ದು, ಇದರೊಂದಿಗೆ ಕ್ರೀಡಾ ಹಾಗೂ ಕಲಾ ಪ್ರೇಮಿಗಳ ಜನಜಂಗುಳಿ ತುಂಬಿತ್ತು.