ಕನ್ನಡ ಚಿತ್ರರಂಗಕ್ಕೆ ಹಾಲಿವುಡ್ ಟಚ್
ಕನ್ನಡ ಚಿತ್ರರಂಗಕ್ಕೆ ಹಾಲಿವುಡ್ ಟಚ್ ಕೊಟ್ಟ ನಿರ್ದೇಶಕ, ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಮೂರು ಸಿನಿಮಾಗಳಿಗೆ ಏಕಕಾಲದಲ್ಲಿ ಅದೂ ಒಂದೇ ಸ್ಥಳದಲ್ಲಿ ಮುಹೂರ್ತಕ್ಕೆ ಚಾಲನೆ ನೀಡುವ ಮೂಲಕ ಹೊಸ ದಾಖಲೆಯನ್ನೇ ಬರೆದಿವೆ. ಇನ್ನೊಂದು ವಿಶೇಷವೆಂದರೆ, ರಾಜೇಂದ್ರ ಪೊನ್ನಪ್ಪ, ದಶರಥ ಮತ್ತು ಬಕಾಸುರ ಎಂಬ ಹೆಸರಿನ ಈ ಮೂರು ಸಿನಿಮಾಗಳಲ್ಲಿ, ರಾಜೇಂದ್ರ ಪೊನ್ನಪ್ಪ ಚಿತ್ರಕ್ಕೆ ಸ್ವತಃ ರವಿಚಂದ್ರನ್ ಅವರೇ ಕತೆ, ಚಿತ್ರಕತೆ ಬರೆದು ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.`ದೃಶ್ಯ’ ಸಿನಿಮಾ ನೋಡಿದವರಿಗೆ ರಾಜೇಂದ್ರ ಪೊನ್ನಪ್ಪ ಹೆಸರು ನೆನಪಿರಬೇಕು, ಏಕೆಂದರೆ ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ದೃಶ್ಯಗಳನ್ನು ಮರುಸೃಷ್ಠಿಸಿದ್ದ ಕಥಾನಾಯಕ ರಾಜೇಂದ್ರ ಪೊನ್ನಪ್ಪ. ಈಗ ರವಿಚಂದ್ರನ್ ಮತ್ತೆ ಅದೇ ರಾಜೇಂದ್ರ ಪೊನ್ನಪ್ಪ ಆಗಿ ಮತ್ತೊಮ್ಮೆ ತೆರೆಮೇಲೆ ಬರುತ್ತಿದ್ದಾರೆ. ರಾಜೇಂದ್ರ ಪೊನ್ನಪ್ಪ ಚಿತ್ರಕ್ಕೆ ರವಿಚಂದ್ರನ್ ಅವರೇ ಕತೆ, ಚಿತ್ರಕತೆ ಬರೆದು ತಮ್ಮ ಈಶ್ವರಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮತ್ತು ನಿರ್ದೇಶನವನ್ನು ಮಾಡುತ್ತಿದ್ದಾರೆ.
ರಾಜೇಂದ್ರ ಪೊನ್ನಪ್ಪ ಚಿತ್ರಕ್ಕೆ ದಿ ಕ್ರಿಮಿನಲ್ ಲಾಯರ್ ಎನ್ನೋ ಅಡಿಬರಹವಿದ್ದು, ಈ ಚಿತ್ರದಲ್ಲಿ ರವಿಚಂದ್ರನ್ ಒಬ್ಬ ಕ್ರಿಮಿನಲ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿ.ಎಸ್.ವಿ. ಸೀತಾರಾಮ್ ಅವರ ಛಾಯಾಗ್ರಹಣ, ಕೆ.ಕಲ್ಯಾಣ್ ಅವರ ಸಾಹಿತ್ಯ, ಗೌತಮ್ ಶ್ರೀವತ್ಸ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಉಳಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಗಳು ನಡೆಯುತ್ತಿದೆ. ಇನ್ನು ರವಿಚಂದ್ರನ್ ಅಭಿನಯದ ಎರಡನೇ ಸಿನಿಮಾ ಹೆಸರು ದಶರಥ. ಇದೇನು ಪೌರಾಣಿಕ ಸಿನಿಮಾನಾ.., ಎಂಬ ಪ್ರಶ್ನೆಗಳಿಗೆ ರವಿಚಂದ್ರನ್ ಅವರೊಂದಿಗೆ ಚಿತ್ರತಂಡ ಸ್ಪಷ್ಟನೆಗಳನ್ನು ನೀಡಿದೆ. ದಶರಥ ಎಂದ ಮಾತ್ರಕ್ಕೆ ಇದು ರಾಮಾಯಣಕ್ಕೆ ಸಂಬಂಧಿಸಿದ ಸಿನಿಮಾವಲ್ಲ ಎಂದಿರುವ ಚಿತ್ರತಂಡ, ಚಿತ್ರಕ್ಕೆ ನಾಟ್ ಫ್ರಮ್ ರಾಮಾಯಣ ಎಂಬ ಟ್ಯಾಗ್ಲೈನನ್ನು ಕೂಡ ನೀಡಿದೆ.
ಯುದ್ದಕಾಂಡ ಚಿತ್ರದಲ್ಲಿ ರವಿಚಂದ್ರನ್ ನಿರ್ವಹಿಸಿದ್ದ ಲಾಯರ್ ಪಾತ್ರದಿಂದ ಸ್ಫೂರ್ತಿಗೊಂಡ ಲೇಖಕ ಹಾಗೂ ಈ ಚಿತ್ರದ ನಿರ್ದೇಶಕ ಎಂ. ಎಸ್. ರಮೇಶ್ ಅವರು ರವಿಚಂದ್ರನ್ ಅವರನ್ನು ದಶರಥ ಸಿನಿಮಾದಲ್ಲಿ ಕ್ರಿಮಿನಲ್ ಲಾಯರ್ ಪಾತ್ರದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ತೋರಿಸುವ ಪ್ಲಾನ್ನಲ್ಲಿದ್ದಾರೆ. ಎಂಎಸ್ಆರ್ ಪ್ರೊಡಕ್ಷನ್ಸ್ ಬ್ಯಾನರ್ನಡಿಯಲ್ಲಿ ಎಂ.ಎಸ್.ರಮೇಶ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರವಿಚಂದ್ರನ್ ನಾಯಕನಾಗುವುದರೊಂದಿಗೆ, ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜಿಎಸ್ವಿ ಸೀತಾರಾಮ್ ಅವರ ಛಾಯಾಗ್ರಹಣವಿದೆ. ಉಳಿದಂತೆ ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ಬಳಗದ ಆಯ್ಕೆಗಳು ನಡೆಯುತ್ತಿದೆ. ರಾಮಾಯಣದ ದಶರಥನಿಗಿರುವಂತೆ ಈ ದಶರಥನಿಗೂ ಮೂವರು ಹೆಂಡತಿಯರಿರುತ್ತಾರಂತೆ. ಆ ಮೂವರು ಹೆಂಡತಿಯರು ಯಾರು ಎಂಬ ಗುಟ್ಟನ್ನು ಮಾತ್ರ ಚಿತ್ರತಂಡ ಬಿಟ್ಟುಕೊಡಲಿಲ್ಲ.
ಬಕಾಸುರ ಇದು ರವಿಚಂದ್ರನ್ ಅವರ ಸೆಟ್ಟೇರಿದ ಮೂರನೇ ಸಿನಿಮಾ. ಕರ್ವ ಎಂಬ ಹಾರರ್, ಥ್ರಿಲ್ಲರ್ ಸಿನಿಮಾದ ಮೂಲಕ ಹೆಸರು ಮಾಡಿದ್ದ ರಾಕ್ಸ್ಟಾರ್ (ಆರ್.ಜೆ)ರೋಹಿತ್ ನಿರ್ಮಾಣದ ಈ ಚಿತ್ರದಲ್ಲಿ ರವಿಚಂದ್ರನ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನೊಬ್ಬ ನಾಯಕ ನಟನಾಗಿ ಆರ್.ಜೆ. ರೋಹಿತ್ ರವಿಚಂದ್ರನ್ಗೆ ಜೊತೆಯಾಗಲಿದ್ದಾರೆ. ಹಣದ ಹಿಂದೆ ಬೀಳುವ ಹುಡುಗರ ಕಥೆಯಿರುವ ಈ ಚಿತ್ರ ಕೂಡ ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯಲ್ಲಿದೆ. ಈ ಚಿತ್ರದಲ್ಲಿ ಯಾವುದೇ ಹಾಡುಗಳಿರುವುದಿಲ್ಲ. ಮನರಂಜನೆಗೆ ಮೊದಲ ಆದ್ಯತೆಯಿದ್ದು, ಜೊತೆಗೆ ಒಳ್ಳೆಯ ಸಂದೇಶವೂ ಚಿತ್ರದಲ್ಲಿದೆ. ಪದ್ಮಾವತಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಟ ಆರ್.ಜೆ. ರೋಹಿತ್ ಅವರೇ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕರ್ವ ಖ್ಯಾತಿಯ ಯುವ ನಿರ್ದೇಶಕ ನವನೀತ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಒಟ್ಟಾರೆ ಸ್ಯಾಂಡಲ್ವುಡ್ನ ಕನಸುಗಾರನ ಮೂರು ಚಿತ್ರಗಳು ಒಂದೇ ದಿನ ಚಾಲನೆ ಪಡೆದಿರುವುದು ಸಂತೋಷವೇ ಸರಿ. ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನ ಪಾತ್ರಕ್ಕೂ ಸೈ ಹಾಗೂ ಪೋಷಕ ಪಾತ್ರಕ್ಕೂ ಜೈ ಎಂದಿದ್ದಾರೆ. ಮತ್ತಷ್ಟು ಉತ್ತಮ ಚಿತ್ರಗಳು ಕ್ರೇಜಿ ಬತ್ತಳಿಕೆಯಲ್ಲಿ ಸೇರಲಿ ಎಂಬ ಆಶಯದೊಂದಿಗೆ ಚಿತ್ರರಂಗ ಹಾಗೂ ರಾಜಕೀಯ ವಲಯದ ಹಲವಾರು ಗಣ್ಯರು ಆಗಮಿಸಿ ರವಿಚಂದ್ರನ್ಗೆ ಶುಭವನ್ನು ಕೋರಿದರು.
< Eesanje News 24/7 ನ್ಯೂಸ್ ಆ್ಯಪ್ >