ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗೆ ಅಹೋರಾತ್ರಿ ಧರಣಿ, ಭಾರೀ ಬೆಂಬಲ

Kappattagudda

ಗದಗ, ಫೆ.15-ಕಪ್ಪತ ಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗೆ ಆಗ್ರಹಿಸಿ ತೋಂಟದ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಇಂದು 3ನೇ ದಿನಕ್ಕೆ ಕಾಲಿರಿಸಿದ್ದು, ಸಂಜೆವೇಳೆಗೆ ಸರ್ಕಾರ ಸ್ಪಂಧಿಸದಿದ್ದರೆ ಮುಂದೆ ಉಗ್ರ ಹೋರಾಟ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಗುವುದು.ಮಠಾಧಿಪತಿಗಳು, ಹಿರಿಯ ಸಾಹಿತಿ, ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಪರಿಸರ ಪ್ರೇಮಿಗಳು ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಜಿಲ್ಲಾ ವಕೀಲರ ಸಂಘದವರು ಇಂದು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಬಸವಯೋಗ ಸಮಿತಿ ಇಂದು ಯೋಗ ಶಿಬಿರ ನಡೆಸಿಕೊಟ್ಟರು. ಮಹಿಳೆಯರು ಸೇರಿದಂತೆ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ, ರವಿಕೃಷ್ಣಾರೆಡ್ಡಿ, ಜನಸಂಗ್ರಾಮದ ಮುಖಂಡರಾದ ಪ್ರಭುಗೌಡ ಪಾಟೀಲ, ಪ್ರತಿಮಾ ನಾಯಕ ಸೇರಿದಂತೆ ಇನ್ನಿತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳದಲ್ಲೇ ವೈದ್ಯರು, ಪೊಲೀಸ್ ಸಿಬ್ಬಂದಿಗಳು ಠಿಕಾಣಿ ಹೂಡಿದ್ದು, ಆ್ಯಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿದೆ.ಕಳೆದ 3 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಗಮನಹರಿಸದೇ ಇರುವುದು ವಿಪರ್ಯಾಸ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋರಾಟಗಾರರು ಅಸ್ವಸ್ಥ: ಧರಣಿ ನಿರತ ಹೋರಾಟಗಾರರಾದ ನಿಂಗರಾಜ್ ನಿಡವಣಿ, ಪ್ರಭುಗೌಡ, ಪಾಟೀಲ, ಪ್ರತಿಮಾ ನಾಯಕ್, ಎಸ್‍ಪಿಎಸ್‍ನ ಎಸ್.ಆರ್.ಹಿರೇಮಠ್ ಅವರು ಅಸ್ವಸ್ಥಗೊಂಡಿದ್ದು ಸ್ಥಳದಲ್ಲೇ ಇದ್ದ ವೈದ್ಯರು ಅವರ ತಪಾಸಣೆ ನಡೆಸಿದರು.ದಲಿತ ಮುಖಂಡ ನಾರಾಯಣಸ್ವಾಮಿ ಅವರು ಇಂದಿನ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin