ಕಪ್ಪು ಕುಳಗಳ ಜೊತೆ ಕೈಮಿಲಾಯಿಸಿದ ಬ್ಯಾಂಕ್‍’ಗಳು : ಅಸಹಾಯಕ ಸಾರ್ವಜನಿಕರ ಆಕ್ರೋಶ

Note-Ban-Bank-Line

ಬೆಂಗಳೂರು, ಡಿ.8- ನೋಟ್ ಬ್ಯಾನ್ ನಿಷೇಧದ ಕ್ರಮವನ್ನು ದೇಶದ ಜನ ಮುಕ್ತವಾಗಿ ಸ್ವಾಗತಿಸಿದ್ದರು. ಆದರೆ, ಕಪ್ಪು ಕುಳಗಳ ಜತೆ ಬಹುತೇಕ ಬ್ಯಾಂಕ್‍ನವರೇ ಕೈ ಜೋಡಿಸಿ ಹಣ ವಿನಿಮಯ ಮಾಡಿಕೊಟ್ಟು ಸಾರ್ವಜನಿಕರಿಗೆ ಹಣ ಸಿಗದಂತೆ ಮಾಡಿರುವುದರಿಂದ ಆಕ್ರೋಶಗೊಂಡಿದ್ದಾರೆ.  ಬ್ಯಾಂಕ್‍ಗಳ ಮುಂದೆ ದಿನವಿಡೀ ನಿಂತರೂ 2000 ಪಡೆಯಲು ಸಾಧ್ಯವಾಗುತ್ತಿಲ್ಲ. ನೂರಾರು ರೂಲ್ಸ್‍ಗಳನ್ನು ಹೇಳುತ್ತಾರೆ. ಆದರೆ, ದೊಡ್ಡ ದೊಡ್ಡವರ ಜತೆ ಶಾಮೀಲಾಗಿ ಎಲ್ಲ ಹಣವನ್ನೂ ಬೇಕಾದವರಿಗೆ ಕೊಟ್ಟಿದ್ದಾರೆ. ನಾವು ಠೇವಣಿ ಇಟ್ಟ ಹಣವನ್ನು ಪಡೆಯಲು ದಿನಗಟ್ಟಲೆ ಕ್ಯೂ ನಿಲ್ಲಬೇಕು. ನಿಂತರೂ ಸಿಗುವುದು 2000, 4000 ಎಂದು ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಿದ್ದುದು ಹಲವೆಡೆ ಕಂಡುಬಂತು.

ಬ್ಯಾಂಕ್‍ನವರ ಸಹಕಾರವಿಲ್ಲದೆ ಅಪಾರ ಪ್ರಮಾಣದ ನೋಟುಗಳು ಬದಲಾವಣೆಯಾಗಲು ಸಾಧ್ಯವೇ ಇಲ್ಲ. ನಮ್ಮ ಹಣ ಸೇಫ್ ಆಗಿ ಇರುತ್ತದೆ. ಯಾವಾಗ ಬೇಕಾದರೂ ಸಿಗುತ್ತದೆ ಎಂದು ಅಂದುಕೊಂಡಿದ್ದರೆ ಎಲ್ಲ ಉಳ್ಳವರ ಪಾಲಾಗಿದೆ. ಇನ್ನೆಲ್ಲಿ ಕಪ್ಪು ಹಣ ಹೊರತರಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಬಂದಿತು.
ನೋಟು ನಿಷೇಧ ಮಾಡಿ ಒಂದು ತಿಂಗಳಾದರೂ ನಮ್ಮ ಸಮಸ್ಯೆಗಳು ಬಗೆಹರಿದಿಲ್ಲ. ಆದರೆ, ದೊಡ್ಡವರ ಬಳಿ ಮಾತ್ರ ದೊಡ್ಡ ದೊಡ್ಡ ಹೊಸ ನೋಟಿನ ಗಂಟುಗಳಿವೆ. ಎಲ್ಲರ ಬಳಿ ಹೊಸ ನೋಟುಗಳು ಕಂತೆ ಕಂತೆ ಓಡಾಡುತ್ತಿವೆ. ಇದು ಹೇಗೆ ಬಂತು, ಇದನ್ನು ಸರ್ಕಾರ ನಿಯಂತ್ರಿಸಬೇಕು. ಬರೀ ನಮ್ಮನ್ನು ನಿಯಂತ್ರಿಸುತ್ತಿದೆ. ನೀವು ಸಹಿಸಿಕೋಬೇಕು… ನೀವು ಸಹಿಸಿಕೋಬೇಕು… ಎಂದು ಹೇಳುತ್ತೆ. ಎಲ್ಲಿಯವರೆಗೆ ಸಹಿಸಿಕೋಬೇಕು ಅದನ್ನಾದರೂ ಹೇಳಿ ಎಂದು ಸಾರ್ವಜನಿಕರು ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನಾದರೂ ಎಚ್ಚೆತ್ತುಕೊಂಡು ಬ್ಯಾಂಕುಗಳಿಗೆ ಹಣ ಸರಬರಾಜು ಮಾಡಲಿ. ಸಾರ್ವಜನಿಕರ ಪರದಾಟ ತಪ್ಪಿಸಲಿ ಎಂದು ಹಲವು ಹಿರಿಯ ನಾಗರಿಕರು ಅಲವತ್ತುಕೊಂಡಿದ್ದಾರೆ.
11.5 ಲಕ್ಷ ಕೋಟಿ ಹಣ ಬ್ಯಾಂಕ್‍ಗಳಿಗೆ ಬಂದಿದೆ. ಆದರೆ, ಆರ್‍ಬಿಐನಿಂದ 4 ಲಕ್ಷ ಹಣ ಮಾತ್ರ ಪೂರೈಕೆಯಾಗಿದೆ. ಆ ಹಣವು ಸಾರ್ವಜನಿಕರಿಗೆ ವಿತರಣೆಯಾಗುವುದರಲ್ಲಿ ಸಾಕಷ್ಟು ಲೋಪವಾಗಿದೆ. ಎಲ್ಲವೂ ಉಳ್ಳವರ ಪಾಲಾಗುತ್ತಿದೆ. ಸಿಕ್ಕಿರುವ 2000ರೂ. ನೋಟು ಕೂಡ ಕನ್ನಡಿಯೊಳಗಿನ ಗಂಟಿನಂತಾಗಿದೆ. ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಚಿಲ್ಲರೆ ಅಭಾವ ಎದುರಾಗಿದೆ. 2000 ನೋಟು ಹಿಡಿದು ಎಲ್ಲಿ ಹೋದರೂ ಚಿಲ್ಲರೆ ಸಿಗುತ್ತಿಲ್ಲ. ಚಿಲ್ಲರೆ ಬೇಕೆಂದರೆ ಕನಿಷ್ಟ 500ರೂ. ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಸರಿ ಹೋಗುತ್ತದೆಯೋ ಕಾದು ನೋಡಬೇಕು.

ನೋಟು ನಿಷೇಧ ಮಾಡಿ ಬರೋಬ್ಬರಿ 30 ದಿನಗಳು ಕಳೆದಿವೆ. ಹಣಕ್ಕಾಗಿ ಜನ ಹೈರಾಣಾಗಿದ್ದಾರೆ. ಎಟಿಎಂಗಳಲ್ಲಿ ಹಣ ದೊರೆಯುತ್ತಿಲ್ಲ. ಬ್ಯಾಂಕ್‍ಗಳಲ್ಲಿ ಹಣ ಸಿಗುತ್ತಿಲ್ಲ. ವ್ಯಾಪಾರ-ವಹಿವಾಟು ಕುಸಿದಿದೆ. ನೌಕರರು, ಕೂಲಿ ಕಾರ್ಮಿಕರು, ಕೃಷಿಕರ ದಿನವಹಿ ಕೆಲಸಗಳಿಗೆ ದಿನೇ ದಿನೇ ತೊಂದರೆ ಹೆಚ್ಚಾಗುತ್ತಿದೆ.  500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ 30 ದಿನಗಳಾದರೂ ಜನರ ಬವಣೆ ತಪ್ಪಿಲ್ಲ. ಬ್ಯಾಂಕ್‍ಗಳಲ್ಲಿ, ಎಟಿಎಂಗಳಲ್ಲಿ ಚಿಲ್ಲರೆ ದೊರೆಯುತ್ತಿಲ್ಲ. ಎಲ್ಲ ಎಟಿಎಂಗಳಲ್ಲಿ ಕೇವಲ 2000ರೂ. ನೋಟುಗಳು ಬರುತ್ತಿವೆ. ಬಹುತೇಕ ಎಟಿಎಂಗಳ ಮುಂದೆ ನೋ ಕ್ಯಾಷ್ ಬೋರ್ಡ್ ರಾರಾಜಿಸುತ್ತಿದೆ. ಇರುವ ಎಟಿಎಂಗಳಲ್ಲಿ ಅಗತ್ಯವಾದ ಹಣ ದೊರೆಯುತ್ತಿಲ್ಲ. ಬ್ಯಾಂಕ್‍ನಲ್ಲೂ ಕೂಡ ದಿನಕ್ಕೊಂದು ನಿಯಮಗಳನ್ನು ವಿಧಿಸಲಾಗುತ್ತಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin