ಕಬ್ಬನ್‍ಪಾರ್ಕ್ ನಲ್ಲಿ ಚಕ್ಕಂದ ಆಡುವ ಪ್ರೇಮಿಗಳೇ ಹುಷಾರ್..!

Kabban-Park--5

ಬೆಂಗಳೂರು,ಸೆ.25-ಇನ್ನು ಮುಂದೆ ಕಬ್ಬನ್‍ಪಾರ್ಕ್‍ನಲ್ಲಿ ಪ್ರೇಮಿಗಳು ಹೇಗೆಂದರೆ ಹಾಗೆ ವರ್ತಿಸಿರಿ ಜೋಕೆ. ಏಕೆಂದರೆ ಕಬ್ಬನ್‍ಪಾರ್ಕ್‍ನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಶಾಶ್ವತ ಕಡಿವಾಣ ಹಾಕಲು ತೋಟಗಾರಿಕೆ ಇಲಾಖೆ ಇನ್ನು ಮುಂದೆ ಎಲ್ಲ ಕಡೆ ಸಿಸಿಕ್ಯಾಮೆರಾಗಳನ್ನು ಹಾಕಲಿದೆ.
ಈ ಸಿಸಿ ಕ್ಯಾಮೆರಾಗಳು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ, ವಿಧಾನಸಭೆಯ ಸ್ಪೀಕರ್, ಪರಿಷತ್ ಅಧ್ಯಕ್ಷರು ಹಾಗೂ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡು ಏನು ನಡೆಯುತ್ತದೆ ಎಂಬುದನ್ನು ಇಲ್ಲಿಂದಲೇ ವೀಕ್ಷಿಸಬಹುದು.

 

ಸುಮಾರು 300 ಎಕರೆ ವಿಸ್ತೀರ್ಣ ಹೊಂದಿರುವ ಕಬ್ಬನ್‍ಪಾರ್ಕ್‍ನಲ್ಲಿ ತೋಟಗಾರಿಕೆ ಇಲಾಖೆಯು 300 ಸಿಸಿ ಕ್ಯಾಮೆರಾಗಳನ್ನು ಶೀಘ್ರದಲ್ಲೇ ಅಳವಡಿಸಲಿದೆ. ಕಿ.ಮೀಗೆ 1ರಂತೆ ಇವುಗಳು ನಾಲ್ಕು ದಿಕ್ಕುಗಳಿಂದ 3600 ಕೋನದಲ್ಲಿ ಇವುಗಳು ಕಾರ್ಯಾರಂಭ ಮಾಡಲಿವೆ.  ಈಗಾಗಲೇ ತೋಟಗಾರಿಕೆ ಇಲಾಖೆಯು ಸಿಸಿ ಕ್ಯಾಮೆರಾಗಳನ್ನು ಖರೀದಿಸಲು ಟೆಂಡರ್ ಕರೆದಿದ್ದು , ಎಲ್ಲವೂ ನಿರೀಕ್ಷೆಯಂತೆ ನಡೆದರೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನದಂದೇ ಇವುಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿದುಬಂದಿದೆ.   ಕ್ಯಾಮೆರಾಗಳನ್ನು ಅಳವಡಿಸುವ ಸಂಬಂಧ ಬೆಸ್ಕಾಂ ಅಧಿಕಾರಿಗಳು ಸಹ ಕೈ ಜೋಡಿಸಿದ್ದಾರೆ. ಸಿಸಿಕ್ಯಾಮೆರಾ ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ಮಕ್ರ್ಯೂರಿ ದೀಪಗಳನ್ನು ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯಕ್ಕೆ ಅಲ್ಲಲ್ಲಿ ಕೆಲವು ಕಡೆ ಮಕ್ರ್ಯೂರಿ ದೀಪಗಳು ಇದ್ದರೂ ಸಹ ಎಲ್ಲಾ ಕಡೆ ಅಳವಡಿಕೆಯಾಗಿಲ್ಲ.

Kabban-Park--02

ಕ್ಯಾಮೆರಾ ಅಳವಡಿಕೆ ಏಕೆ:

ಏಷ್ಯಾ ಖಂಡದಲ್ಲೇ ಕೆಲವೇ ಕೆಲವು ಅತ್ಯಂತ ದೊಡ್ಡ ಸಸ್ಯೋದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಬ್ಬನ್‍ಪಾರ್ಕ್‍ಗೆ ಪ್ರತಿದಿನ ವಾಯುವಿಹಾರ, ಸಮಯ ಕಳೆಯಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಅಲ್ಲದೆ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ತಪ್ಪದೇ ಇಲ್ಲಿ ಭೇಟಿ ನೀಡುವುದುಂಟು.
ಬೆಳಗ್ಗೆ ವಾಯುವಿಹಾರಕ್ಕೆ ಬಂದರೆ ಮಧ್ಯಾಹ್ನ ಕೆಲವರು ವಿಶ್ರಾಂತಿ, ಪುನಃ ಸಂಜೆ ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ವಾಯುವಿಹಾರ ಮಾಡುತ್ತಾರೆ.

Kabban-Park--3

ಆದರೆ ಇಲ್ಲಿಗೆ ಆಗಮಿಸುವ ಯುವಕ-ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಅಲ್ಲಲ್ಲಿ ಕೆಲವು ಕಡೆ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬ ದೂರುಗಳು ಆಗಾಗ ಕೇಳಿ ಬರುತ್ತಲೇ ಇವೆ. ಅಲ್ಲದೆ ಯಾರಾದರೂ ಬುದ್ದಿ ಮಾತು ಹೇಳಿದರೆ ಅವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳೂ ಇವೆ. ಇದೆಲ್ಲದರ ಜೊತೆಗೆ ಕಬ್ಬನ್‍ಪಾರ್ಕ್‍ನಲ್ಲಿ ಕೆಲ ಹಿರಿಯ ನಾಗರಿಕರನ್ನು ಬೆದರಿಸಿ ಸರ ಅಪಹರಣ, ಪಿಕ್‍ಪಾಕೆಟ್ ಮಾಡಿರುವ ನಿದರ್ಶನಗಳುಂಟು.
ಸದ್ಯಕ್ಕೆ ತೋಟಗಾರಿಕೆ ಇಲಾಖೆ ಗುತ್ತಿಗೆ ಆಧಾರದ ಮೇಲೆ ವಾಚ್‍ಮ್ಯಾನ್‍ಗಳನ್ನು ನೇಮಕ ಮಾಡಲಾಗಿದೆಯಾದರೂ ಅಕ್ರಮ ಚಟುವಟಿಕೆಗಳಿಗೆ ಇದರಿಂದ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಿಲ್ಲ.

Kabban-Park--01

ಪಾರ್ಕ್‍ನಲ್ಲಿ ನಡೆಯುತ್ತಿರುವ ಇಂತಹ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಹಿರಿಯ ನಾಗರಿಕರು, ಸಾರ್ವಜನಿಕರು ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.   ಇದೀಗ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು , ತೋಟಗಾರಿಕೆ ಇಲಾಖೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.   ನಾವು ಕಬ್ಬನ್‍ಪಾರ್ಕ್‍ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಸಂಬಂಧ ಟೆಂಡರ್ ಕರೆದಿದ್ದೇವೆ. ಈಗಾಗಲೇ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲವೂ ನಮ್ಮ ನಿರೀಕ್ಷೆಯಂತೆ ನಡೆದರೆ ನವೆಂಬರ್ ಒಳಗೆ ಎಲ್ಲ ಕಡೆ ಅಳವಡಿಕೆಯಾಗಲಿವೆ ಎಂದು ಕಬ್ಬನ್‍ಪಾರ್ಕ್‍ನ ಉಪನಿರ್ದೇಶಕ ಮಹಾಂತೇಶ್ ಮುರುಗೋಡು ತಿಳಿಸಿದ್ದಾರೆ.

Sri Raghav

Admin