ಕಬ್ಬಿಗೆ ಬಿಳಿ ಹುಣ್ಣು ರೋಗ : ಹರ್ಬಲ್ ಔಷಧಿ ಪ್ರಯೋಗ
ಕೆ.ಆರ್.ಪೇಟೆ,ಅ.20- ತಾಲೂಕಿನ ನಂದಿಪುರ, ಆಲೇನಹಳ್ಳಿ, ನಾಟನಹಳ್ಳಿ, ಮಂದಗೆರೆ, ಗದ್ದೆಹೊಸೂರು, ಮಾಕವಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಬ್ಬಿನ ಬೆಳೆಗೆ ಮಾರಕ ಬಿಳಿ ಹುಣ್ಣು ರೋಗ ವ್ಯಾಪಕವಾಗಿ ಹರಡಿದ್ದು ಕೃಷಿ ಅಧಿಕಾರಿಗಳು ಗಮನ ಹರಿಸದ ಹಿನ್ನೆಲೆಯಲ್ಲಿ ರೈತರು ಕಬ್ಬಿನ ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ.ಇದೀಗ ಖಾಸಗಿ ಕಂಪೆನಿಗಳ ಮೊರೆ ಹೋಗಿದ್ದಾರೆ. ಕಬ್ಬಿನ ಗರಿಯ ಮೇಲೆ ಬಿಳಿ ಬಣ್ಣದಿಂದ ಕೂಡಿದ ಗೂಡು ಕಟ್ಟಿಕೊಂಡು ಇಡೀ ಗರಿಯನ್ನು ತಿನ್ನುವ ಲಕ್ಷಣ ಹೊಂದಿರುವ ಈ ಬಿಳಿ ಹುಣ್ಣು ರೋಗದಿಂದ ಕಬ್ಬಿನ ಬುಡವು ಮತ್ತು ಭೂಮಿಯು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ ಸಂಪೂರ್ಣ ಕಬ್ಬಿನ ಬೆಳೆಯು ಬುಡವೇ ಒಣಗುತ್ತದೆ. ಅಲ್ಲದೆ ಗಾಳಿ ಬೀಸಿದ ಭಾಗಕ್ಕೆಲ್ಲಾ ಸುಲಭವಾಗಿ ಹರಡುವ ಮೂಲಕ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ರೋಗವು ಕಳೆದ ಮೂರ್ನಾಲ್ಕು ತಿಂಗಳಿನಿಂದ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಕೃಷಿ ಅಧಿಕಾರಿಗಳು ಗಮನ ಹರಿಸಿ ರೋಗ ಹತೋಟಿಗೆ ಕ್ರಮ ಕೈಗೊಳ್ಳದ ಕಾರಣ ರೈತರೇ ಈ ರೋಗ ಹತೋಟಿಗೆ ಖಾಸಗಿ ಕಂಪನಿಯ ಸಹಯೋಗದೊಂದಿಗೆ ಮುಂದಾಗಿದ್ದಾರೆ.
ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಭಾರತ್ ವಿಕಾಸ್ ಗ್ರೂಫ್ ಆಫ್ ಕಂಪನಿಯ ಉತ್ಪಾದಿತ ಸಂಪೂರ್ಣ ಹರ್ಬಲ್ ಆಧಾರಿತ ರೈತ ಸ್ನೇಹಿ, ಪರಿಸರ ಸ್ನೇಹಿ, ರಾಸಾಯನಿಕ ಮುಕ್ತ ರೋಗ ನಿವಾರಕ ಔಷಧಿಯಾದ ಆಗ್ರೋ ಸೇಫ್ ಎಂಬ ಔಷಧಿಯನ್ನು ಕಬ್ಬಿನ ಬೆಳೆಗಳಿಗೆ ಬಳಕೆ ಮಾಡುತ್ತಿದ್ದಾರೆ. ಬಿ.ವಿ.ಜಿ. ಸಂಸ್ಥೆಯ ಮಾರಾಟ ವ್ಯವಸ್ಥಾಪಕರಾದ ಸಚಿನ್ ಅವರ ಮಾರ್ಗದರ್ಶನದಲ್ಲಿ ಪ್ರಗತಿಪರ ರೈತ ಆಲೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಜವರೇಗೌಡ ಅವರ ಜಮೀನಿನಲ್ಲಿ ಕಬ್ಬಿನ ಬೆಳೆಗೆ ಔಷಧಿ ಸಿಂಪಡಿಸುವ ಪ್ರಾತ್ಯಾಕ್ಷಿಕೆಗೆ ಕಾರ್ಯಕ್ರಮ ಚಾಲನೆ ನೀಡುವ ಮೂಲಕ ರೈತರಿಗೆ ಅರಿವು ಮೂಡಿಸಲಾಯಿತು.
ಬಿ.ವಿ.ಜಿ ಕಂಪನಿಯ ಆಗ್ರೋ ಸೇಫ್ ಎಂಬ ಹರ್ಬಲ್ಯುಕ್ತ ಔಷಧಿಯನ್ನು ರೈತರಿಗೆ ಉಚಿತವಾಗಿ ನೀಡಿ ರೋಗ ಹತೋಟಿ ಕ್ರಮಗಳನ್ನು ತಿಳಿಸಿಕೊಡಲಾಯಿತು. ರಾಸಾಯನಿಕ ಕ್ರಿಮಿನಾಶಕ ಔಷಧಿಯಿಂದ ಮನುಷ್ಯ ಆರೋಗ್ಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳು ಆಗುವುದಿಲ್ಲ. ಯಾವುದೇ ರಕ್ಷಾ ಕವಚವಿಲ್ಲದೆ ಸಂಪಿಡಿಸಬಹುದಾದ ಆರೋಗ್ಯ ರಕ್ಷಕ ಔಷಧಿಯಾಗಿದೆ. ಪ್ರಾಣಿಗಳಿಗೂ ಯಾವುದೇ ತೊಂದರೆ ಇಲ್ಲ ಎಂದು ವಿವರಿಸಲಾಯಿತು.ಮಂದಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎಚ್.ರಮೇಶ್, ಉಪಾಧ್ಯಕ್ಷ ಚಿಕ್ಕಮಂದಗೆರೆ ಚಂದ್ರಶೇಖರ್, ರೈತ ಮುಖಂಡರಾದ ಆಲೇನಹಳ್ಳಿ ಜಯರಾಂ, ಟಿ.ಎಂ.ದೇವರಾಜು, ನಾಟನಹಳ್ಳಿ ವೆಂಕಟಪ್ಪ, ಗದ್ದೆಹೊಸೂರು ದರ್ಶನ್, ರಾಜು, ಕೃಷ್ಣೇಗೌಡ, ಮಂಜೇಗೌಡ, ಶಿವರಾಜ್, ಲೋಕೇಶ್, ನಾಟನಹಳ್ಳಿ ನಾಗರಾಜು, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗದ ಮಂಜುನಾಥ್, ಸ್ವಾಮಿ ಹಾಗೂ ರೈತರು ಹಾಜರಿದ್ದರು.