ಕರಾವಳಿ ತಲುಪಿದ ಯಡಿಯೂರಪ್ಪನವರ ‘ಮತಯಾತ್ರೆ’

Yadiyurappa--01

ಬೆಂಗಳೂರು, ನ.10-ಬಿಜೆಪಿ ಬಹುನಿರೀಕ್ಷಿತ ನವಕರ್ನಾಟಕ ಪರಿವರ್ತನಾ ಯಾತ್ರೆ ಇಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಕಳೆದ ಎಂಟು ದಿನಗಳಿಂದ ತುಮಕೂರು, ಹಾಸನ ಪ್ರವಾಸ ಮುಗಿಸಿರುವ ಪರಿವರ್ತನಾ ಯಾತ್ರೆ ಇಂದು ಬಿಜೆಪಿಯ ಭದ್ರಕೋಟೆ ಎನಿಸಿರುವ ಕರಾವಳಿ ಹೆಬ್ಬಾಗಿಲಿಗೆ ಕಾಲಿಟ್ಟಿದೆ.
ಬೆಳಗ್ಗೆ 11 ಗಂಟೆಗೆ ಸುಳ್ಯಾದ ಈಶ್ವರಮಂಗಲದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಯಲಿದೆ. ನಂತರ ಸಂಜೆ 4 ಗಂಟೆಗೆ ಪುತ್ತೂರಿನಲ್ಲಿ ಹಾಗೂ ಸಂಜೆ 6 ಗಂಟೆಗೆ ಬೆಳ್ತಂಗಡಿಯಲ್ಲಿ ಪರಿವರ್ತನಾ ರಥ ಯಾತ್ರೆ ನಡೆಯಲಿದೆ.

ಕಳೆದ ನ.2 ರಿಂದ ಆರಂಭವಾಗಿರುವ ರಥಯಾತ್ರೆಗೆ ಕೆಲವು ಸಣ್ಣಪುಟ್ಟ ಅಡ್ಡಿ, ಆತಂಕಗಳ ನಡುವೆಯೇ ಯಶಸ್ವಿಯತ್ತ ಮುನ್ನುಗ್ಗುತ್ತಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಅಶೋಕ್, ಶೋಭಾ ಕರಂದ್ಲಾಜೆ, ನಳೀನ್‍ಕುಮಾರ್ ಕಟೀಲು, ಶ್ರೀರಾಮುಲು ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹೇಳಿ, ಕೇಳಿ ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಇಂದು ಟಿಪ್ಪು ಜಯಂತಿ ಹಾಗೂ ಬಿಜೆಪಿಯ ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ನಂತರ ರಥಯಾತ್ರೆ ಉತ್ತರ ಕನ್ನಡ ಜಿಲ್ಲೆ ಮೂಲಕ ಉತ್ತರ ಕರ್ನಾಟಕಕ್ಕೆ ಕಾಲಿಡಲಿದೆ.

Sri Raghav

Admin