ಕರು ಸತ್ತಿದ್ದಕ್ಕಾಗಿ 7 ವರ್ಷದ ಬಾಲಕಿಯ ಬಾಲ್ಯವಿವಾಹ ಮಾಡುವಂತೆ ಪಂಚಾಯಿತಿ ತೀರ್ಪು..!

child-marriage

ಭೋಪಾಲ್, ಏ.16- ಕರುವನ್ನು ಕೊಂದನೆಂಬ ಕಾರಣಕ್ಕಾಗಿ ಬಂಜಾರ ಸಮುದಾಯದ ಗ್ರಾಮಸ್ಥನೊಬ್ಬನ ಏಳು ವರ್ಷದ ಮಗಳ ಬಾಲ್ಯ ವಿವಾಹಕ್ಕೆ ಜಾತಿ ಪಂಚಾಯಿತಿ ತೀರ್ಪು ನೀಡಿದ ಹೀನ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಗುನಾ ಜಿಲ್ಲೆಯ ತಾರ್‍ಪುರ್ ಗ್ರಾಮದ ವಾಸಿ ಜಗದೀಶ್ ಬಂಜಾರ ಎಂಬಾತ ಮೂರು ವರ್ಷಗಳ ಹಿಂದೆ ತನ್ನ ಗದ್ದೆಗೆ ನುಗ್ಗಿದ್ದ ಬೀದಿ ದನಗಳ ಹೆದರಿಸಿ ಓಡಿಸುತ್ತಿದ್ದಾಗ ಆತ ಎಸೆದ ಕಲ್ಲೊಂದು ಕರುವಿಗೆ ಬಡಿಯಿತು. ಅದಾದ ಕೆಲವು ಗಂಟೆಗಳ ನಂತರ ಕರು ಮೃತಪಟ್ಟಿತು. ಘಟನೆಗೆ ಸಂಬಂಧಿಸಿದಂತೆ ಬಂಜಾರ ಸಮುದಾಯದ ಮುಖಂಡರು ಜಗದೀಶ್ ಮತ್ತು ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು.


ಕರುವನ್ನು ಕೊಂದಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಗಂಗಾನದಿಯಲ್ಲಿ ಸ್ನಾನ ಮಾಡಬೇಕು ಹಾಗೂ ತಾರ್‍ಪುರ್‍ನ ಇಡೀ ಸಮುದಾಯಕ್ಕೆ ಮಾಂಸದೂಟ ಹಾಕಬೇಕೆಂದು ಬಂಜಾರ ಜಾತಿ ಪಂಚಾಯತ್ ತಾಕೀತು ಮಾಡಿತ್ತು. ಎಲ್ಲ ಷರತ್ತುಗಳನ್ನು ಆತ ಈಡೇರಿಸಿದ್ದ.  ಸಮುದಾಯದ ಕೆಲವು ಮುಖಂಡರು ಇತರ ಗ್ರಾಮಸ್ಥರು ತಾರ್‍ಪುರ್ ಜನರ ಜೊತೆ ಸಂಬಂಧ ಬೆಳೆಸದಿರಲು ಜಗದೀಶ್ ಕಾರಣ ಎಂದು ಆರೋಪಿಸಿದ್ದರು. ಇದಕ್ಕೆ ಶಿಕ್ಷೆಯಾಗಿ ಆತನ ಏಳು ವರ್ಷದ ಮಗಳನ್ನು ಪಕ್ಕದ ವಿದಿಶಾ ಜಿಲ್ಲೆಯ ಎಂಟು ವರ್ಷದ ಬಾಲಕನೊಂದಿಗೆ ಬಾಲ್ಯ ವಿವಾಹ ಮಾಡುವಂತೆ ತೀರ್ಪು ನೀಡಿದೆ. ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಮುಂದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin