ಕರ್ನಾಟಕದಲ್ಲೂ ಕಮಲ ಅರಳಿಸಲು ಮೋದಿ ಗೇಮ್ ಪ್ಲಾನ್ ರೆಡಿ

Modi-and-Amith-Shah

ನವದೆಹಲಿ, ಮಾ.31-ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದಕ್ಷಿಣ ಭಾರತದ ಸಚಿವ-ಸಂಸದರಿಗೆ ಕರೆ ನೀಡಿದ್ದಾರೆ.
ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸುವುದು ಮತ್ತು ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಪಕ್ಷದ ಸಂಸದರಿಗೆ ಮೋದಿ ಮತ್ತು ಷಾ ಮಹತ್ವ ಸಲಹೆಗಳು ಮತ್ತು ಮಾರ್ಗದರ್ಶನಗಳನ್ನು ನೀಡಿದ್ದಾರೆ.

ದೆಹಲಿಯ ಲೋಕಕಲ್ಯಾಣ ರಸ್ತೆಯಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಇಂದು ಬೆಳಗ್ಗೆ ನಡೆದ ಬಿಜೆಪಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಸಭೆ ಮತ್ತು ಉಪಾಹಾರ ಕೂಟದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಒಡಿಶಾದ ಸಂಸದರು ಪಾಲ್ಗೊಂಡರು.   ಆಯಾ ರಾಜ್ಯಗಳಲ್ಲಿ ಪಕ್ಷದ ಬಲವರ್ಧನೆ, ಮುಂಬರುವ ಚುನಾವಣೆಗಳ ಕಾರ್ಯತಂತ್ರ, ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿರುವ ಅನುದಾನಗಳ ಸಮರ್ಪಕ ಬಳಕೆ, ಜನಪ್ರಿಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ-ಇವೇ ಮೊದಲಾದ ಪ್ರಮುಖ ವಿಷಯಗಳ ಬಗ್ಗೆ ಮೋದಿ ಸಂಸದರಿಗೆ ಸಲಹೆ ನೀಡಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಗದ್ದುಗೆಗೇರಿರುವ ಬಿಜೆಪಿ ದಕ್ಷಿಣ ಭಾರತದಲ್ಲಿಯೂ ತನ್ನ ಪ್ರಾಬಲ್ಯ ಸಾಧಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಮೋದಿ ಮತ್ತು ಅಮಿತ್ ಶಾ ಸಂಸದರಿಂದ ಅಭಿಪ್ರಾಯಗಳನ್ನು ಪಡೆದುಕೊಂಡರು ಎಂದು ಉನ್ನತ ಮೂಲಗಳು ತಿಳಿಸಿವೆ.

ಅಲ್ಲದೇ ತಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆಗಳು, ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆಯೂ ಸಂಸದರು ಪ್ರಧಾನಿ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಪ್ರತಿ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ಆಯಾ ರಾಜ್ಯಗಳ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರುಗಳ ಸಭೆ ನಡೆಸಿ ಅಹವಾಲು ಸ್ವೀಕರಿಸುವುದು ವಾಡಿಕೆಯಾದರೂ. ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವುದರಿಂದ ಈ ಸಭೆಗೆ ಭಾರೀ ಪ್ರಾಮುಖ್ಯತೆ ಲಭಿಸಿದೆ.

ಕರ್ನಾಟಕದ ಕೇಂದ್ರ ಸಚಿವರುಗಳಾದ ಅನಂತ್‍ಕುಮಾರ್, ಡಿ.ವಿ.ಸದಾನಂದ ಗೌಡ, ರಮೇಶ್ ಜಿಗಜಿಗಣಿ ಸೇರಿದಂತೆ ಸಂಸದರು ಭಾಗವಹಿಸಿದ್ದರು. ಆದರೆ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಶ್ರೀರಾಮುಲು ದೆಹಲಿ ಸಭೆಯಲ್ಲಿ ಭಾಗವಹಿಸಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin