ಕರ್ನಾಟಕ ಚಲನಚಿತ್ರ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ

Film-award

ಬೆಂಗಳೂರು, ಮಾ.4- ಕನ್ನಡ ಚಿತ್ರರಂಗದಲ್ಲಿ ಅಮೋಘ ಸೇವೆ ಸಲ್ಲಿಸಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಲೆಮರೆ ಕಾಯಿಯಾಗಿರುವ 15 ದಿಗ್ಗಜರನ್ನು ಗುರುತಿಸಿ ಕರ್ನಾಟಕ ಚಲನಚಿತ್ರ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತು.  ಕನ್ನಡ ಮೊದಲ ವಾಕ್‍ಚಿತ್ರ ಸತಿ ಸುಲೋಚನಾ 1934 ಮಾರ್ಚ್ 3ರಂದು ಬಿಡುಗಡೆಯಾಗಿತ್ತು. ಅದರ ಸವಿ ನೆನಪಿಗಾಗಿ ಅಕಾಡೆಮಿಯು ಕನ್ನಡ ಚಲನಚಿತ್ರಕ್ಕಾಗಿ ದುಡಿದ ಹಿರಿಯರನ್ನು ಗುರುತಿಸಿ ಪ್ರತಿವರ್ಷ ಮಾ.3ರಂದು ಪ್ರಶಸ್ತಿ ನೀಡಿ ಗೌರವಿಸುತ್ತದೆ. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಸತಿ ಸಚಿವ ಎಂ.ಕೃಷ್ಣಪ್ಪ, ಇಂದಿನ ಜನಾಂಗಕ್ಕೆ ಕುತೂಹಲವೆನ್ನುವುದು ಏನೂ ಇಲ್ಲದಂತಾಗಿದೆ. ಪ್ರಪಂಚವನ್ನು ಅಂಗೈಯಲ್ಲಿ ನೋಡುವ ಪೀಳಿಗೆ ಇದು. ತಮ್ಮ ಯೌವ್ವನದಲ್ಲಿ ಯಾವ ಯಾವ ಕಾರಣಗಳಿಗೆ ಯಾರ್ಯಾರು ಸಿನಿಮಾ ನೋಡುತ್ತಿದ್ದರು ಎಂದು ಮೆಲುಕು ಹಾಕಿ ಹಾಸ್ಯ ಮಿಶ್ರಿತ ಘಟನೆಗಳನ್ನು ವಿವರಿಸಿದರು.

Cinema-a001

ಕಲಾವಿದರ ಬಣ್ಣದ ಬದುಕಿನ ನಂತರದ ದಿನಗಳ ಜೀವನವನ್ನು ನಾನು ಬಲ್ಲೆ. ಅವರ ಬೇಡಿಕೆಗಳ ಬಗ್ಗೆ ಮಾತನಾಡದೆ ಮಾಡಿ ತೋರಿಸುತ್ತೇನೆ ಎಂದು ಹೇಳಿದ ಅವರು, ಚಿತ್ರರಂಗಕ್ಕೆ ಸರ್ಕಾರದ ಪ್ರೋತ್ಸಾಹ ಇದೆ ಎಂದು ತಿಳಿಸಿದರು.  ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್‍ಬಾಬು ಮಾತನಾಡಿ, ಕನ್ನಡ ಚಿತ್ರರಂಗದ ಉತ್ಸಾಹಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಸದಾ ಸಿದ್ಧ. ಚಲನಚಿತ್ರರಂಗದ ಕಲ್ಯಾಣಕ್ಕಾಗಿ ಹಲವು ಕೊಡುಗೆಗಳನ್ನು ನೀಡಿರುವ ಸರ್ಕಾರ ಕಳೆದ ವರ್ಷ ಅಕಾಡೆಮಿಯಿಂದ 10 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಪ್ರಸ್ತುತ 15 ಸಾಧಕರಿಗೆ ನೀಡಲಾಗಿದೆ ಎಂದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಜಂಟಿಯಾಗಿ ಭವಿಷ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದ ಅವರು, ಮುಂದಿನ ವರ್ಷದಿಂದ ಮತ್ತಷ್ಟು ವಿಭಾಗಗಳ ಪ್ರಶಸ್ತಿಗಳನ್ನು ಸೇರಿಸಲಾಗುವುದು ಹಾಗೂ ದೇಶದಲ್ಲೇ ಮೊದಲ ಬಾರಿ ಪ್ರೋಡಕ್ಷನ್ ಮ್ಯಾನೇಜರ್ ಅವರ ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಸರ್ಕಾರದ ಕೊಡುಗೆ ಅಪಾರ. ಅಕಾಡೆಮಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ಸಂಭ್ರಮ ಪಡಬೇಕು. ಮುಂದಿನ ವರ್ಷದಿಂದ ಇದೊಂದು ಅದ್ಧೂರಿ ಕಾರ್ಯಕ್ರಮವಾಗಲಿ ಎಂದು ಪ್ರಶಸ್ತಿ ವಿಜೇತರಿಗೆ ಶುಭ ಕೋರಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಹಿಂದಿನ ತಲೆಮಾರಿನ ಕಲಾವಿದರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಲನಚಿತ್ರ ಸೇವೆಯ ಮಹತ್ವ ಅರಿಯಬೇಕು ಎಂದು ಹೇಳಿದರು.   ಹಿರಿಯ ನಟಿ, ವಿಧಾನ ಪರಿಷತ್ ಸದಸ್ಯ ಜಯಮಾಲಾ ಮಾತನಾಡಿ, 83 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 4 ಸಾವಿರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.  ಚಲನಚಿತ್ರ ಅಕಾಡೆಮಿ ನಿರ್ದೇಶಕ ಎಚ್.ಬಿ.ದಿನೇಶ್ ಮುಂತಾದವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅರ್ಚನಾ ಉಡುಪ ತಂಡದವರು ನಡೆಸಿಕೊಟ್ಟ ಕನ್ನಡ ಚಲನಚಿತ್ರರಂಗದ ಮೈಲುಗಲ್ಲುಗಳ ಸ್ಮೃತಿ ಗೀತ ಗಾಯನ, ಪ್ರಶಸ್ತಿ ವಿಜೇತರ ಛಾಯಾಚಿತ್ರ ಪ್ರದರ್ಶನ ಕಣ್ಮನ ಸೆಳೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin