ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ-2016ನ್ನು ವಾಪಸು ಕಳುಹಿಸಿದ ಗೌರ್ನರ್

Spread the love

Vajubhai-wala

ಬೆಂಗಳೂರು, ಅ.4- ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ-2016ರ ಬಗ್ಗೆ ರಾಜ್ಯಪಾಲ ವಿ.ಆರ್.ವಾಲಾ ವಿವರಣೆ ಕೇಳಿ ಮಸೂದೆಯನ್ನು ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರದ ಮಹತ್ವವಾದ ಈ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕುವ ಬದಲು ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ. ವಿಧಾನಮಂಡಲದ ಉಭಯ ಅಧಿವೇಶನಗಳ ಅಧಿವೇಶನಗಳಲ್ಲಿ ಕಳೆದ ಜುಲೈ 18ರಂದು ಈ ಮಸೂದೆ ಅಂಗೀಕಾರವಾಗಿತ್ತು. ಈ ವಿಧೇಯಕ ಯಾವುದೇ ಚರ್ಚೆಯಾಗದೆ ಅಂಗೀಕಾರವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಿದೆ ಎಂಬ ಆರೋಪವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾಡಿದ್ದರು.
ಪರಿಸರಕ್ಕೆ ಮಾರಕವಾಗದಂತೆ ವಿಧೇಯಕ ಮರು ಪರಿಶೀಲಿಸಿ ಅಂಗೀಕರಿಸುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಬಳಕೆಯ ನಿವೇಶನಗಳ ಪ್ರಮಾಣವನ್ನು ಕಡಿತಗೊಳಿಸಿರುವ ಬಗ್ಗೆ ನಿಖರ ಕಾರಣ ನೀಡಿಲ್ಲದಿರುವುದರಿಂದ ಮಸೂದೆ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರು ರಾಜ್ಯಪಾಲರಿಗೆ ಪತ್ರ ಬರೆದು ಈ ವಿಧೇಯಕಕ್ಕೆ ಪರಿಸರ ಪ್ರೇಮಿಗಳಿಂದಲೂ ವಿರೋಧವಿದ್ದು, ಒಂದು ವೇಳೆ ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ಪರಿಸರಕ್ಕೆ ಮಾರಕವಾಗಲಿದೆ. ವಿಧೇಯಕ ತಿದ್ದುಪಡಿಗೂ ಮೊದಲು ಅದರಲ್ಲಿನ ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಾಗಿಲ್ಲ. ಹೊಸ ಬಡಾವಣೆಗಳಿಗೆ ಶೇ.25ರಷ್ಟು ಸ್ಥಳ ನಿಗದಿಯಾಗಬೇಕು. ಉದ್ಯಾನವನ, ಆಟದ ಮೈದಾನಗಳಿಗೆ ಶೇ.15ರಷ್ಟು ಜಾಗ ಮೀಸಲಿಡಬೇಕು. ಆದರೆ, ತಿದ್ದುಪಡಿಯ ನಂತರ ಸಾರ್ವಜನಿಕ ಬಳಕೆಗಾಗಿ ಮೀಸಲಿಡುವ ಭೂಮಿ ಶೇ.5 ಇದ್ದರೆ ಸಾಕು, ಅದೇ ರೀತಿ ಉದ್ಯಾನವನ, ಆಟದ ಮೈದಾನಗಳಿಗೆ ಮೀಸಲಿಡುವ ಜಾಗ ಶೇ.10ರಷ್ಟಿದ್ದರೆ ಸಾಕು ಎಂಬ ನಿಯಮವನ್ನು ಅಳವಡಿಸಲಾಗಿದ್ದು, ಇದರಿಂದ ಶೇ.10ರಷ್ಟು ಸಾರ್ವಜನಿಕ ಬಳಕೆ ಜಾಗ ಕಡಿಮೆಯಾಗಿತ್ತು. ಇದರ ಲಾಭ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಾಗುತ್ತಿತ್ತು ಎಂದು ಶೆಟ್ಟರ್ ಆರೋಪಿಸಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ವಿಧೇಯಕದ ಕಡತವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದು, ಪುನರ್ ಪರಿಶೀಲಿಸುವಂತೆ ಹಲವು ಸಲಹೆಗಳನ್ನು ರಾಜ್ಯಪಾಲರು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin