ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ(ತಿದ್ದುಪಡಿ) 2016ಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ

JagadishSession--01

ಬೆಂಗಳೂರು, ಫೆ.13-ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಸ್ಕೀಂಗಳಲ್ಲಿ ಉದ್ಯಾನವನಗಳು, ಮುಕ್ತ ಸ್ಥಳಗಳಿಗಾಗಿ ಮೀಸಲಿಡಬೇಕಾದ ಪ್ರದೇಶ ಪರಿಷ್ಕರಣೆ ಮಾಡುವ ಉದ್ದೇಶ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ(ತಿದ್ದುಪಡಿ) 2016ಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.  ರಾಜ್ಯ ವಿಧಾನಮಂಡಲದ ಉಭಯ ಸದನಗಳಿಂದ ಅಂಗೀಕಾರವಾಗಿದ್ದ ಈ ವಿಧೇಯಕವನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲರು ಹಿಂದಿರುಗಿಸಿದ್ದರು. ಆ ವಿಧೇಯಕವನ್ನು ಮತ್ತೆ ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಂಡಿಸಿದರು.

ವಿಧೇಯಕ ಕುರಿತು ಮಾತನಾಡಿದ ಶೆಟ್ಟರ್, ಇದೊಂದು ಕರಾಳ ಶಾಸನ ಆಗಿದ್ದು, ಇದನ್ನು ವಿರೋಧಿಸುತ್ತೇವೆ. ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ರಾಜ್ಯಪಾಲರು ವಾಪಸ್ ಕಳುಹಿಸಿದ ಮೇಲೆ ಮತ್ತೆ ಮಂಡಿಸುವುದಿಲ್ಲ ಎಂದು ಭಾವಿಸಿದ್ದೆವು. ಆದರೆ, ಸರ್ಕಾರ ಮತ್ತೆ ಮಂಡನೆ ಮಾಡಿದೆ ಎಂದರು.  ಜೆಡಿಎಸ್‍ನ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಈ ಹಿಂದೆ ಚರ್ಚೆಯಿಲ್ಲದೆ ಮಂಡನೆ ಆಗಿದ್ದು, ಇದಕ್ಕೆ ತಮ್ಮ ತೀವ್ರ ವಿರೋಧವಿದೆ. ಶಾಸಕರನ್ನು ಹೊರಗಿಡುವ ಹುನ್ನಾರ ಅಡಗಿದೆ ಎಂದು ಟೀಕಿಸಿದರು.   ಜೆಡಿಎಸ್‍ನ ಮತ್ತೊಬ್ಬ ಶಾಸಕ ಜಿ.ಟಿ.ದೇವೇಗೌಡ ಅವರು ತೀವ್ರ ವಿರೋಧ ವ್ಯಕ್ತಪಡಿಸಿ, ನಗರಾಭಿವೃದ್ಧಿ ಎಂದರೆ ಸಿಎ ಸೈಟ್, ಪಾರ್ಕ್‍ಗಳು ಮಾತ್ರ ಕಾಣುತ್ತವೆ. ಮುಕ್ತ ಸ್ಥಳದ ಪ್ರಮಾಣ ಕಡಿಮೆ ಮಾಡಬಾರದು ಎಂದು ಮನವಿ ಮಾಡಿದರು.

ಬಿಜೆಪಿ ಶಾಸಕ ಸುರೇಶ್‍ಕುಮಾರ್ ಮಾತನಾಡಿ, ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳು ಖಾಸಗಿ ಬಡಾವಣೆಗಳಿಗೆ ಮಾದರಿ ಆಗುವ ಬದಲು ಖಾಸಗಿ ಬಡಾವಣೆಗಳೇ ಮಾದರಿ ಆಗುತ್ತವೆ. ಪರಿಸರ ಹಾಳು ಮಾಡುವ, ನಗರಾಭಿವೃದ್ಧಿಗೆ ಪಟ್ಟು ಬೀಳುವ, ಆದಾಯಗಳಿಕೆ ಬಗ್ಗೆ ಚಿಂತಿಸುವ ವಿಧೇಯಕ ಆಗಿದೆ. ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಬಿಜೆಪಿ ಶಾಸಕ ಎಚ್.ಬೋಪಯ್ಯ ಜೆಡಿಎಸ್ ಶಾಸಕ ಕೋನರೆಡ್ಡಿ ಅವರು ಸಹ ತೀವ್ರ ವಿರೋಧ ವ್ಯಕ್ತಪಡಿಸಿದರು.  ಆಡಳಿತ ಪಕ್ಷದ ರಫೀಕ್ ಮಾತನಾಡಿ, ಶಾಸಕರನ್ನು ಹೊರಗಿಟ್ಟಿರುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.

ವಿಧೇಯಕದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿದ್ಯುತ್ ಸರಬರಾಜು ಕಂಪೆನಿಯ ಒಬ್ಬ ಪ್ರತಿನಿಧಿ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಒಬ್ಬ ಪ್ರತಿನಿಧಿ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಹಕಾರ ಸಂಘದ ಡೆಪ್ಯುಟಿ ರಿಜಿಸ್ಟ್ರಾರ್ ಸೇರಿಸುವುದಕ್ಕೆ ಉಪಬದ್ಧ ಕಲ್ಪಿಸಲು ತಿದ್ದುಪಡಿ ವಿಧೇಯಕ ತರಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಮರ್ಥಿಸಿಕೊಂಡರು.  ಪ್ರತಿ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿದ್ದರಿಂದ ಗೊಂದಲ ನಿವಾರಿಸಲು ಮರು ಪರಿಶೀಲಿಸಲಾಗುವುದು. ಹೀಗಾಗಿ ಅಂಗೀಕಾರ ಮಾಡುವುದನ್ನು ವಿಳಂಬ ಮಾಡಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin