ಕರ್ನಾಟಕ ಬಂದ್‌ಗೆ ವಿವಿಧ ಸಂಘ-ಸಂಸ್ಥೆಗಳ ಬೆಂಬಲ

Spread the love

karnataka-bandh

ಬೆಂಗಳೂರು, ಸೆ.8- ಸುಪ್ರೀಂಕೋರ್ಟ್ ತೀರ್ಪು ವಿರೋಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆದಿರುವ ನಾಳಿನ (ಸೆ.9) ಬಂದ್‌ಗೆ ಅನೇಕ ಸಂಘ-ಸಂಸ್ಥೆಗಳು ವ್ಯಾಪಕ ಬೆಂಬಲ ನೀಡಿವೆ. ಅಖಿಲ ಕರ್ನಾಟಕ ಕನ್ನಡ ಕಣ್ಮಣಿ ಡಾ.ರಾಜ್ ಸಾಂಸ್ಕೃತಿಕ ಸಂಸ್ಥೆ, ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್, ನೃಪತುಂಗ ಕನ್ನಡ ಪರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ, ಕೆಮಿಸ್ಟ್ಸ್ ಆಂಡ್ ಡಗ್ಗಿಸ್ಟ್ಸ್ ಅಸೋಸಿಯೇಷನ್, ಉತ್ತರ ಕರ್ನಾಟಕ ನವ ನಿರ್ಮಾಣ ವೇದಿಕೆ ಸೇರಿದಂತೆ ರಾಜ್ಯಾದ್ಯಂತ ನೂರಾರು ಸಂಘಟನೆಗಳು ತಮ್ಮ ಬೆಂಬಲ ನೀಡಲಿವೆ.

ರಾಜ್ ಸಾಂಸ್ಕೃತಿಕ ಸಂಸ್ಥೆ: ನಾಳಿನ ಬಂದ್‌ಗೆ ನಮ್ಮ ಸಂಸ್ಥೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿರುವ ಸಂಘಟನೆಯ ಅಧ್ಯಕ್ಷ ಧರಣೇಶ್‌ಗೌಡ ಬಿ.ವಿ. ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಜೆಡಿಯು, ಎಡಪಕ್ಷಗಳು ಎಲ್ಲರೂ ಪಕ್ಷಾತೀತವಾಗಿ ಹೋರಾಟವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.  ಇದೇ ವೇಳೆ ಕಾವೇರಿ, ಮಹದಾಯಿ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಲು ರಾಜ್ಯ ವಿಧಾನ ಮಂಡಲದ ತುರ್ತು ಅವೇಶನ ಕರೆಯುವಂತೆಯೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

 ಒಕ್ಕಲಿಗರ ಒಕ್ಕೂಟ ಟ್ರಸ್ಟ್: ನಮಗೇ ಕುಡಿಯಲು ನೀರಿಲ್ಲದಾಗ ತಮಿಳುನಾಡಿಗೆ ನೀರು ಬಿಡಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿರುವ ರಾಜ್ಯ ಒಕ್ಕಲಿಗರ ಟ್ರಸ್ಟ್ ಅಧ್ಯಕ್ಷ ಸಿ.ವಿ.ದೇವರಾಜ್, ಕನ್ನಡ ಹೋರಾಟ ಒಕ್ಕೂಟ ಕರೆದಿರುವ ನಾಳಿನ ಬಂದ್‌ಗೆ ತಮ್ಮ ಟ್ರಸ್ಟ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೃಪತುಂಗ ಕನ್ನಡ ಪ್ರಗತಿಪರ ಸಂಘ: ತಮಿಳುನಾಡಿಗೆ ನೀರು ಬಿಡುವಂತೆ ನ್ಯಾಯಾಲಯ ನೀಡಿರುವ ಆದೇಶ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಾಳೆ ನಡೆಸಲಾಗುವ ಬಂದ್‌ಗೆ ಸಂಘದ ಅಧ್ಯಕ್ಷ ಎನ್.ಗಣೇಶ್‌ಗೌಡ ನೆಲ್ಲಿಗೆರೆ ತಮ್ಮ ಬೆಂಬಲ ಘೋಷಿಸಿದ್ದಾರೆ.

ಸರ್ಕಾರಿ ನೌಕರರ ಸಂಘ: ನೀರು ಬಿಡಬೇಕೆಂಬ ಕೋರ್ಟ್ ತೀರ್ಪು ವಿರೋಸಿ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಡೆಯುವ ಬಂದ್‌ಗೆ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಬಲ ಘೋಷಿಸಿದೆ.

ಹೋಟೆಲ್‌ಗಳ ಸಂಘ: ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ತಾವು ವ್ಯಾಪಕ ಬೆಂಬಲ ನೀಡುವುದಾಗಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.

ಕೆಮಿಸ್ಟ್ಸ್-ಡ್ರಗ್ಗಿಸ್ಟ್ಸ್ ಸಂಘ:

ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಸಿ ನಾಳೆ ರಾಜ್ಯಾದ್ಯಂತ ನಡೆಯಲಿರುವ ಬಂದ್‌ಗೆ ಕೆಮಿಸ್ಟ್ಸ್ ಆಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ.ಮಾಯಣ್ಣ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಉ.ಕ. ನವ ನಿರ್ಮಾಣ ವೇದಿಕೆ: ಸೆ.9ರಂದು (ಶುಕ್ರವಾರ) ನಡೆಯಲಿರುವ ಕಾವೇರಿ ಹೋರಾಟದ ರಾಜ್ಯ ಬಂದ್‌ಗೆ ಉತ್ತರ ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಶಿವಕುಮಾರ್ ಮೇಟಿ (ಅಗ್ನಿ) ಬೆಂಬಲ ಘೋಷಿಸಿದ್ದಾರೆ. ರಾಜ್ಯಾದ್ಯಂತ ನೂರಾರು ಸಂಘ-ಸಂಸ್ಥೆಗಳು, ಚಿತ್ರೋದ್ಯಮ, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ರಂಗಭೂಮಿ ಕಲಾವಿದರು ಬಂದ್‌ಗೆ ಬೆಂಬಲ ಘೋಷಿಸಿದ್ದು, ರಾಜ್ಯಾದ್ಯಂತ ವ್ಯಾಪಕ ಭದ್ರತೆ ಏರ್ಪಡಿಸಲಾಗಿದೆ.

ದಲಿತ, ಅಲ್ಪಸಂಖ್ಯಾತರ ಸಮಿತಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಸಿ ನಡೆಯುತ್ತಿರುವ ನಾಳಿನ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಶ್ರೀರಾಂಪುರದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಓಕಳಿಪುರಂ ಮುಖ್ಯರಸ್ತೆವರೆಗೆ ರ‍್ಯಾಲಿ ನಡೆಸಲಾಗುವುದು ಎಂದು ಕರ್ನಾಟಕ ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ಬಿ.ಎಂ.ಸುರೇಶ್‌ಬಾಬು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin