ಕರ್ನಾಟಕ ಬಂದ್‍ಗೆ ಬಿಬಿಎಂಪಿ ಪರೋಕ್ಷ ಬೆಂಬಲ

Spread the love

BBMP-02

ಬೆಂಗಳೂರು, ಸೆ.7- ಕಾವೇರಿ ವಿಷಯವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ರಾಜ್ಯಕ್ಕೆ ಹಾಗೂ ಬೆಂಗಳೂರಿಗೆ ಕರಾಳವಾಗಿದೆ. ಈ ಹಿನ್ನೆಲೆಯಲ್ಲಿ ಸೆ.9ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬಿಬಿಎಂಪಿ ಪರೋಕ್ಷ ಬೆಂಬಲ ನೀಡಿದೆ.  ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಮಂಜುನಾಥ ರೆಡ್ಡಿ, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ್, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜೆಡಿಎಸ್ ನಾಯಕ ಆನಂದ್ ಮಾತನಾಡಿದರು. ನಮಗೆ ಕುಡಿಯಲೇ ನೀರಿಲ್ಲ. ಆದರೆ ತಮಿಳುನಾಡು ಸರ್ಕಾರ ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ಇದು ನಮ್ಮ ಜನತೆಯ ಸಂಕಷ್ಟಕ್ಕೆ ಎಡೆ ಮಾಡಿದೆ ಎಂದು ಹೇಳಿದರು.

ಪ್ರತಿ ದಿನ 15,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಟ್ಟರೆ ಬೆಂಗಳೂರು, ಮೈಸೂರು, ಮಂಡ್ಯ ಜನರಿಗೆ ಕುಡಿಯಲು ನೀರಿರುವುದಿಲ್ಲ. ಈ ಹಿನ್ನೆಲೆಯಲ್ಲಿ 9 ರಂದು ಕರೆ ನೀಡಿರುವ ಬಂದ್‍ಗೆ ಬಿಬಿಎಂಪಿಯ 198 ಸದಸ್ಯರು ಬೆಂಬಲ ನೀಡುತ್ತೇವೆ. ಆದರೆ ಪ್ರತಿಭಟನೆಗಳು ಶಾಂತಿಯುತವಾಗಿರಬೇಕು ಎಂದು ಅವರು ಹೇಳಿದರು. ಸುಪ್ರೀಂಕೋರ್ಟ್ ತೀರ್ಪನ್ನು ಎಲ್ಲರೂ ಪಾಲನೆ ಮಾಡಲೇಬೇಕು. ಹಾಗೆಯೇ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೂ ನಮ್ಮ ಬೆಂಬಲವಿದೆ. ಸರ್ಕಾರ ಮತ್ತೆ ಮೇಲ್ಮನವಿ ಸಲ್ಲಿಸಿದರೆ ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಮೇಯರ್ ಹೇಳಿದರು.

ಪದ್ಮನಾಭರೆಡ್ಡಿ ಮಾತನಾಡಿ, ಕಾವೇರಿ ಕನ್ನಡಿಗರ ಜೀವ. ನೆಲ, ಜಲ, ಭಾಷೆಯ ವಿಷಯ ಬಂದಾಗ ನಾವೆಲ್ಲಾ ಒಂದು. ಬೆಂಗಳೂರಿನ ಜನತೆ ಹಾಗೂ ರೈತರ ಪರ ನಾವು ಸದಾ ಇರುತ್ತೇವೆ ಎಂದು ಹೇಳಿದರು. ಜಗಳಗಂಟಿ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾದಾಗಲೆಲ್ಲಾ ನೀರಿಗೆ ಕ್ಯಾತೆ ತೆಗೆಯುತ್ತಾರೆ. ಅಧಿಕಾರದ ಲಾಲಸೆಗೆ ಅವರು ಏನೂ ಮಾಡಲು ಸಿದ್ಧರಿರುತ್ತಾರೆ. ಉಂಡು ಹೋದ ಕೊಂಡೂ ಹೋದ ಎಂಬ ಗಾದೆಯಂತೆ ಮಂಡ್ಯದಲ್ಲಿ ಹುಟ್ಟಿ ಹೆಸರಾಂತ ನಟಿಯಾಗಿ ತಮಿಳುನಾಡಿಗೆ ಹೋಗಿ ಮುಖ್ಯಮಂತ್ರಿಯಾಗಿ ಈಗ ನಮ್ಮ ಜಲವನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಜ್ಞರ ಸಮಿತಿ ರಚಿಸಿ ರಾಜ್ಯಕ್ಕೆ ಕುಡಿಯುವ ನೀರು ಎಷ್ಟು ಬೇಕೆಂಬುದನ್ನು ನಿರ್ಧರಿಸಿಕೊಂಡು ನಂತರ ನ್ಯಾಯಾಲಯ ತೀರ್ಪು ಕೊಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ಇನ್ನೆರಡು ಮೂರು ದಿನದಲ್ಲಿ ತಜ್ಞರ ಸಮಿತಿಯನ್ನು ರಾಜ್ಯಕ್ಕೆ ಕಳುಹಿಸಿ ಇಲ್ಲಿನ ಕುಡಿಯುವ ನೀರಿನ ಸ್ಥಿತಿಯನ್ನು ಅರಿತುಕೊಳ್ಳಲಿ ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸುಗ್ರೀವಾಜ್ಞೆ ತಂದು ತಮಿಳುನಾಡಿಗೆ ನೀರು ಬಿಟ್ಟಿರಲಿಲ್ಲ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟತನ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.  ಆನಂದ್ ಮಾತನಾಡಿ, ನೀರಿನ ವಿಷಯದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ಬೆಂಗಳೂರಿಗರಿಗೆ ಕುಡಿಯಲು ನೀರಿಲ್ಲ. ಮಳೆ ಬಾರದಿದ್ದರೆ ಭವಿಷ್ಯವೇ ಕರಾಳವಾಗಲಿದೆ ಎಂದು ವಿಷಾದಿಸಿದರು. ಒಟ್ಟಾರೆ 9ರಂದು ಕರ್ನಾಟಕ ಬಂದ್‍ಗೆ ಬಿಬಿಎಂಪಿ ಪರೋಕ್ಷ ಬೆಂಬಲ ವ್ಯಕ್ತಪಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin