ಕರ್ನಾಟಕ ಬಂದ್ ನಡುವೆಯೇ ಮೈಸೂರಿನಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

BJP-Rath-Yatra--01
ಮೈಸೂರು,ಜ.25-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಲು ವೇದಿಕೆ ಸಜ್ಜುಗೊಳಿಸಿದೆ. ಬಿಜೆಪಿ ಪರಿವರ್ತನಾ ಯಾತ್ರೆ ಪ್ರಯುಕ್ತ ಇಂದು ಸಂಜೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಾಲ್ಗೊಳ್ಳಲಿದ್ದಾರೆ. ಈ ಬೃಹತ್ ಸಮಾವೇಶಕ್ಕೆ ಬಂದ್‍ನಿಂದಾಗಿ ಕೆಲ ಅಡಚಣೆ ಉಂಟಾಯಿತು. ಸಮಾರಂಭ ನಡೆಯುವ ಮಹಾರಾಜ್ ಕಾಲೇಜು ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರಾದ್ಯಂತ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದು ಕೇಸರಿಮಯವಾಗಿದೆ.

ಒಂದು ಲಕ್ಷ ಚದರಡಿ ವಿಸ್ತೀರ್ಣದ ಶಾಮಿಯಾನ ಹಾಕಲಾಗಿದೆ. ಇದರೊಂದಿಗೆ 80*100 ಅಡಿ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯಲ್ಲಿ 80ಕ್ಕೂ ಹೆಚ್ಚು ಮಂದಿ ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಹಿಂಭಾಗ ರೆಸ್ಟ್‍ರೂಮ್ ಸಹ ತೆರೆಯಲಾಗಿದೆ. ಗಣ್ಯರ ವಾಹನಗಳಿಗಿಗಾಗಿಯೇ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 50 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರಿಗೆ ಮೈದಾನದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆ ನಂತರ ಪರಿವರ್ತನಾ ಯಾತ್ರೆ ನಡೆಯಲಿದ್ದು, ಅದಕ್ಕೂ ಮುನ್ನ ಗನ್‍ಹೌಸ್ ಸಮೀಪದಿಂದ ಸಮಾರಂಭ ನಡೆಯುವ ವೇದಿಕೆವರೆಗೂ ಅದ್ಧೂರಿ ಮೆರವಣಿಗೆ ನಡೆಯಲಿದೆ.
ಸಂಜೆ ವಿಶೇಷ ವಿಮಾನದಲ್ಲಿ ಅಮಿತ್ ಷಾ ಆಗಮಿಸಲಿದ್ದು ಒಂದು ಗಂಟೆ ಕಾಲ ಮಾತ್ರ ಸಮಾರಂಭದಲ್ಲಿ ಪಾಲ್ಗೊಂಡು ದೆಹಲಿಗೆ ವಾಪಾಸ್ಸಾಗಲಿದ್ದಾರೆ.

Sri Raghav

Admin