ಕರ್ನಾಟಕ ಬಂದ್ : ಬೇಲೂರಿನಲ್ಲಿ ಯಶಸ್ವಿ

beluru

ಬೇಲೂರು, ಸೆ.10- ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಖಂಡಿಸಿ ವಿವಿಧ ಕನ್ನಡಪರ ಹಾಗೂ ರೈತ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಬೇಲೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೆ, ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು ವಿನೂತನ ರೀತಿಯ ಪ್ರತಿಭಟನೆ ನಡೆಸಿದವುಕಾರ್ಯ ನಿರ್ವಹಿಸುತ್ತಿದ್ದ ಕೆಲವೊಂದು ಸರ್ಕಾರಿ ಕಚೇರಿಗಳನ್ನು ಸಂಘಟನೆಗಳವರು ಬಲವಂತವಾಗಿ ಬಾಗಿಲು ಹಾಕಿಸಿದರೆ, ಹಳೇಬೀಡು ರಸ್ತೆಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಪೆಟ್ರೋಲ್ ಬಂಕ್‍ನ್ನು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟಸಿ ಪೆಟ್ರೋಲ್ ಹಾಕದಂತೆ ಎಚ್ಚರಿಸಿ ಬಂದ್‍ಗೆ ಸಹಕರಿಸುವಂತೆ ಹೇಳಿದರು.
ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಜಯಲಲಿತರ ಶವ ಯಾತ್ರೆ ನಡೆಸಿ ಪ್ರತಿಕೃತಿಸುಡುವ ಮೂಲಕ ಆಕ್ರೊಶ ವ್ಯಕ್ತಪಡಿಸಿದರು.
ಇವರೊಂದಿಗೆ ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘ , ರೈತ ಸಂಘ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕರವೆ ಪ್ರವೀಣ ಶಟ್ಟಿ ಭಣ, ವೀರಕನ್ನಡಿಗ ಟಿಪ್ಪು ಸೇನೆ, ಬಿ,ಎಸ್,ಪಿ ಕಾರ್ಯಕರ್ತರು ಸೇರಿದಂತೆ ಪುರಸಭಾ ಅಧ್ಯಕ್ಷರು ಮತ್ತು ಕೆಲ ಸದಸ್ಯರು, ಸವಿತ ಸಮಾಜ, ಹಾಗೂ ಇನ್ನಿತರ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟದ ರೈತರಿಗೆ ಪ್ರತಿಭಾರಿ ಅನ್ಯಾಯವಾಗುತ್ತಿದ್ದು, ಸುಪ್ರಿಂ ಕೊರ್ಟ್‍ನಲ್ಲಿ ಕರ್ನಾಟಕದ ಪರವಾಗಿ ವಾದ ಮಾಡುತ್ತಿರುವ ನಾರಿಮಾನ್‍ಗೆ ನಮ್ಮ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ನಮ್ಮ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕರ್ನಾಟಕದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇದ್ದು ನೀರಿಲ್ಲದೆ ರಾಜ್ಯದ ಅಣೇಕಟ್ಟುಗಳು ಬರಿದಾಗಿವೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ಕಾವೇರಿ ಹಾಗೂ ಕಬಿನಿ ಜಲಾಷಯದಿಂದ ನೀರು ಹರಿಸುತ್ತಿರುವುದು ನಮ್ಮ ದುರದೃಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಸಾಪ ಅಧ್ಯಕ್ಷ ದಯಾನಂದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರು ಮೊದಲೇ ಜಾಗೃತಿ ವಹಿಸಿದ್ದರೆ ಸುಪ್ರೀಂಕೋರ್ಟ್‍ನಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿರಲಿಲ್ಲ. ಆದ್ದರಿಂದ ತಮಿಳುನಾಡಿಗೆ ರಾಜ್ಯದಿಂದ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೊರಾಟ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಪುರಸಭಾಧ್ಯಕ್ಷ ಶ್ರೀನಿಧಿ, ಬಿಜೆಪಿ ರಾಜ್ಯ ಸಮಿತಿ ರೇಣುಕುಮಾರ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಅರುಣ್‍ಕುಮಾರ್, ಜಿಲ್ಲಾ ಉಪಾಧ್ಯಕ್ಷ ಸೋಮೇಶ್, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಧರ್ಮಯ್ಯ, ಸತೀಶ್, ಕರವೇ ಚಂದ್ರಶೇಖರ್, ಯೋಗೀಶ್, ಯಮಸಂದಿ ಗ್ರಾಪಂ ಅಧ್ಯಕ್ಷ ಪ್ರದೀಪ್, ಮುದ್ದಮ್ಮ, ಇಂದ್ರಮ್ಮ ಇನ್ನಿತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Sri Raghav

Admin