ಕರ್ನಾಟಕ ಬಂದ್’ಗೆ ನೀರಸ ಪ್ರತಿಕ್ರಿಯೆ

Spread the love

Karnataka-Bandh

ಬೆಂಗಳೂರು,ಜೂ.12-ರೈತರ ಸಾಲಮನ್ನಾ, ಎತ್ತಿನಹೊಳೆ ಹಾಗೂ ಮಹದಾಯಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸೇರಿದಂತೆ ನಾಡಿನ ಪ್ರಚಲಿತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್‍ಗೆ ರಾಜಧಾನಿ ಬೆಂಗಳೂರಿನಲ್ಲಿ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ.   ಬೆಳಗಿನಿಂದಲೇ ನಗರದಲ್ಲಿ ಕೆಎಸ್‍ಆರ್‍ಟಿಸಿ, ಬಿಬಿಎಂಟಿಸಿ, ಟ್ಯಾಕ್ಸಿ, ಊಬರ್, ಆಟೋ ಸೇರಿದಂತೆ ಸಾರಿಗೆ ಸಂಚಾರ ಎಂದಿನಂತೆ ಸಹಜ ಸ್ಥಿತಿಯಲ್ಲಿತ್ತು. ವಾರದ ಪ್ರಾರಂಭದ ದಿನವಾದ ಇಂದು ಬಂದ್‍ನಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು.
ಬಂದ್‍ಗೆ ಬೆಂಬಲ ನೀಡಬೇಕೆ, ಬೇಡವೇ ಎಂಬ ಬಗ್ಗೆ ಕನ್ನಡಪರ ಸಂಘಟನೆಗಳಲ್ಲಿ ಪ್ರಾರಂಭದಲ್ಲೇ ಒಡಕು ಉಂಟಾಗಿತ್ತು. ಹೀಗಾಗಿ ಬಂದ್‍ನ ಬಿಸಿ ಬೆಂಗಳೂರಿನಲ್ಲಿ ಅಷ್ಟು ಪರಿಣಾಮ ಬೀರದೆ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುವ ಬಿಟ್ಟರು.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಲಾರಿ ಮಾಲೀಕರ ಸಂಘ, ಕರವೇ ಪ್ರವೀಣ್ ಶೆಟ್ಟಿ ಬಣ, ಕನ್ನಡ ಸೇನೆ, ರೈತ ಸಂಘ, ಬಯಲು ಸೀಮೆ ಹೋರಾಟಗಾರರ ಸಮಿತಿ ಬೆಂಬಲ ಘೋಷಿಸಿದ್ದವು.   ಇಂದಿನ ಬಂದ್‍ಗೆ ಕರವೇ ನಾರಾಯಣಗೌಡ ಬಣ, ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ, ಬಿಎಂಟಿಸಿ ನೌಕರರ ಸಂಘ, ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಹೋಟೆಲ್  ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಪೆಟ್ರೋಲ್  ಬಂಕ್ ಮಾಲೀಕರ ಸಂಘ ಬೆಂಬಲ ಸೂಚಿಸಿರಲಿಲ್ಲ.

ಬಂದ್‍ನಿಂದ ಖಾಸಗಿ ಶಾಲೆಗಳ ಸಂಘ ಹೊರಗುಳಿದಿದ್ದವು. ಸರ್ಕಾರಿ ಶಾಲೆಗಳು, ಕಚೇರಿಗಳು, ಖಾಸಗಿ ಕಂಪನಿಗಳು, ಐಟಿಬಿಟಿ ಕಂಪನಿಗಳು, ಆಟೋ, ಟ್ಯಾಕ್ಸಿ ಸೇವೆ ಸಹಜ ಸ್ಥಿತಿಯಲ್ಲಿತ್ತು. ಬ್ಯಾಂಕ್ , ಕೋರ್ಟ್ ಕಲಾಪಗಳು ಕೂಡಾ ಎಂದಿನಂತೆ ಸಾಗಿದವು.  ಆದರೆ ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ವಿಶ್ವವಿದ್ಯಾಲಯ ಇವತ್ತು ನಡೆಯಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ. ಪ್ರಥಮ ವರ್ಷದ ಡಿ.ಎಡ್ ಡಿ.ಎಲ್ .ಎಡ್‍ಪರೀಕ್ಷೆಗಳು ಇವತ್ತಿನ ಮಟ್ಟಿಗೆ ರದ್ದಾಗಿದೆ. ಎರಡೂ ಪರೀಕ್ಷೆಗಳು ನಾಳೆ ನಡೆಯಲಿದೆ. ಇವತ್ತು ನಡೆಯಬೇಕಿದ್ದ ವಿಟಿಯು ಇಂಜಿನಿಯರಿಂಗ್ ಪರೀಕ್ಷೆ ಕೂಡಾ ಮುಂದೂಡಲಾಗಿದೆ.

ಬೆಳಗ್ಗೆ ತುಂತುರು ಮಳೆಯ ನಡುವೆಯೇ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಬಸ್ ಹಾಗೂ ಆಟೋದಲ್ಲಿ ತೆರಳುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿದ್ದರೆ ಖಾಸಗಿ ಕಂಪನಿ ನೌಕರರು ಕೆಲಸಕ್ಕೆ ತೆರಳಲು ಬಿಎಂಟಿಸಿ ಬಸ್‍ಗಳಿಗೆ ಮುಗಿಬೀಳುತ್ತಿದ್ದರು.
ಪ್ರಾರಂಭದಲ್ಲಿ ನಗರಕ್ಕೆ ಬರುವ ಬಸ್‍ಗಳನ್ನು ಪ್ರತಿಭಟನಾನಿರತರು ತಡೆಯಲು ಯತ್ನಿಸಿದರು. ಬಲವಂತವಾಗಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಪೊಲೀಸರು ಎಚ್ಚರಿಕೆ ಕೊಟ್ಟ ಕಾರಣ ಹಿಂದೆ ಸರಿದರು.

ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ , ಶಿವಾಜಿನಗರ, ಶಾಂತಿನಗರ, ಪೀಣ್ಯ, ಯಶವಂತಪುರ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬೆಂಗಳೂರಿನಿಂದ ಹೊರಡಬೇಕಿದ್ದ ಪ್ರಯಾಣಿಕರು ಪ್ರಾರಂಭದಲ್ಲಿ ಒಂದಿಷ್ಟು ಪರದಾಡುವಂತಾದರೂ ನಂತರ ಬಸ್ ಸಂಚಾರ ಆರಂಭವಾಯಿತು.
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಎಂದಿನಂತೆ ವಾಣಿಜ್ಯ ವಹಿವಾಟುಗಳು ಸರಾಗವಾಗಿ ನಡೆದವು. ದೂರದ ಊರಿನಿಂದ ತರಕಾರಿ ಸಾಗಾಣಿಕೆ ಮಾಡುತ್ತಿದ್ದ ವಾಹನವು ಎಂದಿನಂತೆ ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿದವು. ಅಲ್ಲದೆ ದಿನಪೂರ್ತಿ ಇಲ್ಲಿ ವಹಿವಾಟು ದಿನನಿತ್ಯದಂತೆ ಜರುಗಿದ್ದು ವಿಶೇಷವಾಗಿತ್ತು.

ಇನ್ನು ಬಂದ್ ಹಿನ್ನೆಲೆಯಲ್ಲಿ ಚಲನಚಿತ್ರ ಮಂದಿರಗಳು ಚಿತ್ರಪ್ರದರ್ಶನವನ್ನು ರದ್ದು ಮಾಡಬೇಕೆ ಬೇಡವೇ ಎಂಬ ಗೊಂದಲದಲ್ಲಿದ್ದವು. ಪ್ರತಿಭಟನೆ ಕಾವು ಚುರುಕುಗೊಳ್ಳುತ್ತಿದ್ದಂತೆ ಮೊದಲ ಪ್ರದರ್ಶನವನ್ನು ಬಹುತೇಕ ಚಿತ್ರಮಂದಿರಗಳು ರದ್ದು ಮಾಡಿದವು.  ಉಳಿದಂತೆ ಪ್ರತಿಭಟನೆಯಲ್ಲಿ ಚಲನಚಿತ್ರ ನಟ-ನಟಿಯರು, ಕಿರಿತೆರೆ ಕಲಾವಿದರು ಭಾಗವಹಿಸುವಂತೆ ಸೂಚನೆ ಕೊಟ್ಟಿರಲಿಲ್ಲ. ಹೀಗಾಗಿ ಪ್ರತಿಭಟನೆಯಲ್ಲಿ ಹೆಚ್ಚಾಗಿ ನಟ, ನಟಿಯರು ಕಂಡುಬರಲಿಲ್ಲ. ಇನ್ನು ಮಾಲ್‍ಗಳಲ್ಲಿ ಎಂದಿನಂತೆ ಚಿತ್ರ ಪ್ರದರ್ಶನಗಳು ನಡೆದವು.

ವಿಧಾನಸೌಧಕ್ಕೆ ಮುತ್ತಿಗೆ ಹಾಕಲುಯತ್ನಿಸಿದ ಪ್ರವೀಣ್‍ಶೆಟ್ಟಿ ಸೇರಿ 70ಮಂದಿ ಪೊಲೀಸ್ ವಶಕ್ಕೆ

ಬೆಂಗಳೂರು, ಜೂ.12-ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಪ್ರತಿಭಟನಾನಿರತ ಕರವೇ ಅಧ್ಯಕ್ಷ ಪ್ರವೀಣ್‍ಶೆಟ್ಟಿ ಹಾಗೂ ಕಾರ್ಯಕರ್ತರನ್ನು ಮೇಖ್ರಿ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು.  ಇಂದು ಬೆಳಗ್ಗೆ ಬೆಂಬಲಿಗರೊಂದಿಗೆ ಪ್ರವೀಣ್‍ಶೆಟ್ಟಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ಮೇಖ್ರಿ ವೃತ್ತದಲ್ಲಿ ಇವರನ್ನು ತಡೆದ ಪೊಲೀಸರು ಪ್ರವೀಣ್‍ಶೆಟ್ಟಿ ಮತ್ತು ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತಿದ್ದ 50ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.


ಬಸ್ ಸಂಚಾರದಲ್ಲಿ ವ್ಯತ್ಯಯ ಇಲ್ಲ: ರಾಮಲಿಂಗಾರೆಡ್ಡಿ 

ಬೆಂಗಳೂರು, ಜೂ.12-ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‍ನಿಂದ ರಾಜ್ಯಾದ್ಯಂತ ಯಾವುದೇ ರೀತಿಯ ತೊಂದರೆ ಎದುರಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಾಯುವ್ಯ, ಈಶಾನ್ಯ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಿಲ್ಲ. ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲೂ ಬಂದ್‍ನಿಂದ ಬಸ್ ಸಂಚಾರಕ್ಕೆ ತೊಂದರೆ ಎದುರಾಗಿಲ್ಲ ಎಂದು ಮಾಹಿತಿ ನೀಡಿದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿದ್ದು, ಈ ಭಾಗದ ಕೆಎಸ್‍ಆರ್‍ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಉಳಿದಂತೆ ಎಲ್ಲೆಡೆ ಸಹಜ ಸ್ಥಿತಿಯಲ್ಲಿ ಬಸ್‍ಗಳು ಸಂಚಾರ ನಡೆಸಿವೆ ಎಂದು ವಿವರಿಸಿದರು.


ಕರ್ನಾಟಕ ಬಂದ್‍ : ಬೆಂಗಳೂರಿನಾದ್ಯಂತ ಭಾರೀ ಭದ್ರತೆ : 

ಬೆಂಗಳೂರು,ಜೂ.12-ಕರ್ನಾಟಕ ಬಂದ್‍ಗೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಬೆಳಗಿನಿಂದಲೇ ನಗರದಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. 40 ಕೆಎಸ್‍ಆರ್‍ಪಿ, 15 ಸಿಎಆರ್, ಕ್ಷಿಪ್ರದಳ ಸೇರಿದಂತೆ ಆಯಾ ವಲಯದ ಡಿಸಿಪಿಯಿಂದ ಹಿಡಿದು ಪೊಲೀಸ್ ಪೇದೆವರೆಗೂ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

ಖುದ್ದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಮುಂಜಾನೆಯಿಂದಲೇ ನಗರದ ಅನೇಕ ಕಡೆ ಹಿರಿಯ ಅಧಿಕಾರಿಗಳೊಂದಿಗೆ ತೆರಳಿ ಪರಿಸ್ಥಿತಿಯನ್ನು ಪರಾಮರ್ಶಿಸಿದರು.   ಕೆಂಪೇಗೌಡ ಬಸ್ ನಿಲ್ದಾಣ , ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಶಾಂತಿನಗರ, ಯಶವಂತಪುರ, ಪೀಣ್ಯ ಸೇರಿದಂತೆ ಮತ್ತಿತರ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಯನ್ನು ಒದಗಿಸಲಾಗಿತ್ತು.

ಕೆಲವು ಕಡೆ ಖುದ್ದು ಪೊಲೀಸರೇ ಪ್ರಯಾಣಿಕರಿಗೆ ಬಸ್‍ನಲ್ಲಿ ತೆರಳಲು ಅನುವು ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದರು. ಕೆಲವು ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿ ದುರ್ಲಾಭ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಪಗಾವಲು ಹಾಕಲಾಗಿತ್ತು.   ಬಲವಂತವಾಗಿ ಯಾರೊಬ್ಬರು ಬಂದ್‍ಗೆ ಒತ್ತಡ ಹಾಕದಂತೆ ಸಂಘಟನೆಯ ಮುಖಂಡರಿಗೆ ಸೂಚನೆ ಕೊಡಲಾಗಿತ್ತು. ಕೆಲವು ಕಡೆ ಬಲವಂತವಾಗಿ ಅಂಗಡಿಗಳು, ಹೋಟೆಲ್‍ಗಳು, ಕಿರಣಿ ಅಂಗಡಿಗಳನ್ನು ಮುಚ್ಚಿಸಲು ಯತ್ನಿಸಿದವರನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಳದ ಮಾನ್ಯತಾಟೆಕ್ ಪಾರ್ಕ್ ಬಳಿ ಪ್ರತಿಭಟನಾಕಾರರು ದಾಳಿ ನಡೆಸಲು ಯತ್ನಿಸಿದರಾದರೂ ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೇ ರೀತಿ ನಗರದ ಕೆಲವು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದಲೇ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ಬೆಂಗಳೂರಿನಿಂದ ತಮಿಳುನಾಡು, ಮಹಾರಾಷ್ಟ್ರ , ಕೇರಳ ಸೇರಿದಂತೆ ಮತ್ತಿತರ ಭಾಗಗಳಿಗೆ ತೆರಳುವ ವಾಹನಗಳಿಗೆ ಭದ್ರತೆಯನ್ನು ನೀಡಲಾಗಿತ್ತು. ಅಲ್ಲದೆ ಹೊರಭಾಗಗಳಿಂದ ನಗರಕ್ಕೆ ಪ್ರವೇಶಿಸುವ ವಾಹನಗಳಿಗೆ ಗಸ್ತು ನೀಡಲಾಗಿತ್ತು.   ಜೊತೆಗೆ ನಗರದ ವಿವಿಧ ಕಡೆ ವಾಹನಗಳನ್ನು ಬಿಗಿ ತಪಾಸಣೆ ನಡೆಸಿಯೇ ಒಳಬಿಡಲಾಗುತ್ತಿತ್ತು. ಪ್ರಮುಖವಾಗಿ ಆನೇಕಲ್, ಹೊಸೂರು, ನೆಲಮಂಗಲ, ದೇವನಹಳ್ಳಿ ಚೆಕ್‍ಪೋಸ್ಟ್ ಬಳಿ ತಪಾಸಣೆ ನಡೆಸಿ ವಾಹನಗಳನ್ನು ಒಳಬಿಡಲಾಗುತ್ತಿತ್ತು.   ಒಟ್ಟಿನಲ್ಲಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸಿದ ಪರಿಣಾಮ ಬಂದ್‍ನ ಬಿಸಿ ತಟ್ಟದೆ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ

Chikkaballapur 3

ಚಿಕ್ಕಬಳ್ಳಾಪುರ

Chikkaballapur1


ರಾಯಚೂರು :

ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಯಚೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿನಂತೆ ಆಟೋ, ಬಸ್ ಸಂಚಾರ ಆರಂಭಿಸಿವೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin