ಕರ್ನಾಟಕ ಸರ್ಕಾರದ ಗಡಿ ಬಗೆಗಿನ ಸಡಿಲ ನೀತಿಯೇ ಎಂಇಎಸ್ ಪ್ರಾಬಲ್ಯಕ್ಕೆ ಕಾರಣ

MES

ಬೆಳಗಾವಿ, ಮೇ 23- ಕರ್ನಾಟಕ ಸರ್ಕಾರದ ಗಡಿ ಬಗೆಗಿನ ಸಡಿಲ ನೀತಿಯೇ ಎಂಇಎಸ್ ಪ್ರಾಬಲ್ಯಕ್ಕೆ ಕಾರಣವಾಗಿದೆ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಆರೋಪಿಸಿದರು.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸರ್ಕಾರ ಎಂಇಎಸ್ ಬಗ್ಗೆ ಮೃದುಧೋರಣೆ ತಾಳುತ್ತಿದೆ. ಗಡಿ ನೀತಿಯಿಲ್ಲ. ಕಠಿಣ ಕ್ರಮ ಕೈಗೊಳ್ಳದೆ ಹೋದರೆ ಬೆಳಗಾವಿಯಲ್ಲಿ ಕನ್ನಡ ಉಳಿಯುವುದೇ ಕಷ್ಟ ಎಂದರು.  ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಅಲ್ಲಿನ ಸರ್ಕಾರ ಕನ್ನಡದ ದಾಖಲೆ ಕೊಡಲಿ. ನಂತರ ಇಲ್ಲೂ ಮರಾಠರಿಗೆ ಮರಾಠಿ ದಾಖಲೆ ಕೊಡುವುದರಲ್ಲಿ ಅಭ್ಯಂತರವಿಲ್ಲ ಎಂದರು.


ಕನ್ನಡ ಪರ ಹೋರಾಟಗಾರರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದ ಚಂದರಗಿ, ನಾವೇನು ನಾಡದ್ರೋಹಿಗಳೇ ಎಂದು ಪ್ರಶ್ನಿಸಿದರು. ಎಂಇಎಸ್ ತನ್ನ ಪ್ರಾಬಲ್ಯ ಕಳೆದು ಕೊಳ್ಳುತ್ತಿದೆ. ಅದರ ಅಸ್ತಿತ್ವಕ್ಕಾಗಿ ಕಿರಣ ಠಾಕೂರ್ ಅವರು ಕ್ಯಾತೆ ತೆಗೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಚುನಾವಣೆಗೆ ನಿಂತು ಗೆದ್ದು ಬರಲಿ ಎಂದು ಸವಾಲು ಹಾಕಿದ ಅವರು ಪ್ರಜ್ಞಾವಂತ ಮರಾಠಿಗರು ಕನ್ನಡಕ್ಕೆ ಬೆಂಬಲಿಸುತ್ತಿದ್ದಾರೆ ಎಂದರು.
ಕೇಂದ್ರದ ಭಾಷಾ ಅಲ್ಪಸಂಖ್ಯಾತರ ಆಯೋಗ ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳ ಮರಾಠಿ ಹಾಗೂ ಕನ್ನಡ ಮುಖಂಡರ ಸಭೆ ಕರೆಯಬೇಕು ಎಂದ ಅವರು ಸಭೆಯಲ್ಲಿ ನೆಲ ಜಲ ವಿಷಯ ಕುರಿತು ಎರಡೂ ರಾಜ್ಯಗಳಿಗೆ  ಸಮಾನ ಅವಕಾಶ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಮಹಾರಾಷ್ಟ್ರ ಗಡಿ ಭಾಗದ ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ ಎಂದು ವಿಷಾಧಿಸಿದ ಚಂದರಗಿ ಅಲ್ಲಿನ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ. ಆದರೆ ಇಲ್ಲಿನ ಮರಾಠಿಗರಿಗೆ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin