ಕಲಬುರಗಿಯಲ್ಲಿ 2 ದಿನಗಳ ಬಿಜೆಪಿ ಕಾರ್ಯಕಾರಿಣಿ (All Updates)

Spread the love

BJP-Kalaburagi

ಬೆಂಗಳೂರು, ಜ.21-ಸಂಗೊಳ್ಳಿರಾಯಣ್ಣ ಬ್ರಿಗೇಡ್ ಹಾಗೂ ಪದಾಧಿಕಾರಿಗಳ ನೇಮಕಾತಿ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಬಿಸಿಲನಾಡು ಕಲಬುರಗಿಯಲ್ಲಿ ಇಂದು ಬಿಜೆಪಿಯ 2 ದಿನಗಳ ಕಾರ್ಯಕಾರಿಣಿ ಆರಂಭವಾಯಿತು. ಇಲ್ಲಿ ನ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ಹರವಾಡ ಕಲ್ಯಾಣಮಂಟಪದಲ್ಲಿ ಆರಂಭವಾಗಿರುವ ಕಾರ್ಯಕಾರಿಣಿಯಲ್ಲಿ ವಿವಾದದ ಕೇಂದ್ರಬಿಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡ ಕೆ.ಎಸ್.ಈಶ್ವರಪ್ಪ ಮುಖಾಮುಖಿಯಾಗಿದ್ದು ವಿಶೇಷವಾಗಿತ್ತು. ಕಳೆದ ಒಂದು ತಿಂಗಳಿನಿಂದ ಪರಸ್ಪರ ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆದು ಜನತೆಗೆ ಪುಕ್ಕಟೆ ಮನರಂಜನೆ ನೀಡಿದ್ದರು. ಇಂದು ವೇದಿಕೆಯಲ್ಲಿ ಆಸೀನರಾಗಿದ್ದರೂ ಮಾತುಕತೆಯಾಗಲಿ, ಉಭಯ ಕುಶಲೋಪರಿ ನಡೆಯಲಿಲ್ಲ.

ವೇದಿಕೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್‍ಕುಮಾರ್, ರಮೇಶ್ ಜಿಗಜಿಣಗಿ, ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್ ಸೇರಿದಂತೆ ಮತ್ತಿತರರು ಆಸೀನರಾಗಿದ್ದರು. ಉಭಯ ನಾಯಕರ ನಡುವೆ ಸಂಧಾನ ನಡೆಸಲು ಪ್ರಮುಖರು ಪ್ರಯತ್ನಿಸಿದರಾದರೂ ಪರಸ್ಪರ ಒಬ್ಬರ ಮುಖ ಇನ್ನೊಬ್ಬರು ನೋಡದಷ್ಟು ನಾನೊಂದು ತೀರಾ.. ನೀನೊಂದು ತೀರ ಎನ್ನುವಂತೆ ಮೊಗಂ ಆಗಿಯೇ ಕುಳಿತಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯಡಿಯೂರಪ್ಪ ಪಕ್ಷದಲ್ಲಿ ಅಶಿಸ್ತಿಗೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ. ಯಾವುದೇ ಚಟುವಟಿಕೆಗಳು ಪಕ್ಷದ ಚೌಕಟ್ಟಿನಲ್ಲೇ ಜರುಗಬೇಕೆಂದು ಪರೋಕ್ಷವಾಗಿ ಸಂಗೊಳ್ಳಿರಾಯಣ್ಣ ಬ್ರಿಗೇಡ್‍ಗೆ ಕಡಿವಾಣ ಹಾಕುವಂತೆ ಈಶ್ವರಪ್ಪ ಅವರಿಗೆ ತಾಕೀತು ಮಾಡಿದರು.

ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪಕ್ಷದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಮುಂದೆ ಪಕ್ಷದ ಅಶಿಸ್ತಿಗೆ ಆಸ್ಪದ ನೀಡುವುದಿಲ್ಲ. ಪ್ರತಿಯೊಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಬೇಕೆಂದು ಸೂಚಿಸಿದರು. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು. ಬರಗಾಲ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ, ಗುಳೇ ಹೋಗುತ್ತಿರುವುದನ್ನು ತಪ್ಪಿಸುವುದು ಸೇರಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಯಡಿಯೂರಪ್ಪ ಕಿವಿಮಾತು ಹೇಳಿದರು.

ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಬಳಿ ಕೊಂಡೊಯ್ಯಬೇಕು. ಕೇಂದ್ರದ ಅನುದಾನವನ್ನು ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಬರ ಪರಿಹಾರ ಕಾರ್ಯಗಳು ಎಷ್ಟರಮಟ್ಟಿಗೆ ಅನುಷ್ಠಾನವಾಗಿವೆ ಎಂಬುದನ್ನು ಅವಲೋಕಿಸಬೇಕು. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಎಲ್ಲರೂ ಅಲಸ್ಯ ಬಿಟ್ಟು ಸಕ್ರಿಯರಾಗಬೇಕೆಂದು ಸೂಚಿಸಿದ್ದಾರೆ.
ಮುಂದೆ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ. ಆಗಿರುವ ಪ್ರಮಾದಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಲಾಗುವುದು. ಕಾರ್ಯಕರ್ತರೆಲ್ಲರೂ ಒಗ್ಗೂಡಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕರೆ ಕೊಟ್ಟರು.

ಇದಕ್ಕೂ ಮುನ್ನ ಸದಾನಂದಗೌಡ ಮಾತನಾಡಿ, ನಮ್ಮಲ್ಲಿನ ಒಡಕುಗಳು ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಹಿಂದೆ ಈ ರೀತಿ ಪ್ರಮಾದಗಳು ನಡೆದಿದ್ದರಿಂದ ಏನೆಲ್ಲಾ ಅನಾಹುತಗಳು ಸಂಭವಿಸಿದೆ ಎಂಬುದನ್ನು ಅವಲೋಕಿಸಬೇಕು. ಮುಂದೆ ಈ ರೀತಿ ಆಗದಂತೆ ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆ ಬದಿಗೊತ್ತಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.  ಕಾರ್ಯಕಾರಿಣಿಯಲ್ಲಿ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು, ಜಿಲ್ಲಾ ಉಪಾಧ್ಯಕ್ಷರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಶಾಸಕರು, ಮುಖಂಡರು ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ಭಾಗವಹಿಸಿದ್ದರು.

> ರೈತರ ಸಾಲ ಮನ್ನಾ ಮಾಡಲಿ, ಇಲ್ಲ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಯಡಿಯೂರಪ್ಪ ಗುಡುಗು 
ಕಲಬುರಗಿ, ಜ.21- ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ರೈತರ ಸಾಲ ಮನ್ನಾ ಮಾಡಲಿ, ಇಲ್ಲ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದಿಲ್ಲಿ ಗುಡುಗಿದರು.  ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಬಿಎಸ್‍ವೈ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತೀವ್ರ ಬರವಿದ್ದರೂ ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿದೆ. ಸಾಲ ಮನ್ನಾ ಮಾಡಿ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು. ಬಿಜೆಪಿ ಕಾರ್ಯಕಾರಿಣಿ ಮೂಲಕ ಸರ್ಕಾರ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲವಿದ್ದರೂ ಅದನ್ನು ಹೇಗೆ ಎದುರಿಸಬೇಕೆಂಬ ಸಿದ್ದತೆಗಳನ್ನು ಸರ್ಕಾರ ಮಾಡಿಕೊಂಡಿಲ್ಲ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಕೇವಲ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. ಕೇಂದ್ರತ್ತ ಬೊಟ್ಟು ಮಾಡುವುದನ್ನು ಬಿಟ್ಟು ಬಂದಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದಿರುವ ರಾಜ್ಯದ ಮುಖ್ಯಮಂತ್ರಿ ಬೇಜವಾಬ್ದಾರಿ ಮುಖ್ಯಮಂತ್ರಿ ಎಂದು ಬಿಎಸ್‍ವೈ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಮುಗಿಲುಮುಟ್ಟಿದೆ ಎಂದು ಹರಿಹಾಯ್ದರು. ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮುಂಬರುವ 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

>  ಕಾರ್ಯಕಾರಿಣಿಯಲ್ಲಿ ಪಕ್ಷದ ಗೊಂದಲಗಳ ಬಗ್ಗೆ ಚರ್ಚೆ ನಡೆಸುವುದಿಲ್ಲ : .ಈಶ್ವರಪ್ಪ
ಕಲ್ಬುರ್ಗಿ,ಜ.21-ಕಾರ್ಯಕಾರಿಣಿಯಲ್ಲಿ ಪಕ್ಷದ ಗೊಂದಲಗಳ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಪಕ್ಷ ಸಂಘಟನೆ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ ಎಂದು ಹೇಳಿದರು.  ಕಲ್ಬುರ್ಗಿಯಲ್ಲಿ ಇಂದಿನಿಂದ ನಡೆಯಲಿರುವ ಬಿಜೆಪಿ ಕಾರ್ಯಕಾರಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕಾರಿಣಿಯಲ್ಲಿ ಪಕ್ಷದ ಗೊಂದಲಗಳ ಬಗ್ಗೆ ಯಾವುದೇ ಚರ್ಚೆ ಇರುವುದಿಲ್ಲ. ನಮ್ಮ ಪಕ್ಷ ಸಂಘಟನೆಯನ್ನು ಬಲಪಡಿಸುವುದು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಬಳಿ ಕೊಂಡೊಯ್ಯುವುದು, ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.  ಅತೃಪ್ತರ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅತೃಪ್ತರ ಪತ್ರಕ್ಕೆ ನಾನು ಸಹಿ ಹಾಕಿಲ್ಲ. ಹೀಗಾಗಿ ಯಡಿಯೂರಪ್ಪನವರು ನನ್ನನ್ನು ಸಭೆಗೆ ಕರೆದಿಲ್ಲ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಗೊಂದಲವಿದೆ. ಒಂದೇ ತಾಯಿಯ ಮಕ್ಕಳಲ್ಲಿಯೇ ಗೊಂದಲವಿರುತ್ತದೆ. ಅದೇ ರೀತಿ ನಮ್ಮಲ್ಲೂ ಗೊಂದಲವಿದೆ. ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿರುವ ಗೊಂದಲವನ್ನು ಲಾಭ ಮಾಡಿಕೊಂಡು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ಭ್ರಮೆಯಲ್ಲಿದ್ದಾರೆ. ಆದರೆ ಅವರಲ್ಲೇ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿಕೊಳ್ಳಲಿ. ಮುಂದೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ಎಂದು ಹೇಳಿದರು.
ಬ್ರಿಗೇಡ್ ಬಗ್ಗೆ ನೋ ಕಮೆಂಟ್ಸ್ ಎಂದ  ಜಗದೀಶ್ ಶೆಟ್ಟರ್  : 

ಕಲ್ಬುರ್ಗಿ,ಜ.21- ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಲು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಕಾರ ವ್ಯಕ್ತಪಡಿಸಿದರು.
ಮಾಧ್ಯಮಗಳ ಮುಂದೆ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಬ್ರಿಗೇಡ್ ಸಮಾವೇಶದ ಬಗ್ಗೆ ನೋ ಕಮೆಂಟ್ಸ್ ಎಂದು ಸುದ್ದಿಗಾರರ ಪ್ರಶ್ನೆಗೆ ಶೆಟ್ಟರ್ ಪ್ರತಿಕ್ರಿಯಿಸಿದರು.  ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಆಂತರಿಕ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ ಎಂದ ಶೆಟ್ಟರ್, ನಾಳೆ ಅಫ್ಜಲ್‍ಪುರದಲ್ಲಿ ನಡೆಯಲಿರುವ ಬ್ರಿಗೇಡ್ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸದೆ ಮೌನವಹಿಸಿದರು.  ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಹಾಗೂ ಪಕ್ಷ ಸಂಘಟನೆಯ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸಲಿದ್ದೇವೆ ಎಂದರು.  ರಾಜ್ಯ ಸರ್ಕಾರದ ವೈಫಲ್ಯಗಳು, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕೋರ್ ಕಮಿಟಿಯಲ್ಲಿ ಬ್ರಿಗೇಡ್ ಸಮಸ್ಯೆ ಇತ್ಯರ್ಥ : ಶೋಭ ಕರಂದ್ಲಾಜೆ

ಕಲಬುರಗಿ,ಜ.21- ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲ, ಪಕ್ಷ ಸಂಘಟನೆ ಹಾಗೂ ಕೇಂದ್ರ ಯೋಜನೆಗಳ ಜಾರಿ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.   ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಈಶ್ವರಪ್ಪನವರ ನಡುವೆ ಉಂಟಾಗಿರುವ ಅಸಮಾಧಾನ ಹಾಗೂ ಬ್ರಿಗೇಡ್ ಸಮಾವೇಶದ ಬಗ್ಗೆ ಕಾರ್ಯಕಾರಣಿಯಲ್ಲಿ ಚರ್ಚಿಸುವುದಿಲ್ಲ. ಈ ವಿಷಯ ಕುರಿತು ಯಾವುದೇ ತೀರ್ಮಾನಕ್ಕೂ ಕೋರ್ ಕಮಿಟಿ ಸಭೆಯಲ್ಲೇ ನಿರ್ಧಾರವಾಗುವುದು ಎಂದು ತಿಳಿಸಿದರು.
ಪಕ್ಷದಲ್ಲಿನ ಅಸಮಾಧಾನ, ಗೊಂದಲಗಳ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ. ಪಕ್ಷದ ವೇದಿಕೆಯಲ್ಲೇ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುತ್ತೇವೆ, ಮುಖ್ಯವಾಗಿ ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಜನತೆಯ ಹಿತಾಸಕ್ತಿಗೆ ಪೂರಕವಲ್ಲದ ಸರ್ಕಾರ: ಅನಂತ್ ಆರೋಪ

ಕಲ್ಬುರ್ಗಿ,ಜ.21-ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜನತೆಯ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಇಂದಿಲ್ಲಿ ಆರೋಪಿಸಿದರು.
ನಗರದಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ 1782 ಕೋಟಿ ಬರ ಪರಿಹಾರವಾಗಿ ರಾಜ್ಯ ಸರ್ಕಾರಕ್ಕೆ ನೀಡಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಇನ್ನೂ ಬರ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು.  ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ದಿಗೆ ಪೂರಕವಾದ ಕೆಲಸಗಳನ್ನು ಮಾಡುತ್ತಿಲ್ಲ. ಹಾಗಾಗಿ ಇದನ್ನು ಖಂಡಿಸಿ ಬಿಜೆಪಿ ರಾಜ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ. ಇದರಿಂದ ರಾಜ್ಯದ ಸರ್ವತೋಮುಖ ಅಭಿವೃದ್ದಿಯಾಗಲಿದೆ ಎಂದು ಭರವಸೆ ವಕ್ತಪಡಿಸಿ, ಈ ಸಂದೇಶವನ್ನು ರಾಜ್ಯದ ಜನತೆಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.

ಬಿಜೆಪಿಗೂ-ಬ್ರಿಗೇಡ್‍ಗೂ ಸಂಬಂಧವಿಲ್ಲ : ಆರ್.ಅಶೋಕ್ : 
ಕಲಬುರಗಿ, ಜ.21-ಭಾರತೀಯ ಜನತಾ ಪಕ್ಷಕ್ಕೂ ಬ್ರಿಗೇಡ್‍ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಗೇಡ್‍ನ ಗೊಂದಲವನ್ನು ರಾಷ್ಟ್ರೀಯ ನಾಯಕರು ಬಗೆಹರಿಸುತ್ತಾರೆ. ಆದರೆ ಬಿಜೆಪಿಗೂ ಬಿಗ್ರೇಡ್‍ಗೂ ಸಂಬಂಧವಿಲ್ಲ ಎಂದು ಹೇಳಿದರು.
ಬ್ರಿಗೇಡ್ ಮುಖಂಡರನ್ನು ಉಚ್ಚಾಟನೆ ಮಾಡಲು ಅಥವಾ ಬಿಡಲು ರಾಜ್ಯಾಧ್ಯಕ್ಷರಿಗೆ ಪರಮಾಧಿಕಾರವಿದೆ. ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಬಗ್ಗೆಯೂ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
2018ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಸಂಸದ ಪ್ರತಾಪ್‍ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದಲ್ಲೇ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಹಾಗಾಗಿ ಆ ಗೊಂದಲ ಮುಂದುವರೆಯುವುದಿಲ್ಲ. ನಮ್ಮ ನಾಯಕರು ಮುಂದಿನ ಚುನಾವಣೆಯ ನಂತರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin