ಕಲಾಸಿಪಾಳ್ಯ ಬೆಂಕಿ ದುರಂತ : ಬಾರ್ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು
ಬೆಂಗಳೂರು,ಜ.8-ಕಲಾಸಿಪಾಳ್ಯದ ಬಾರ್ನಲ್ಲಿ ಅಗ್ನಿ ದುರಂತ ಉಂಟಾಗಿ ಐದು ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬಾರ್ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅಲ್ಲದೆ ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ವಹಿವಾಟು ನಡೆಸುವ ಸ್ಥಳಗಳಲ್ಲಿ ಸುರಕ್ಷತಾ ವಿಧಾನ ಅಳವಡಿಸಿರುವ ಬಗ್ಗೆ ಪರಿಶೀಲನೆ ನಡೆಸಲು ಅಗ್ನಿಶಾಮಕ ಇಲಾಖೆಗೆ ಸೂಚಿಸಿರುವುದಾಗಿ ಹೇಳಿದರು.
ನಗರದ ಕಲಾಸಿಪಾಳ್ಯದ ಬಾರ್ನಲ್ಲಿ ಉಂಟಾದ ಅಗ್ನಿ ದುರಂತ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಘಟನೆಯಲ್ಲಿ ಮೂವರು ಉಸಿರುಗಟ್ಟಿ, ಇಬ್ಬರು ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ. ಈಗಾಗಲೇ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ರೀತಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದರು.
ಕಾನೂನು ಪ್ರಕಾರ ವಾಣಿಜ್ಯ ವಹಿವಾಟು ನಡೆಸುವ ಸ್ಥಳಗಳಲ್ಲಿ ಅಗ್ನಿಶಾಮಕ ಉಪಕರಣಗಳ ಅಳವಡಿಕೆ ಹಾಗೂ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಈ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಎಲ್ಲ ಕಡೆ ಸುರಕ್ಷತಾ ವಿಧಾನಗಳನ್ನು ಪರಿಶೀಲನೆ ನಡೆಸುವಂತೆ ಅಗ್ನಿಶಾಮಕ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಪ್ರತಿ ವರ್ಷ ಬಾರ್ಗಳ ಲೈಸೆನ್ಸ್ ನವೀಕರಿಸುವ ಸಂದರ್ಭದಲ್ಲಿ ಅಬಕಾರಿ ಇಲಾಖೆ ಹಾಗೂ ಬಿಬಿಎಂಪಿ ಸುರಕ್ಷತಾ ವಿಧಾನಗಳನ್ನು ಪರಿಶೀಲನೆ ನಡೆಸಬೇಕು. ನಗರದಲ್ಲಿ ರಾತ್ರಿ ಒಂದು ಗಂಟೆವರೆಗೂ ಬಾರ್ಗಳನ್ನು ತೆರೆಯಲು ಅವಕಾಶವಿದೆ. ಆದರೆ ಅವಧಿ ಮೀರಿ ಬಾರ್ ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಇಂಹತ ಅಗ್ನಿ ದುರಂತದ ದುರ್ಘಟನೆ ನಡೆಯಬಾರದಿತ್ತು ಎಂದು ಗೃಹಸಚಿವರು ವಿಷಾದಿಸಿದರು.
ಶಾಸಕ ಆರ್.ವಿ.ದೇವರಾಜ್ ಕೂಡ ಅಗ್ನಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.