ಕಲ್ಬುರ್ಗಿ ಬಳಿ ನಾಗರಕೊಯಿಲ್-ಚೆನ್ನೈ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆ
ಕಲ್ಬುರ್ಗಿ, ಅ.5- ನಾಗರಕೊಯಿಲ್-ಚೆನ್ನೈ ಎಕ್ಸ್’ಪ್ರೆಸ್ ರೈಲು ಚಲಿಸುತ್ತಿರುವಾಗಲೇ ಜನರಲ್ ಬೋಗಿಗೆ ಡಕಾಯಿತರ ಗುಂಪು ಪ್ರಯಾಣಿಕರನ್ನು ಚಾಕುವಿನಿಂದ ಇರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ನಗದು ದೋಚಿರುವ ಘಟನೆ ಕಳೆದ ರಾತ್ರಿ ಷಹಬಾದ್ ಬಳಿ ನಡೆದಿದೆ. ಸುಮಾರು ಒಂದು ಗಂಟೆ ಸಂದರ್ಭದಲ್ಲಿ 12ಕ್ಕೂ ಹೆಚ್ಚು ಮಂದಿ ಡಕಾಯಿತರು ಏಕಾಏಕಿ ಬೋಗಿಯೊಳಕ್ಕೆ ನುಗ್ಗಿ ಪ್ರಯಾಣಿಕರನ್ನು ಚಾಕುವಿನಿಂದ ಬೆದರಿಸಿ ಮೈಮೇಲಿದ್ದ ಆಭರಣ ಮತ್ತು ಹಣ ನೀಡುವಂತೆ ಬೆದರಿಸಿದ್ದಾರೆ. ಕೆಲವರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಕೂಡ ಇರಿಯಲಾಗಿದೆ. ಕೂಗಾಟ, ಚೀರಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ಕಂಪಾರ್ಟ್ಮೆಂಟ್ ಜನರು ರೈಲನ್ನು ನಿಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ವಾಡಿ ಜಂಕ್ಷನ್ ಬಳಿ ರೈಲಿನಿಂದ ಇಳಿದು ಡಕಾಯಿತರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಯಾದಗಿರಿ ರೈಲು ನಿಲ್ದಾಣದಲ್ಲಿ ಸುಮಾರು 10 ನಿಮಿಷಗಳ ಕಾಲ ರೈಲು ನಿಲ್ಲಿಸಿ ಗಾಯಗೊಂಡಿರುವವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ತನಿಖೆ ಆರಂಭಿಸಿದ್ದಾರೆ. ಈ ಘಟನೆಯಿಂದಾಗಿ ಕೆಲವು ಪ್ರಯಾಣಿಕರು ಆತಂಕಗೊಂಡು ರೈಲಿನಿಂದ ಇಳಿದು ಬಸ್ನ ಮೂಲಕ ತಮ್ಮ ಪ್ರಯಾಣ ಬೆಳೆಸಿದ್ದಾರೆ.