ಕಳಂಕಿತರ ಚುನಾವಣೆ ಸ್ಪರ್ಧೆ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ
ನವದೆಹಲಿ, ಏ.3-ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಚುನಾವಣೆ ಸ್ಪರ್ಧೆಯಿಂದ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ಪ್ರಶ್ನೆಗಳ ಕುರಿತು ತ್ವರಿತ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಬೇಸಿಗೆ ರಜೆಯಲ್ಲಿ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠದಿಂದ ಇದಕ್ಕೆ ಸಂಬಂಧಪಟ್ಟ ವಿಷಯಗಳ ವಿಲೇವಾರಿಗಾಗಿ ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ವಕೀಲ ಮತ್ತು ದೆಹಲಿ ಬಿಜೆಪಿ ವಕ್ತಾರ ಅಶ್ವಿನ್ ಕುಮಾರ್ ಉಪಾಧ್ಯಾಯ ಈ ಕುರಿತು ವಿಷಯ ಪ್ರಸ್ತಾಪಿಸಿ, ಕಳಂಕಿತ ನಾಯಕರನ್ನು ಚುನಾವಣೆ ಸ್ಪರ್ಧೆಯಿಂದ ದೂರ ಇರಿಸಲು ಸಲ್ಲಿಸಲಾಗಿರುವ ಅರ್ಜಿಯ ತ್ವರಿತ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯವನ್ನು ಕೋರಿದರು. ನಮ್ಮ ದೇಶದ ಪ್ರಜಪ್ರಭುತ್ವಕ್ಕಾಗಿ ಇದೊಂದು ಮುಖ್ಯ ವಿಷಯ. ತ್ವರಿತ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ಕೂಲಂಕಷ ಪರಿಶೀಲನೆಯ ನಂತರವಷ್ಟೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಪೀಠವು ಸ್ಪಷ್ಟಪಡಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS