ಕಳಪೆ ಕಾಮಗಾರಿ : ನಗರಸಭೆ ಆಡಳಿತ ಪಕ್ಷದ ಸದಸ್ಯರಿಂದಲೇ ಆರೋಪ

hiriyuru

ಹಿರಿಯೂರು, ಸೆ.9-ನಗರದ ಪ್ರಮುಖ ದ್ವಿಪಥ ರಸ್ತೆಯ ಅಕ್ಕಪಕ್ಕದ ಮೂರು ಅಡಿ ರಸ್ತೆಗೆ 65 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಹಾಗೂ ನೆಹರೂ ಮೈದಾನಕ್ಕೆ ಮಣ್ಣು ತುಂಬಿಸಿ, ಚರಂಡಿ ವ್ಯವಸ್ಥೆ ಕಲ್ಪಿಸುವ 30 ಲಕ್ಷದ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿದ್ದು, ಲಕ್ಷಾಂತರ ರೂಗಳು ಬೋಗಸ್ ಬಿಲ್ ಮಾಡಲಾಗಿದೆ ಎಂದು ನಗರಸಭೆಯ ಆಡಳಿತ ಪಕ್ಷದ ಸದಸ್ಯರೇ ಆರೋಪಿಸಿದ್ದಾರೆ.ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ನಗರದ ವಿವಿಧೆಡೆ ಉದ್ಯಾನವನಗಳನ್ನು ನಿರ್ಮಿಸಲು ಯೋಜನೆಯ ಕ್ರಿಯಾ ಯೋಜನೆ ಮಂಡಿಸಿ ಕಾಮಗಾರಿ ನಿರ್ವಹಿಸಲು ನಿರ್ಮಿತಿ ಕೇಂದ್ರಕ್ಕೆ ನೀಡುವ ಕುರಿತು ಪೌರಾಯುಕ್ತರು ಪ್ರಸ್ತಾಪಿಸಿದ ಕೂಡಲೇ ಎದ್ದು ನಿಂತ ಆಡಳಿತ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸದಸ್ಯ ಜಬೀವುಲ್ಲಾ, ಉಪಾಧ್ಯಕ್ಷ ರವಿಚಂದ್ರನಾಯ್ಕ್, ಪ್ರೇಮ್‍ಕುಮಾರ್, ಶಿವಣ್ಣ, ವನಿತ ಮೊದಲಾದವರು ಒಕ್ಕೊರಲ ಆರೋಪ ಮಾಡಿ ನಿರ್ಮಿತಿ ಕೇಂದ್ರಕ್ಕೆ ಯಾವುದೇ ಕಾರಣಕ್ಕೂ ಕಾಮಗಾರಿ ನಿರ್ವಹಣೆ ಮಾಡಬಾರದೆಂದು ಆಗ್ರಹಿಸಿದರು.

ಈ ಮಧ್ಯೆ ನಿರ್ಮಿತಿ ಕೇಂದ್ರದ ವಿರುದ್ಧ ಮತ್ತಷ್ಟು ಆರೋಪ ಮಾಡಿದ ಸದಸ್ಯ ಪ್ರೇಮ್‍ಕುಮಾರ್ ಇಡೀ ಜಿಲ್ಲೆಯಲ್ಲಿಯೇ ನಿರ್ಮಿತಿ ಕೇಂದ್ರದ ಕಾಮಗಾರಿಗಳು ಕಳಪೆ ಎಂಬ ಹಣೆ ಪಟ್ಟಿ ಹೊತ್ತಿದ್ದರೂ, ಮತ್ತೆ ಯಾಕೆ ಅವರಿಗೆ ಕಾಮಗಾರಿ ನಿರ್ವಹಣೆ ನೀಡುವ ಉತ್ಸಾಹ ತೋರುತ್ತಿದ್ದೀರೋ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬೀದಿ ದೀಪ ನಿರ್ವಹಣೆ ಕಳಪೆಯಾಗಿದ್ದು, ಸೂಕ್ತವಾದ ಏಜೆನ್ಸಿಗೆ ನಿರ್ವಹಣೆ ಜವಾಬ್ದಾರಿ ನೀಡಬೇಕು, ಹಂದಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಹಲವು ಸದಸ್ಯರು ಒತ್ತಾಯಿಸಿದರು.ನಗರಸಭಾಧ್ಯಕ್ಷ  ಮಂಜುನಾಥ್ ಮಾತನಾಡಿ, ನನ್ನ ಅವಧಿ ಮುಗಿಯುತ್ತಿದ್ದು, ಇದುವರೆಗೆ ಕೆಲಸ ಮಾಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ನಗರಸಭೆ ಅಧ್ಯಕ್ಷ ಇ.ಮಂಜುನಾಥ್, ಉಪಾಧ್ಯಕ್ಷೆ ಲಕ್ಷ್ಮಿದೇವಿ, ಸ್ಥಾಯಿಸಮಿತಿ ಅಧ್ಯಕ್ಷ ಸಂಜಯ್‍ಕುಮಾರ್‍ಜೈನ್, ಮಾಜಿ ಅಧ್ಯಕ್ಷ ಜಬೀವುಲ್ಲಾ, ಸದಸ್ಯರಾದ ರವಿಚಂದ್ರನಾಯ್ಕ್, ಪ್ರೇಮ್ ಕುಮಾರ್, ವನಿತ, ಎಸ್‍ಪಿಟಿ ದಾದಾಪೀರ್, ಸಯೀದಾಫಿರ್ದೋಸ್, ಶಿವಣ್ಣ, ಪೌರಾಯುಕ್ತ ರಮೇಶ್‍ಸುಣಗಾರ್, ಇತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin