ಕಸವನಹಳ್ಳಿ ಕಟ್ಟಡ ಕುಸಿತ ದುರಂತ, ಮತ್ತೊಬ್ಬ ಕಾರ್ಮಿಕ ಸಾವು

Building

ಬೆಂಗಳೂರು, ಫೆ.17- ಕಸವನಹಳ್ಳಿ ಕಟ್ಟಡ ಕುಸಿತ ಪ್ರಕರಣದಲ್ಲಿ ಮತ್ತೊಬ್ಬ ಕೂಲಿ ಕಾರ್ಮಿಕ ಬಲಿಯಾಗಿದ್ದಾನೆ. ರಾಯಚೂರಿನ ಮಾನ್ವಿ ತಾಲೂಕಿನ ಸಿರವಾರ ಗ್ರಾಮದ ರಾಜಾಸಾಬ್ (40) ಮೃತಪಟ್ಟ ಕಾರ್ಮಿಕ. ರಾಜಾಸಾಬ್ ಸಾವಿನಿಂದ ಕಸವನಹಳ್ಳಿ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ.  ಕಟ್ಟಡದ ಅವಶೇಷದಡಿಯಲ್ಲಿ ಇನ್ನೂ ಹಲವರು ಕಾರ್ಮಿಕರಿದ್ದಾರೆ ಎಂಬ ಸಂಶಯದ ಮೇಲೆ ಇಂದು ಕೂಡ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಎನ್‍ಡಿಆರ್‍ಎಫ್ ತಂಡದವರು ತೆರವು ಕಾರ್ಯಾಚರಣೆ ಮುಂದುವರಿಸಿದರು. ಕಟ್ಟಡದ ಅವಶೇಷದಡಿ ಸಿಲುಕಿ ಬದುಕಿರಬಹುದು ಎಂದು ನಿರೀಕ್ಷಿಸಲಾಗಿದ್ದ ರಾಜಾಸಾಬ್ ಶವ ಅವಶೇಷದಡಿ ಪತ್ತೆಯಾಗಿದೆ.  ಶವವನ್ನು ಕಂಡ ರಾಜಾಸಾಬ್ ಸಂಬಂಧಿಕರ ಆಕ್ರಂಧನ ಮುಗಿಲುಮುಟ್ಟಿತ್ತು.

ಮಾಲೀಕ ಬಂಧನ: ಜಯರಾಮರೆಡ್ಡಿ ಬಡಾವಣೆಯ ಕಟ್ಟಡ ಕುಸಿದುಬಿದ್ದ ದಿನವೇ ನಾಪತ್ತೆಯಾಗಿದ್ದ ಕಟ್ಟಡದ ಪಾಲುದಾರ ತನ್ವೀರ್‍ಖಾನ್ ಎಂಬಾತನನ್ನು ಬಂಧಿಸುವಲ್ಲಿ ಬೆಳ್ಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.  ಘಟನೆ ಸಂಭವಿಸಿದ ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳಂದೂರು ಪೊಲೀಸರು ಬಿಬಿಎಂಪಿ ಎಂಜಿನಿಯರ್ ಮುನಿರೆಡ್ಡಿ ಎಂಬುವರನ್ನು ಬಂಧಿಸಿದ್ದರು. ಘಟನೆ ಸಂಬಂಧ ಸಮೀರಾ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

Sri Raghav

Admin