ಕಾಂತರಾಜ್ ಹತ್ಯೆ ಪ್ರಕರಣಕ್ಕೆ ರಾಜಕೀಯ ತಿರುವು : ಬೀರನಕಲ್ಲು ಗ್ರಾಮ ಬೂದಿ ಮುಚ್ಚಿದ ಕೆಂಡ

Police-000002

ತುಮಕೂರು,ಅ.22- ದುಷ್ಕರ್ಮಿಗಳ ದಾಳಿಗೆ ಭೀಕರವಾಗಿ ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ, ರೌಡಿಶೀಟರ್ ಕಾಂತರಾಜ್ ಹತ್ಯೆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬೀರನಕಲ್ಲು ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಬೀರನಕಲ್ಲು ಗ್ರಾಮದಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದು , ಯಾವ ಸಂದರ್ಭದಲ್ಲಿ ಏನಾಗುವುದೋ ಎಂಬ ಆತಂಕ ನಿರ್ಮಾಣವಾಗಿದೆ. ನಿನ್ನೆ ಮಧ್ಯಾಹ್ನ ಕೊಲೆ ನಡೆದ ಸ್ಥಳವನ್ನು ಪೊಲೀಸರು ಪರಿಶೀಲಿಸಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಇಂದು ಬೆಳಗ್ಗೆ ವಾರಸುದಾರರಿಗೆ ಶವವನ್ನು ಹಸ್ತಾಂತರಿಸಲಾಗಿದ್ದು, ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ್ ಪತ್ರಿಕೆಯೊಂದಿಗೆ ಮಾತನಾಡಿ, ಕೊಲೆ ಆರೋಪಿಗಳಿಗೆ ರಾತ್ರಿ ಆಶ್ರಯ ನೀಡಿದ್ದ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಎಂಥ ಪ್ರಭಾವಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೆ ಆರೋಪಿಗಳನ್ನು ಸಂಜೆಯೊಳಗೆ ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ:

ಜಿಲ್ಲಾ ಮಾದಿಗ ದಂಡೋರದ ಅಧ್ಯಕ್ಷ ಹಾಗೂ ದಲಿತ ಮುಖಂಡನಾಗಿದ್ದ ಕಾಂತರಾಜ್ ಹತ್ಯೆ ಖಂಡಿಸಿ ಇಂದು ವಿವಿಧ ದಲಿತಪರ ಸಂಘಟನೆಗಳು ನಗರದ ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಂತರ ತುಮಕೂರು ಟೌನ್‍ಹಾಲ್ ವೃತ್ತದಿಂದ ನೂರಾರು ಮಂದಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ, ದಲಿತರಿಗೆ ರಕ್ಷಣೆ ನೀಡಬೇಕು, ಗೃಹ ಸಚಿವರ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ಅಮಾನವೀಯ ಕೃತ್ಯ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬೀರನಕಲ್ಲು ಗ್ರಾಮದ ನಿವಾಸಿಯಾಗಿದ್ದ ಕಾಂತರಾಜ್ ಮೂರು ಬಾರಿ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿ ಪರಾಜಿತಗೊಂಡಿದ್ದರು. ಅಲ್ಲದೆ ಈತನ ವ್ಯವಹಾರ, ಎಗ್ಗಿಲ್ಲದೆ ನಡೆಯುತ್ತಿದ್ದ ಮರಳು ಮಾಫಿಯಾ, ಇಸ್ಪೀಟ್ ದಂಧೆ ಸೇರಿದಂತೆ ವಿರುದ್ಧ ಹಲವಾರು ಗುರುತರ ಆರೋಪಗಳಿದ್ದು , ತುಮಕೂರು ಗ್ರಾಮಾಂತರ ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ.

ಹಲವಾರು ವರ್ಷಗಳಿಂದ ಇದೇ ಗ್ರಾಮದ ರಾಮಕೃಷ್ಣಯ್ಯ ಕುಟುಂಬ ಹಾಗೂ ಈತನ ಮಧ್ಯೆ ವೈಷಮ್ಯವಿದ್ದು , ಜಮೀನು ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಕಳೆದ ವರ್ಷ ಇವರಿಬ್ಬರ ನಡುವೆ ನಡೆದ ಗಲಾಟೆಯಲ್ಲಿ ಕೂದಲೆಳೆ ಅಂತರದಲ್ಲಿ ಕಾಂತರಾಜ್ ಸಾವಿನಿಂದ ಪಾರಾಗಿದ್ದನು. ನಂತರ 6 ತಿಂಗಳ ಹಿಂದೆ ಜಾತಿ ನಿಂದನೆ ಪ್ರಕರಣವೊಂದು ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ ಒಂದು ವಾರದ ಹಿಂದಷ್ಟೇ ರಾಮಕೃಷ್ಣಯ್ಯ ಮತ್ತು ಈತನ ನಡುವೆ ಮತ್ತೆ ಜಗಳವಾಗಿತ್ತು. ಈ ದ್ವೇಷದಿಂದ ರಾಮಕೃಷ್ಣಯ್ಯ ಮತ್ತು ಮಕ್ಕಳು ಈತನ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದ್ದು , ಈ ನಡುವೆ ನನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸ್ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದನು ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಿನ್ನೆ ಮಧ್ಯಾಹ್ನ ಬುಲೆರೊ ಜೀಪ್‍ನಲ್ಲಿ ಪತ್ನಿ ಲಕ್ಷ್ಮಮ್ಮನ ಜೊತೆ ತುಮಕೂರಿಗೆ ಬಂದು ಹೂವು, ತರಕಾರಿ ತೆಗೆದುಕೊಂಡು ವಾಪಸ್ ಮನೆಗೆ ತೆರಳುತ್ತಿದ್ದಾಗ ಕೊಲೆಗೆ ಸಂಚು ರೂಪಿಸಿದ್ದ ದುಷ್ಕರ್ಮಿಗಳು ಈತನನ್ನು ಹಿಂಬಾಲಿಸಿ ಬೀರನಹಳ್ಳಿಗೆ ಹೋಗುವ ಕಿರಿದಾದ ರಸ್ತೆಯಲ್ಲಿ ಜೀಪಿನ ಮುಂದೆ ಇಬ್ಬರು ಬೈಕ್‍ನಲ್ಲಿ ಹಾಗೂ ಹಿಂದೆ ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದು ಜೀಪನ್ನು ಸುತ್ತುವರಿದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳಲು ಕಾಂತರಾಜ್ ಜಮೀನಿನೊಳಗೆ ಹೋದರೂ ಬಿಡದೆ ಅಟ್ಟಾಡಿಸಿಕೊಂಡು ಮಚ್ಚು , ಲಾಂಗ್‍ಗಳಿಂದ ಹಲ್ಲೆ ನಡೆಸಿದ್ದರಲ್ಲದೆ ಹಾರೆಯಿಂದಲೂ ದೇಹದ ವಿವಿಧ ಭಾಗಗಳಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ದುಷ್ಕರ್ಮಿಗಳ ಚಹರೆ ಗುರುತಿಸಿರುವ ಈತನ ಪತ್ನಿ ಲಕ್ಷ್ಮಮ್ಮ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ರಾಮಕೃಷ್ಣಯ್ಯ, ಇವರ ಮಕ್ಕಳು ಹಾಗೂ ಸಹಚರರ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಡಿವೈಎಸ್ಪಿ, ಚಿದಾನಂದಸ್ವಾಮಿ ನೇತೃತ್ವದಲ್ಲಿ ಐದು ತಂಡ ರಚಿಸಲಾಗಿದೆ. ತಂಡದಲ್ಲಿ ವೃತ್ತ ನಿರೀಕ್ಷಕ ಕೆ.ರಾಘವೇಂದ್ರ, ಗ್ರಾಮಾಂತರ ಸಿಪಿಐ ಕರಿತಿಮ್ಮಯ್ಯ, ಇನ್‍ಸ್ಪೆಕ್ಟರ್ ಗೌತಮ್, ಕ್ಯಾತಸಂದ್ರದ ನಾಗಲಿಂಗಯ್ಯ ಹಾಗೂ ಸಿಬ್ಬಂದಿಗಳಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin