ಕಾಡಾನೆ ದಾಳಿ : ಅಪಾರ ಬೆಳೆ ನಾಶ

Bangarapetr
ಬಂಗಾರಪೇಟೆ, ಅ.31- ತಾಲ್ಲೂಕಿನ ಗಡಿ ಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಎರಡು ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂ. ಬೆಲೆಯ ವಿವಿಧ ವಾಣಿಜ್ಯ ಬೆಳೆಗಳನ್ನು ನಾಶಪಡಿಸಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೋಣಿ ಮಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕದರಿನತ್ತ, ನರಸಿಂಹನಳ್ಳಿ, ತಳೂರು, ಭತ್ತಲಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆದಿರುವ ರೈತರ ನೂರಾರು ಎಕರೆಗಳ ಬೆಳೆಗಳ ಮೇಲೆ ದಾಳಿ ಮಾಡಿರುವ ಕಾಡಾನೆಗಳಿಂದ ಲಕ್ಷಾಂತರ ರೂ. ಬೆಲೆಯ ಬೆಳೆಗಳನ್ನು ನಾಶಗೊಂಡಿದೆ. ನರಸಿಂಹನಹಳ್ಳಿ ಉದಯ್‍ಕುಮಾರ್, ಕದರಿನತ್ತ ಗ್ರಾಮದ ಕೃಷ್ಣೋಜಿರಾವ್ ಎಂಬುವರ ಟೊಮ್ಯಾಟೋ , ಕೋಸು, ಬೆಳಗಳನ್ನು ನಾಶಪಡಿಸಿದೆ. ಸದ್ಯ ಆನೆಗಳು ಕಾಣಿಸಿಕೊಂಡಿರುವುದು ಸುತ್ತಮುತ್ತಲ ಗ್ರಾಮಸ್ಥರನ್ನು ಆತಂಕಗೊಳಿಸುವಂತೆ ಮಾಡಿದೆ.

ಕಳೆದ ನಾಲ್ಕೈದು ದಿನಗಳಿಂದ ಹೋಬಳಿಯ ಕೊಳಮೂರು, ಡಿ.ಪಿ.ಹಳ್ಳಿ, ಕದರಿನತ್ತ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಎರಡು ಆನೆಗಳು ತಡರಾತ್ರಿ ಚತ್ತಗುಟ್ಟಹಳ್ಳಿ ಗ್ರಾಮದ ರೈತರ ತೋಟಗಳಿಗೆ ಲಗ್ಗೆಯಿಟ್ಟು ಲಕ್ಷಾಂತರ ಮೌಲ್ಯದ ಬೆಳೆಗಳನ್ನು ನಾಶಗೊಳಿಸಿವೆ.
ಕೃಷ್ಣೋಜಿ ರಾವ್‍ರ ಸುಮಾರು 3 ಎಕರೆ ಎಲೆಕೋಸು, ದಶರಥರಾವ್‍ರಿಗೆ ಸೇರಿದ 2ಎಕರೆ ರಾಗಿ, ಅರ್ಜುನ್‍ರಾವ್‍ಗೆ ಸೇರಿದ ಒಂದೂವರೆ ಎಕರೆ ಭತ್ತ, ಮೆಣಸಿನಕಾಯಿ, ಕಡಲೆಕಾಯಿ ತೋಟಗಳಿಗೆ ಲಗ್ಗೆಯಿಟ್ಟು ಬೆಳೆಗಳನ್ನು ಸಂಪೂರ್ಣವಾಗಿ ನಾಶ ಪಡಸಿದೆ.
ರೈತರು ಕಷ್ಟಪಟ್ಟು ಸಾಲ ಮಾಡಿ ಬೆಳೆಗಳನ್ನು ಬೆಳೆಸಿ ಬೆಳೆ ಕೈಗೆ ಬರುವಷ್ಠರಲ್ಲಿ ಆನೆಗಳ ಹಾವಳಿಯಿಂದ ನಷ್ಟಕ್ಕೊಳಗಾಗುತ್ತಿದ್ದು, ಈ ಕೂಡಲೆ ಸರ್ಕಾರ ರೈತರಿಗೆ ಸ್ಪಂದಿಸಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ನಷ್ಟಕ್ಕೊಳಗಾಗಿರುವ ರೈತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಆನೆಗಳನ್ನು ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Sri Raghav

Admin