ಕಾಮಕೇಳಿ ಪ್ರಕರಣದಲ್ಲಿ ಮಾಜಿ ಸಚಿವ ಮೇಟಿಗೆ ಕ್ಲೀನ್‍ಚಿಟ್ ಸಿಕ್ಕರೂ ಅಚ್ಚರಿಯಿಲ್ಲ..!

Meti-Sex-Scandal

ಬೆಂಗಳೂರು,ಡಿ.21-ಕಾಮಕೇಳಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ಎಚ್.ವೈ.ಮೇಟಿಗೆ ಸದ್ಯದಲ್ಲೇ ಸಿಐಡಿ ಕ್ಲೀನ್‍ಚಿಟ್ ನೀಡಲಿದ್ದು ಪುನಃ ಕೆ.ಜೆ.ಜಾರ್ಜ್ ಅವರಂತೆ ಅವರು ಕೂಡ ಸಂಪುಟಕ್ಕೆ ಸೇರ್ಪಡೆಯಾದರೆ ಅಚ್ಚರಿಯಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.  ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ಇಂದು ಕಾಂಗ್ರೆಸ್ ಇನ್ವೆಷ್ಟಿಗೇಷನ್ ಡಿಪಾರ್ಟ್‍ಮೆಂಟ್(ಕಾಂಗ್ರೆಸ್ ತನಿಖಾ ಸಂಸ್ಥೆ) ಎಂಬಾಂತಾಗಿದೆ. ಮುಖ್ಯಮಂತ್ರಿ ಕೈ ಕೆಳಗೆಯೇ ತನಿಖೆ ನಡೆಯುತ್ತಿರುವುದರಿಂದ ಎಚ್.ವೈ.ಮೇಟಿಗೆ ಕ್ಲೀನ್‍ಚಿಟ್ ನೀಡುವುದರಲ್ಲಿ ಅನುಮಾನವೇ ಬೇಡ ಎಂದರು.

ಸಿಐಡಿಯನ್ನು ಸರ್ಕಾರ ಸಾಕಷ್ಟು ದುರುಪಯೋಗಪಡಿಸಿಕೊಂಡಿರುವುದು ಹಲವಾರು ನಿದರ್ಶನಗಳಿಂದ ಸಾಬೀತಾಗಿದೆ. ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಕೆ.ಜೆ.ಜಾರ್ಜ್ ಪ್ರಕರಣಕ್ಕೆ ತನಿಖೆ ನಡೆಸಿ ಕ್ಲೀನ್‍ಚಿಟ್ ನೀಡಲಾಗಿತ್ತು.  ವಿಡಿಯೋದಲ್ಲಿ ಮಹಿಳೆಯೊಬ್ಬಳ ಜೊತೆ ಎಚ್.ವೈ.ಮೇಟಿ ಇರುವುದು ಸ್ಪಷ್ಟವಾಗಿ ಕಂಡುಬಂದಿದೆ. ಯಾವುದೇ ವ್ಯಕ್ತಿ ಈವರೆಗೂ ಅವರ ವಿರುದ್ಧ ದೂರು ನೀಡಿಲ್ಲ. ಮಹಿಳೆ ಮಾತ್ರ ಪ್ರಕರಣದ ನಂತರ ದೂರು ನೀಡಿದ್ದಾಳೆ. ಯಾವ ಕಾರಣಕ್ಕಾಗಿ ಮುಖ್ಯಮಂತ್ರಿ ಸಿಐಡಿ ತನಿಖೆಗೆ ಆದೇಶಿಸಬೇಕಿತ್ತು ಎಂದು ಪ್ರಶ್ನೆ ಮಾಡಿದರು. ತನಗೆ ಬೇಕಾದವರನ್ನು ರಕ್ಷಿಸಿಕೊಳ್ಳುವುದು, ಬೇಡದವರ ಮೇಲೆ ದಾಳಿ ನಡೆಸುವುದು ಸಿಐಡಿಯ ಒಂದಂಶದ ಕಾರ್ಯಕ್ರಮವಾಗಿದೆ. ಎಚ್.ವೈ.ಮೇಟಿ ಯಾವುದೇ ತಪ್ಪು ಮಾಡಿಲ್ಲ. ಅವರೊಬ್ಬ ನಿರಪರಾಧಿ ಎಂದು ಸಿಐಡಿ ವರದಿ ನೀಡುತ್ತದೆ ಎಂದು ಹೇಳಿದರು.

ಹೆಗಲೇಕೆ ಮುಟ್ಟಿಕೊಳ್ಳುವಿರಿ:

ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಬೇನಾಮಿ ಹಣ ವಹಿವಾಟು ಪ್ರಕರಣದಲ್ಲಿ ಕಾಂಗ್ರೆಸ್‍ನ ಕೆಲವು ಸಚಿವರು ಸದ್ಯದಲ್ಲಿ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿದ್ದಾರೆ. ಅವರು ಸುಖಾಸುಮ್ಮನೆ ಆಧಾರ ರಹಿತ ಆರೋಪ ಮಾಡಿಲ್ಲ.  ನೀವು ಏನು ತಪ್ಪು ಮಾಡಿಲ್ಲ ಎಂದಾಗ ಯಡಿಯೂರಪ್ಪ ಹೇಳಿಕೆಗೆ ಏಕಿಷ್ಟ ಗಾಬರಿಯಾಗಬೇಕು, ಕುಂಬಳಕಾಯಿ ಕಳ್ಳ ಎಂದರೆ ಹೆಗಲೇಕೆ ಮುಟ್ಟುಕೊಳ್ಳುತ್ತೀರಿ ಎಂದು ಕಾಂಗ್ರೆಸ್ ನಾಯಕರನ್ನು ಶೆಟ್ಟರ್ ಪ್ರಶ್ನಿಸಿದರು.  ದೇಶಾದ್ಯಂತ ಸಿಬಿಐ, ಐಟಿ ಮತ್ತು ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ಕೂಡ ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಾರೊಬ್ಬರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿಲ್ಲ. ಸಿಬಿಐ, ಐಟಿ, ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಎಸಿಬಿ ಜಿದ್ದಿಗೆ ಬಿದ್ದವರಂತೆ ದಾಳಿ ನಡೆಸಿದ್ದು , ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.  ಕೆಪಿಸಿಸಿ ಕಾರ್ಯದರ್ಶಿ ಸುಭೋದ್ ಯಾದವ್ ಅವರನ್ನು ಯಾವ ಕಾರಣಕ್ಕಾಗಿ ವರ್ಗಾವಣೆ ಮಾಡಲಾಯಿತು ಎಂಬುದು ತಿಳಿದಿಲ್ಲ. ಅಧ್ಯಕ್ಷ ಶಾಮ್‍ಭಟ್ ಕೈವಾಡವಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.  ಕೆಪಿಎಸ್‍ಸಿಯಲ್ಲಿ ನಡೆಯುತ್ತಿರುವ ಕರ್ಮಕಾಂಡಕ್ಕೆ ಯಾದವ್ ಒಂದಿಷ್ಟು ತಡೆಯುವ ಪ್ರಯತ್ನ ಮಾಡಿದ್ದರು. ಅಂಥ ದಕ್ಷ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದಾರೆ. ಇನ್ನು ಮುಂದಾದರು ಸಂದರ್ಶನ ರದ್ದುಪಡಿಸಿ ನೇರ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಸಲಹೆ ಮಾಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin