ಕಾರ್ಯಕಾರಿಣಿಯಲ್ಲಿ ಮುಖಾಮುಖಿಯಾದರೂ ಪರಸ್ಪರ ಮುಖ ನೋಡದ ಯಡಿಯೂರಪ್ಪ-ಈಶ್ವರಪ್ಪ

Eshwarappa-Yadiyurappa--1

ಬೆಂಗಳೂರು, ಮೇ 6-ಇಬ್ಬರೂ ಒಂದೇ ವೇದಿಕೆಯಲ್ಲಿದ್ದರು. ಪರಸ್ಪರ ಮುಖ ನೋಡಲಿಲ್ಲ. ಹಸ್ತಲಾಘವ ಮಾಡಲಿಲ್ಲ. ಇನ್ನು ಮಾತುಕತೆ ಇಲ್ಲವೇ ಇಲ್ಲ. ಗಂಟುಮುಖ ಹಾಕಿಕೊಂಡೇ ಮನಸ್ಸಿನಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುತ್ತಿದ್ದರು. ಸಾಸಂಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಆರಂಭವಾದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮೊದಲ ದಿನವಾದ ಇಂದು ಕಂಡುಬಂದ ದೃಶ್ಯಗಳಿವು.   ಇಲ್ಲಿನ ರಾಮಾನುಜ ರಸ್ತೆಯ ರಾಜೇಂದ್ರ ಭವನದಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿವಾದದ ಕೇಂದ್ರಬಿಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ನಡುವೆ ಉಂಟಾಗಿರುವ ಮುಸುಕಿನ ಗುದ್ದಾಟ ಇನ್ನು ಮುಂದುವರೆದಿದೆ ಎಂಬುದು ಸಾಬೀತಾಗಿದೆ.ವೇದಿಕೆಯಲ್ಲಿ ಇಬ್ಬರು ಆಸೀನರಾಗಿದ್ದರೂ ಪರಸ್ಪರ ಒಬ್ಬರ ಮುಖ ಮತ್ತೊಬ್ಬರು ನೋಡಲಿಲ್ಲ. ಉಭಯ ಕುಶಲೋಪರಿ ನಡೆಯಲಿಲ್ಲ. ಉಭಯ ನಾಯಕರು ಸಿಡುಕಿನಿಂದಲೇ ಕುಳಿತಿದ್ದು ಎಲ್ಲರ ಗಮನ ಸೆಳೆಯಿತು.   ಪ್ರಾರಂಭದಲ್ಲಿ ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕಾರ್ಯಕಾರಿಣಿ ಸದಸ್ಯರಾದ ಅರವಿಂದ ಲಿಂಬಾವಳಿ, ಶೋಭ ಕರಂದ್ಲಾಜೆ, ಸಿ.ಟಿ.ರವಿ, ವಿ.ಶ್ರೀನಿವಾಸ್ ಪ್ರಸಾದ್, ರವಿಕುಮಾರ್, ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ಪುರಂದರೇಶ್ವರಿ ಆಸೀನರಾಗಿದ್ದರು.

ಕಾರ್ಯಕ್ರಮ ಆರಂಭವಾದ ನಂತರ ಕೆ.ಎಸ್.ಈಶ್ವರಪ್ಪ ವೇದಿಕೆಗೆ ಆಗಮಿಸಿ ಯಡಿಯೂರಪ್ಪನವರತ್ತ ಎರಡೂ ಕೈ ಎತ್ತಿ ನಮಸ್ಕರಿಸಿದರು. ಆದರೆ ಹಠಮಾರಿ ಸ್ವಭಾವದ ಬಿಎಸ್‍ವೈ ನೋಡು ನೋಡದಂತೆ ತಲೆ ತಗ್ಗಿಸಿ ತಮ್ಮದೇ ಆಲೋಚನೆಯಲ್ಲಿ ತಲೀನರಾಗಿದ್ದರು.   ಇದು ಸ್ವತಃ ಈಶ್ವರಪ್ಪನವರಿಗೂ ಕೆಲಕಾಲ ಕಸಿವಿಸಿ ಉಂಟು ಮಾಡಿತು. ಅಂದರೆ ಇಬ್ಬರು ನಾಯಕರ ನಡುವೆ ಇನ್ನು ಮುಸುಕಿನ ಗುದ್ದಾಟ ಮುಗಿದಿಲ್ಲ ಎಂಬುದು ಸಾಬೀತಾಗಿತ್ತು.

ಇನ್ನು ಮುರುಳೀಧರ್ ರಾವ್ ಅವರನ್ನು ಸನ್ಮಾನಿಸುವ ವೇಳೆ ಎಲ್ಲ ನಾಯಕರು ಎದ್ದು ನಿಂತರೂ ಈಶ್ವರಪ್ಪ ಹಾಗೆ ಕುಳಿತಿದ್ದರು. ಪ್ರಾಸ್ತಾವಿಕ ಭಾಷಣ ಮುಗಿಯುವವರೆಗೂ ಯಡಿಯೂರಪ್ಪ , ಈಶ್ವರಪ್ಪನವರ ಕಡೆ ಅಪ್ಪಿತಪ್ಪಿಯೂ ಮುಖ ಮಾಡಲಿಲ್ಲ. ಉಭಯ ನಾಯಕರು ಸಿಡುಕಿನಿಂದಲೇ ವೇದಿಕೆಯಲ್ಲಿ ಆಸೀನರಾಗಿದ್ದರು. ಕಮಲ ಪಾಳೆಯದಲ್ಲಿ ಉಂಟಾಗಿರುವ ಭಿನ್ನಮತ ಇನ್ನು ಶಮನವಾಗಿಲ್ಲ ಎಂಬುದು ಈ ನಾಯಕರ ನಡವಳಿಕೆಯಿಂದಲೇ ಗೊತ್ತಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin