ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದೊಳಗಿನ ಬಿಕ್ಕಟ್ಟಿನ ಬಗ್ಗೆ ಮಾತನಾಡದಂತೆ ಮುರುಳೀಧರ್ ರಾವ್ ಎಚ್ಚರಿಕೆ
ಬೆಂಗಳೂರು,ಮೇ 6-ಪಕ್ಷದೊಳಗಿನ ಬಿಕ್ಕಟ್ಟಿನ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಪ್ರಸ್ತಾಪ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುವುದಾಗಿ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ. ಕಾರ್ಯಕಾರಿಣಿಯಲ್ಲಿ ಪ್ರಮುಖವಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಭಿನ್ನಮತದ ನಾಯಕ ಕೆ.ಎಸ್.ಈಶ್ವರಪ್ಪ ಇತ್ತೀಚೆಗೆ ನಡೆದ ವಿದ್ಯಮಾನಗಳ ಬಗ್ಗೆ ವೇದಿಕೆಯಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದರು. ಇದರ ಸುಳಿವು ಅರಿತ ಮುರುಳೀಧರ್ ರಾವ್ ಯಾವುದೇ ಕಾರಣಕ್ಕೂ ಕಾರ್ಯಕಾರಿಣಿಯಲ್ಲಿ ಈಗಾಗಲೇ ನಿಗದಿಯಾಗಿರುವ ಗೋಷ್ಠಿಗಳ ಬಗ್ಗೆ ಮಾತನಾಡಬೇಕೆ ಹೊರತು ಉಳಿದಂತೆ ಭಿನ್ನಮತದ ವಿಷಯದ ಬಗ್ಗೆ ಅಪ್ಪಿತಪ್ಪಿಯೂ ಒಂದೇ ಒಂದು ವಾಕ್ಯವನ್ನೂ ಪ್ರಸ್ತಾಪಿಸಬಾರದು. ಒಂದು ವೇಳೆ ಯಾರಾದರೂ ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ಕಾರ್ಯಕಾರಿಣಿ ಸಭೆ, ಪಕ್ಷದ ಸಂಘಟನೆ, ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಕಾರ್ಯಕರ್ತರನ್ನು ಹುರಿದುಂಬಿಸಲು ಆಯೋಜಿಸಲಾಗಿದೆ. ಇಲ್ಲಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸದೆ ಪಕ್ಷದ ಕಾರ್ಯಕ್ರಮಗಳಿಗಷ್ಟೇ ಭಾಷಣ ಸೀಮಿತವಾಗಿರಬೇಕೆಂದು ಎಲ್ಲರಿಗೂ ಸಂದೇಶ ರವಾನಿಸಿದ್ದಾರೆ. ಯಡಿಯೂರಪ್ಪ ಇಂದು ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಭಿನ್ನಮತೀಯರಿಗೆ ಖಡಕ್ ಸಂದೇಶ ರವಾನಿಸಲು ಮುಂದಾಗಿದ್ದರು. ಅಂದರೆ ಈಶ್ವರಪ್ಪ ತಮ್ಮ ನಾಯಕತ್ವದ ವಿರುದ್ಧ ಬಿಸುಗುಡುತ್ತಿರುವ ಸೊಗಡು ಶಿವಣ್ಣ , ಎಸ್.ಎ.ರವೀಂದ್ರನಾಥ್, ನಂದೀಶ್, ಡಾ.ಎಚ್.ಎಸ್.ಶಿವಯೋಗಿ ಸ್ವಾಮಿ ಸೇರಿದಂತೆ 2ನೇ ಹಂತದ ನಾಯಕರಿಗೂ ಬಿಸಿ ಮುಟ್ಟಿಸಲು ಸಿದ್ದತೆ ನಡೆಸಿದ್ದರು. ಇಂದು ಕಾರ್ಯಕಾರಿಣಿಯಲ್ಲಿ ಭಿನ್ನಮತ ಪ್ರಸ್ತಾಪಿಸಿದರೆ ಮಾಧ್ಯಮಗಳಲ್ಲಿ ಇದೇ ಹೆಚ್ಚಿನ ಸುದ್ದಿಯಾಗಿ ಪಕ್ಷಕ್ಕೆ ಇನ್ನಷ್ಟು ಹಾನಿ ಉಂಟಾಗುತ್ತದೆ. ಅಲ್ಲದೆ ಈಶ್ವರಪ್ಪ ಬಣ ಕೂಡ ಇನ್ನಷ್ಟು ಹಾದಿ ರಂಪ, ಬೀದಿ ರಂಪ ಮಾಡಬಹುದೆಂಬ ಕಾರಣಕ್ಕಾಗಿ ಮುರಳೀಧರ್ ರಾವ್ ಈ ತಂತ್ರ ಹೆಣೆದಿದ್ದಾರೆ.
ಮಾಧ್ಯಮ ಗೋಷ್ಠಿ ಶಿಫ್ಟ್ :
ಈ ಮೊದಲು ಮಾಧ್ಯಮದವರಿಗೆ ಮಾಹಿತಿ ನೀಡಲು ಇಲ್ಲಿನ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಪಕ್ಕದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸಭೆಯಲ್ಲಿ ನಡೆಯುವ ಪ್ರತಿಯೊಂದು ವಿಷಯಗಳನ್ನು ಬಿತ್ತರಿಸಬಹುದೆಂಬ ಕಾರಣಕ್ಕಾಗಿ ಮಾಧ್ಯಮ ಗೋಷ್ಠಿ ನಡೆಯುವ ಸ್ಥಳವನ್ನು ಬೇರೊಂದು ಕಡೆ ವರ್ಗಾವಣೆ ಮಾಡಲಾಗಿದೆ. ಮಾಧ್ಯಮಗಳಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯ ಸೋರಿಕೆಯಾಗದಂತೆ ತಡೆಗಟ್ಟಲು ಇಂತಹ ರಕ್ಷಣಾ ತಂತ್ರ ಹೆಣೆಯಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >