ಕಾವೇರಿಗಾಗಿ ದೇವೇಗೌಡರು ನಡೆಸಿದ ಸತ್ಯಾಗ್ರಹಕ್ಕೆ ಸದನದಲ್ಲಿ ಶ್ಲಾಘನೆ
ಬೆಂಗಳೂರು, ಅ.3– ಕಾವೇರಿ ವಿಚಾರದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಡೆಸಿದ ಹೋರಾಟಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವಹಿಸಿದ ಕಾಳಜಿಗೆ ವಿಧಾನಸಭೆಯಲ್ಲಿಂದು ಅಭಿನಂದನೆ ಸಲ್ಲಿಸಲಾಯಿತು. ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು, ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಅವರು, ಸದ್ಯಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅನಂತ್ಕುಮಾರ್ ಹಾಗೂ ಸದಾನಂದಗೌಡರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಆಗ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈಎಸ್ವಿ ದತ್ತಾ ಅವರು, ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ಹಿಂದೆ ಸರಿಯಲು ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗದಲ್ಲಿ ದೇವೇಗೌಡರು ನಡೆಸಿದ ಸತ್ಯಾಗ್ರಹ ಕಾರಣ. ಕಾವೇರಿ ಹೋರಾಟಕ್ಕೆ ಗೌಡರ ಉಪವಾಸ ಸತ್ಯಾಗ್ರಹ ನೈತಿಕ ಒತ್ತಡ ತಂದು ಕೊಟ್ಟಿತು. ಅದರ ಪರಿಣಾಮವೇ ಕೇಂದ್ರ ಸರ್ಕಾರದ ನಿಲುವಿನಲ್ಲಿ ಬದಲಾವಣೆಯಾಗಲು ಸಾಧ್ಯವಾಯಿತು. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟದ ಅಸ್ತ್ರ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಅಷ್ಟರಲ್ಲಿ ಬಿಜೆಪಿ ಸದಸ್ಯರು ಏರಿದ ದನಿಯಲ್ಲಿ ಕೂಗಲು ಮುಂದಾದರು. ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್ ಮಧ್ಯೆ ಪ್ರವೇಶ ಮಾಡಿ, ದೇವೇಗೌಡರು ಹಾಗೂ ಪ್ರಧಾನಿ ಅವರನ್ನು ಯಾವುದೇ ಪಕ್ಷಕ್ಕೆ ಸೀಮಿತಗೊಳಿಸಬೇಡಿ. ಪಕ್ಷಕ್ಕಿಂತ ರಾಜ್ಯದ ಹಿತ ಮುಖ್ಯ ಎಂದರು.
ದೇವೇಗೌಡರು 84ರ ಇಳಿವಯಸ್ಸಿನಲ್ಲೂ ಸತ್ಯಾಗ್ರಹ ನಡೆಸುವ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಗೌಡರು ಮತ್ತೆ ಪ್ರಧಾನಿಯಾಗುತ್ತಾರಾ? ಇಲ್ಲವೆ ಇದರಲ್ಲೇನಾದರೂ ಗಂಟು ಸಿಗುತ್ತದೆಯೇ ಎಂದರು. ಗೌಡರ ಸತ್ಯಾಗ್ರಹ ಶ್ಲಾಘನೀಯವಾಗಿದೆ. ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಅವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವುದರ ಹಿಂದೆ ಪ್ರಧಾನಿ ಅವರ ಪಾತ್ರವಿದೆ. ಇಡೀ ರಾಜ್ಯ ಹಾಗೂ ಸದನ ಗೌಡರು ಮತ್ತು ಪ್ರಧಾನಿಗೆ ಋಣಿ ಎಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಮಾಜಿ ಪ್ರಧಾನಿ ಗೌಡರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೌರವ ಪೂರ್ವಕ ಕೃತಜ್ಞತೆ ಸಲ್ಲಿಸಬೇಕು ಎಂದು ರಮೇಶ್ ಕುಮಾರ್ ಹೇಳುತ್ತಿದ್ದಂತೆ ಮೇಜು ಕುಟ್ಟಿ ಅಭಿನಂದನೆ ಸಲ್ಲಿಸಲಾಯಿತು. ಪ್ರಧಾನಿ ಅವರು ಇನ್ನೂ ಎತ್ತರಕ್ಕೆ ಬೆಳೆಯಬೇಕು. ಈ ವಿಚಾರದಲ್ಲಿ ನಾವು ಸಣ್ಣತನ ತೋರಲ್ಲ ಎಂದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ತನ್ನ ಪ್ರತಿನಿಧಿ ಇಟ್ಟು ವ್ಯಾಜ್ಯ ನಡೆಸುತ್ತಿದೆ. ಪಕ್ಷಕ್ಕಿಂತ ರಾಜ್ಯದ ಹಿತ ಮುಖ್ಯ ಎಂದು ಹೇಳಿದರು. ಆಗ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು, ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಹೋರಾಟ ನಡೆಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿ ಸದನದ ಕಾರ್ಯಕಲಾಪವನ್ನು ಕೆಲ ಕಾಲ ಮುಂದೂಡಿದರು.