ಕಾವೇರಿ ಅಂತಿಮ ತೀರ್ಪಿನಿಂದ ಕರ್ನಾಟಕಕ್ಕಾದ ಲಾಭಗಳೇನು…?

Kaveri-Cauvery

ನವದೆಹಲಿ,ಫೆ.16-ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ದಶಕಗಳಿಂದ ಕಗ್ಗಂಟಾಗಿ ಪರಿಣಮಿಸಿದ್ದ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಸುಪ್ರೀಂಕೋರ್ಟ್ ಇಂದು ನೀಡಿರುವ ಐತಿಹಾಸಿಕ ತೀರ್ಪು ಕನ್ನಡಿಗರ ಮೊಗದಲ್ಲಿ ಮಂದಹಾಸ ಮೂಡಿಸಿದೆ.   ಕಾವೇರಿ ನದಿನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಸರಿಸುಮಾರು 20 ಟಿಎಂಸಿ ನೀರನ್ನು ಹೆಚ್ಚುವರಿ ಬಳಕೆಗೆ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಕರ್ನಾಟಕದ ಜನತೆಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.  ಈವರೆಗೂ ತಮಿಳನಾಡಿಗೆ ವಾರ್ಷಿಕವಾಗಿ ಕಾವೇರಿ ಜಲಾಶಯ ಕೊಳ್ಳದಿಂದ ಹರಿಸುತ್ತಿದ್ದ 192 ಟಿಎಂಸಿ ನೀರಿನಲ್ಲಿ 14.75 ಟಿಎಂಸಿ ನೀರನ್ನು ಕಡಿತಗೊಳಿಸಿ ರಾಜ್ಯಕ್ಕೆ ಬಳಸಿಕೊಳ್ಳಲು ಆದೇಶ ನೀಡಿದೆ.

ಇದಲ್ಲದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ 4.25 ಟಿಎಂಸಿ ಹೆಚ್ಚುವರಿ ನೀರು ಬಳಕೆಗೆ ಸೂಚಿಸಿದೆ. ಇದರ ಜೊತೆಗೆ ರಾಜ್ಯದ ಪಾಲಿಗೆ ಮರಣ ಶಾಸನವಾಗಬಹುದೆಂದು ಹೇಳಲಾಗಿದ್ದ ಕಾವೇರಿ ನದಿನೀರು ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸರ್ಕಾರದ ಕೆಲಸ ಎಂದು ಹೇಳಿದೆ.  ಒಟ್ಟಾರೆ ನ್ಯಾಯಾಲಯ ನೀಡಿರುವ ಇಂದಿನ ಐತಿಹಾಸಿಕ ತೀರ್ಪು ರಾಜ್ಯಕ್ಕೆ ಸಿಹಿ ತಂದಿದೆ. ಕರ್ನಾಟಕದ ಬಹುತೇಕ ಎಲ್ಲ ಮನವಿಯನ್ನು ನ್ಯಾಯಾಲಯ ಒಪ್ಪಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ತೀರ್ಪು ನೆರೆಯ ತಮಿಳುನಾಡಿಗೆ ಕಹಿಯನ್ನುಂಟು ಮಾಡಿದೆ.

ಕಾವೇರಿ ನದಿ ನ್ಯಾಯಾಧೀಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸಂಬಂಧಿಸಿದ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಬೆಳಿಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಹಾಲ್ ನಂ.1ರಲ್ಲಿ ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ, ನ್ಯಾ.ಎ.ಎಂ.ಖಾನ್ವೀಳ್ಕರ್ ಮತ್ತು ನ್ಯಾ.ಅಮಿತಾವ್ ರಾಯ್ ತೀರ್ಪು ಪ್ರಕಟಿಸಿದರು. ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ನಿನ್ನೆಯಿಂದಲೇ ಚಾತಕಪಕ್ಷಿಯಂತೆ ಕಾದು ಕುಳಿತಿದ್ದ ಕರುನಾಡ ಜನತೆ ಒಂದು ಕ್ಷಣ ನೆಮ್ಮದಿಯ ನಿಟ್ಟುಸಿರು ಬಿಟ್ಟರು.   ನ್ಯಾಯಾಲಯದ ಆದೇಶದಂತೆ ಇನ್ನು ಮುಂದೆ ತಮಿಳುನಾಡಿಗೆ ಕಾವೇರಿ ಜಲಾಶಯದಿಂದ ವಾರ್ಷಿಕವಾಗಿ 177 ಟಿಎಂಸಿ ನೀರನ್ನು ಮಾತ್ರ ಬಿಳುಗೊಂಡ್ಲು ಡ್ಯಾಮ್‍ನಿಂದ ಹರಿಸಬೇಕು. ಉಳಿದಂತೆ ಈ ಹಿಂದೆ ನ್ಯಾಯಾಧೀಕರಣ ಕೇರಳಕ್ಕೆ 30 ಟಿಎಂಸಿ ಹಾಗೂ ಪಾಂಡಿಚೇರಿಗೆ 7 ಟಿಎಂಸಿ ನಿಗದಿಪಡಿಸಿದ್ದ ನೀರಿನ ಪಾಲನ್ನು ಎತ್ತಿ ಹಿಡಿದಿದೆ.

ನದಿಗಳು ರಾಷ್ಟ್ರೀಯ ಸಂಪತ್ತು ಯಾವುದೇ ರಾಜ್ಯ ಅದರ ಮೇಲೆ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ ಇಂದು ನೀಡಿರುವ ತೀರ್ಪು ಮುಂದಿನ 15 ವರ್ಷಗಳಿಗೆ ಅನ್ವಯವಾಗುತ್ತದೆ ಎಂದು ಸೂಚಿಸಿದೆ.  1892 ಮತ್ತು 1924ರ ಬ್ರಿಟಿಷ್ ಒಪ್ಪಂದವನ್ನು ಉಲ್ಲೇಖಿಸಿದ ನ್ಯಾ.ದೀಪಕ್ ಮಿಶ್ರಾ, 50 ವರ್ಷಗಳ ಬಳಿಕ ಒಪ್ಪಂದಗಳು ರದ್ದಾಗುತ್ತವೆ. ಹಾಗಾಗಿ ಎರಡೂ ರಾಜ್ಯಗಳು ಸಮಾನ ಹಂಚಿಕೆ ತತ್ವವನ್ನು ಪಾಲಿಸಬೇಕೆಂದು ಸೂಚಿಸಿರುವ ಅವರು, ಕರ್ನಾಟಕಕ್ಕೆ ಕಾನೂನಿನಡಿ ಚೌಕಾಸಿ ಮಾಡಲು ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟರು.  ಇದೇ ವೇಳೆ ಕಾವೇರಿಕೊಳ್ಳದಲ್ಲಿ ಅಚ್ಚುಕಟ್ಟು ಪ್ರದೇಶವನ್ನು ವಿಸ್ತರಿಸಿಕೊಳ್ಳಲು ಕರ್ನಾಟಕಕ್ಕೆ ಸೂಚನೆ ಕೊಟ್ಟಿರುವ ನ್ಯಾಯಾಲಯ ತಮಿಳುನಾಡಿನಲ್ಲಿನ ಅಂತರ್ಜಲ ಪ್ರಮಾಣವನ್ನು ಪರಿಗಣಿಸಬೇಕೆಂಬ ಮನವಿಯನ್ನು ಪುರಸ್ಕರಿಸಿಯೇ ಈ ತೀರ್ಪು ನೀಡಿದೆ.

ತೀರ್ಪಿನ ಹಿನ್ನೆಲೆ:
2007ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನ್ಯಾಯಾಧೀಕರಣ ತನ್ನ ಅಂತಿಮ ತೀರ್ಪು ಹೊರಹಾಕಿತ್ತು. ತೀರ್ಪಿನಲ್ಲಿ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ 4 ರಾಜ್ಯಗಳು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಇದನ್ನು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂ ಮೊರೆ ಹೋಗಿತ್ತು. ಈ ವಿಶೇಷ ಮೇಲ್ಮನವಿಯ ಅರ್ಜಿ ವಿಚಾರಣೆ 2016ರ ಅಕ್ಟೋಬರ್ 18ರಿಂದ ಆರಂಭವಾಗಿ 2017ರ ಸೆಪ್ಟೆಂಬರ್ 20ಕ್ಕೆ ಅಂತ್ಯವಾಗಿತ್ತು.   ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್‍ರಾಯ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೆಪ್ಟೆಂಬರ್ 20ರಂದೇ ವಿಚಾರಣೆ ಅಂತ್ಯಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

2007ರ ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು.
ಈ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ಕಾವೇರಿ ಕೊಳ್ಳದ ರಾಜ್ಯಗಳ ವಾದ-ಪ್ರತಿವಾದವನ್ನು ಕೂಲಂಕಷವಾಗಿ ಆಲಿಸಿತ್ತು. ನ್ಯಾಯಮೂರ್ತಿ ಅಮಿತಾವ್ ರಾಯ್ ಮಾರ್ಚ್ 1ಕ್ಕೆ ನಿವೃತ್ತಿಯಾಗುತ್ತಿದ್ದು, ಫೆಬ್ರವರಿ 26ರಿಂದ ಮಾರ್ಚ್ 3ರವರೆಗೆ ಸುಪ್ರೀಂಕೋರ್ಟ್‍ಗೆ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಕೂಡ ಇದೆ. ಹೀಗಾಗಿ ಇಂದು ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸಿದೆ.

ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
ನ್ಯಾ.ಎನ್.ಪಿ.ಸಿಂಗ್, ನ್ಯಾ.ಸುಧೀರ್ ನಾರಿಯನ್, ನ್ಯಾ.ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು.   ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕ ಹಾಕಲಾಗಿತ್ತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಎಂದು ನೀರನ್ನು ಹಂಚಿಕೆ ಮಾಡಲಾಗಿತ್ತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿತ್ತು.

ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕರ್ನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕಿತ್ತು.

2013ರಲ್ಲಿ ಅಧಿಸೂಚನೆ ಪ್ರಕಟ
ಐತೀರ್ಪಿನ ಆದೇಶದ ಅನ್ವಯ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕಿತ್ತು. ಆದರೆ ತೀರ್ಪು ಬಂದು 5 ವರ್ಷ ಕಳೆದರೂ ನಿರ್ವಹಣಾ ಮಂಡಳಿಯನ್ನು ರಚಿಸದ್ದಕ್ಕೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಫೆ.20ರ ಒಳಗಡೆ ಅಂತಿಮ ಆದೇಶವನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಬೇಕೆಂದು 2013ರ ಫೆ.4ರಂದು ಖಡಕ್ ಆದೇಶ ಹೊರಡಿಸಿತ್ತು. ಈ ಆದೇಶದನ್ವಯ ಅಂತಿಮವಾಗಿ ಕೇಂದ್ರ ಸರ್ಕಾರ 2016ರ ಫೆ.19ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.

ಬೆಂಗಳೂರಿಗೆ ಹೆಚ್ಚುವರಿ ನೀರಿ  : 
ಬೆಂಗಳೂರು, ಫೆ.16- ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ಕಾವೇರಿ ನದಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಲು ಸುಪ್ರೀಂಕೋರ್ಟ್ ಗ್ರೀನ್‍ಸಿಗ್ನಲ್ ನೀಡಿದೆ.  ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ವಿವಾದ ಕುರಿತಂತೆ ಇಂದು ಮಹತ್ವದ ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಬೆಂಗಳೂರಿನ ಕುಡಿಯುವ ನೀರಿನ ಬವಣೆ ನೀಗಿಸಲು ಕಾವೇರಿ ಕೊಳ್ಳದಿಂದ ಹೆಚ್ಚುವರಿಯಾಗಿ 4.75 ಟಿಎಂಸಿ ನೀರು ಹರಿಸಲು ಸಮ್ಮತಿಸಿದೆ.

ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ನಾರಿಮನ್ ಮತ್ತು ಮೋಹನ್ ಕಾತರಕಿ ಅವರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಕಾವೇರಿ ಕೊಳ್ಳದಿಂದ ಹರಿಸಲಾಗುವ ನೀರಿನ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ರಾಜ್ಯದ ಮನವಿಗೆ ಸ್ಪಂದಿಸಿರುವ ನ್ಯಾಯಪೀಠ ಹೆಚ್ಚುವರಿಯಾಗಿ ಬೆಂಗಳೂರಿಗೆ ನೀರು ಹರಿಸಲು ಸಮ್ಮತಿಸಿರುವುದರಿಂದ ಭವಿಷ್ಯದಲ್ಲಿ ಬೆಂಗಳೂರಿಗರಿಗೆ ನೀರಿನ ಬವಣೆ ತಟ್ಟುವುದಿಲ್ಲ.

Sri Raghav

Admin