ಕಾವೇರಿ ಕಿಚ್ಚು ಧಗಧಗಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಏಕೆ..?

Spread the love

 

krs
ಕಾವೇರಿ ಗಲಭೆ ತಣ್ಣಗಾದರೂ , ತಮಿಳುನಾಡಿಗೆ ಕರ್ನಾಟಕದಿಂದ ಕಾವೇರಿಯ ನೀರು ನಿರಂತರವಾಗಿ ಹರಿಯುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳು ವೇಗವಾಗಿ ಬರಿದಾಗುತ್ತಿದ್ದರೆ, ತಮಿಳುನಾಡಿನ ಜಲಾಶಯಗಳು ಭರ್ತಿಯಾಗುತ್ತಿವೆ. ರಾಜ್ಯವನ್ನಾಳುವ ನಾಯಕರಿಗೆ ತುಂಬಾ ತಡವಾಗಿ ಎಚ್ಚರವಾಗಿದೆ. ವಸ್ತು ಸ್ಥಿತಿಯ ಅರಿವು ಮಾಡಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ರಾಜ್ಯದ ಜನತೆಯ ಜೀವಜಲ ಅನ್ನಿಸಿಕೊಂಡಿರುವ ನದಿ ನೀರಿನ ಬಗ್ಗೆ ಮೊದಲಿನಿಂದಲೂ ಇದೇ ಧೋರಣೆ. ಕಾವೇರಿ ಒಕ್ಕಲಿಗರದು, ಕೃಷ್ಣ ಲಿಂಗಾಯತರದು ಎಂದು ರಾಜ್ಯದ ಹಿರಿಯ ಮುತ್ಸದ್ಧಿಯೊಬ್ಬರು ಬಹಿರಂಗವಾಗಿ ಅಪ್ಪಣೆ ಕೊಡಿಸಿದ್ದರು. ಇಂತಹ ಮನೋಭಾವದಿಂದ ಕೂಡಿದ ರಾಜಕೀಯ ನಾಯಕರಿಂದ ಸಾಮಾನ್ಯ ಪ್ರಜೆಗಳಿಗೆ ನ್ಯಾಯ ಸಿಗುತ್ತದೆ ಅನ್ನುವುದು ಮರೀಚಿಕೆಯೇ ಸರಿ. ಕಾವೇರಿ ನೀರಿಗಾಗಿ ಮೊನ್ನೆ ನಡೆದ ಚಳವಳಿಯು ಜನರ ಚಳವಳಿಯೇ ವಿನಃ ರಾಜಕೀಯ ನಾಯಕತ್ವದಿಂದ ಕೂಡಿದ ಚಳವಳಿ ಅಲ್ಲ. ಜಾತಿ, ಮತ, ಧರ್ಮ, ಭಾಷೆಯ ಭೇದವಿಲ್ಲದೆ ಜೀವಜಲ ಉಳಿಸಿಕೊಳ್ಳಲು ಜನರೇ ಬೀದಿಗಿಳಿದು ಹೋರಾಡಿದರು. ಕೃಷ್ಣರಾಜಸಾಗರ ಅಣೆಕಟ್ಟು ಪ್ರದೇಶದಲ್ಲಿ ಈಗಲೂ ಹೋರಾಟ ಮುಂದುವರೆದಿದೆ. ರಕ್ತವನ್ನಾದರೂ ಕೊಟ್ಟೇವು, ನೀರು ಕೊಡೆವು ಎಂದು ಘೋಷಣೆ ಕೂಗುತ್ತ ಆ ನಿಷ್ಪಾಪಿ ಜನ ತಮ್ಮ ಮೈ ಕೈಯನ್ನೆಲ್ಲಾ ಕುಯ್ದುಕೊಂಡರು. ಕೆಆರ್‌ಎಸ್‌ನಿಂದ ಪ್ರವಾಹೋಪಾದಿ ನೀರು ಹರಿದು ಹೋಗುತ್ತಿರುವುದನ್ನು ಸಹಿಸದ ಕೆಲ ರೈತರು ನೀರಿಗೆ ಧುಮುಕಿ ಆತ್ಮಹತ್ಯೆಗೆ ಮುಂದಾದರು. ವಿಷ ಸೇವಿಸಿದ ಘಟನೆಯೂ ನಡೆಯಿತು.
ಇವೆಲ್ಲ ಆಗಬಾರದು ನಿಜ. ಆದರೆ, ಜನರ ಭಾವೋದ್ವೇಗ ಕೆರಳುವಂತೆ ಮಾಡಿದ್ದು ಯಾರು? ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲ, ಈಗ ಇರುವ ಸಂಗ್ರಹದಿಂದ  ಫಸಲು ಬೆಳೆಯಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿದಿತ್ತು. ಆದರೂ ಕೂಡ ಸರ್ಕಾರವು ಮುನ್ನೆಚ್ಚರಿಕೆ ವಹಿಸಿ ಕಾವೇರಿ ನ್ಯಾಯ ಮಂಡಳಿ ಮತ್ತು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಿಲ್ಲ. ನಾವು ಜಲಕ್ಷಾಮ ಎದುರಿಸುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಡಲಿಲ್ಲ. ಸರ್ಕಾರದ ಈ ನಿರ್ಲಕ್ಷ್ಯವು ಕರ್ನಾಟಕದ ರೈತರಿಗೆ ಶಾಪವಾದರೆ, ತಮಿಳುನಾಡಿನವರಿಗೆ ವರದಾನವಾಯಿತು. ನಿಮ್ಮ ಫಸಲಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ರೈತರಿಗೆ ಹೇಳಿದ ಸರ್ಕಾರವು ಅದೇ ರೀತಿ ತಮಿಳುನಾಡಿಗೆ ಹರಿಸಲು ನೀರಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಏಕೆ ಹೇಳಲಿಲ್ಲ. ಹಾಗೆಲ್ಲ ಹೇಳಲು ಸಾಧ್ಯವಿಲ್ಲ, ನಾವು ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿ ತಿಂಗಳು ಎಷ್ಟು ನೀರು ಬಿಡಬೇಕು. ಆಯಾ ತಿಂಗಳಿನಲ್ಲಿ ನಮ್ಮ ಜಲಾಶಯಗಳ ನೀರಿನ ಪ್ರಮಾಣ, ಮಳೆ ಬರುವ ಸಾಧ್ಯಾಸಾಧ್ಯತೆ ಮುಂತಾದ ವಿಷಯಗಳ ಬಗ್ಗೆ ಪ್ರತಿ ತಿಂಗಳು ಅವಲೋಕನ ನಡೆಸಲಾಗುತ್ತದೆ. ಇದಕ್ಕೆಂದೇ ನಿಗದಿಯಾಗಿರುವ ಸಚಿವಾಲಯ ಹಾಗೂ ಅಕಾರ ವರ್ಗದವರು ಸರ್ಕಾರಕ್ಕೆ ನಿಖರವಾದ ವರದಿ ಕೊಡುತ್ತಾರೆ.
ಈ ಆಧಾರದ ಮೇಲೆ ಕರ್ನಾಟಕ ಸರ್ಕಾರವು ಮೊದಲೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ನ್ಯಾಯಾಕರಣಕ್ಕೆ ಆಪತ್ಕಾಲೀನ ಮನವಿ ಸಲ್ಲಿಸಬೇಕಾಗಿತ್ತು. ಹೀಗೆ ಮಾಡದೆ ಸರ್ಕಾರ ಮೌನ ವಹಿಸಿತ್ತು. ನಮ್ಮ ಮೌನವು ತಮಿಳುನಾಡು ಸರ್ಕಾರಕ್ಕೆ ತಪ್ಪು ಸಂದೇಶ ರವಾನಿಸಿತು. ಕರ್ನಾಟಕದಲ್ಲಿ ಸಾಕಷ್ಟು ನೀರಿದೆ. ಅದಕ್ಕೇ ಅವರು ಮೌನವಾಗಿದ್ದಾರೆ ಎಂದು ಭಾವಿಸಿದ ಅವರು, ತಮ್ಮ ಪಾಲಿನ ನೀರಿಗಾಗಿ ಬೇಡಿಕೆ ಮಂಡಿಸಿದರು. ತಮಿಳುನಾಡು ಅರ್ಜಿ ಸಲ್ಲಿಸಿದ ನಂತರ ಕರ್ನಾಟಕಕ್ಕೆ ಬಿಸಿ ಮುಟ್ಟಿದೆ. ಇದಕ್ಕೆ ಯಾರು ಹೊಣೆ? ನೀರಿನ ಅಭಾವದ ಬಗ್ಗೆ ಸರ್ಕಾರವು ನಮ್ಮ ರೈತರಿಗೆ ಸೂಚನೆ ಕೊಟ್ಟ ತಕ್ಷಣದಲ್ಲೇ ಪ್ರಧಾನಿಗೆ ಪತ್ರ ಬರೆದು ಮನವರಿಕೆ ಮಾಡಿ ಕೊಡಲಿಲ್ಲವೇಕೆ? ಕಾವೇರಿ ಅಚ್ಚುಕಟ್ಟು ಪ್ರದೇಶದಿಂದ ಆಯ್ಕೆಯಾದ ಇಬ್ಬರು ಸಂಸತ್ ಸದಸ್ಯರು ಏನು ಮಾಡುತ್ತಿದ್ದರು? ರಾಜ್ಯದಿಂದ ಆಯ್ಕೆಯಾದ ಮೂವರು ಗಣ್ಯರು ಕೇಂದ್ರ ಸಚಿವ ಸಂಪುಟದಲ್ಲಿದ್ದರೂ ಕೂಡ ಅವರು ನಿಸ್ಸಹಾಯಕರಂತೆ ಸುಮ್ಮನೆ ಕುಳಿತದ್ದೇಕೆ? ಈಗ ವೀರಾವೇಶದ ಮಾತನಾಡುತ್ತಿರುವ ಶಾಸಕರು ಮೊದಲೇ ಎಚ್ಚೆತ್ತುಕೊಳ್ಳಲಿಲ್ಲವೇಕೆ? ಜನ ಹಿತ ಕಾಪಾಡಬೇಕಾದ ಇವರು ಜನರನ್ನು ಸಂಕಷ್ಟಕ್ಕೆ ದೂಡಿದ್ದು ಸರಿಯೆ? ಇವರೆಲ್ಲರಿಗೂ ಜನರಿಗಿಂತ ತಮ್ಮ ತಮ್ಮ ಪಕ್ಷಗಳ ಹಿತ, ಅಕಾರ ದಾಹವೇ ಮುಖ್ಯವಾಯಿತು ಅನ್ನುವುದು ಸುಳ್ಳೆ?
ಗ್ರಹಚಾರವೋ ಅಥವಾ ದುರಾದೃಷ್ಟವೋ ಏನೋ ಅಂತೂ ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿ ಆದಾಗಲೆಲ್ಲಾ ಕರ್ನಾಟಕವನ್ನು ಕಾವೇರಿ ಸಂಕಷ್ಟ ಬಾಸುತ್ತಿದೆ. ಕಾವೇರಿಯ ಹೃದಯ ಭಾಗ ಅನ್ನಿಸಿಕೊಂಡಿರುವ ಮಂಡ್ಯದಲ್ಲಿ ಹುಟ್ಟಿದ ಜಯಲಲಿತಾ ಈಗ ತಮಿಳುನಾಡಿನ ಮುಖ್ಯಮಂತ್ರಿ. ಮಂಡ್ಯವು ನಾನು ಹುಟ್ಟಿದ ಸ್ಥಳ, ಅಲ್ಲಿರುವವರು ನನ್ನ ರೈತರು ಎಂಬ ಕಿಂಚಿತ್ ಅನುಕಂಪವೂ ಇಲ್ಲದೆ ಜಯಲಲಿತಾ ಅವರು ತಮಿಳುನಾಡಿನ ರೈತರ ಪರವಾಗಿ ಹೋರಾಡುತ್ತಾರೆ. ಇದು ಅವರ ಬದ್ಧತೆ. ಅದಕ್ಕೆ ಪಕ್ಷಾತೀತವಾಗಿ ಅಲ್ಲಿನ ಎಲ್ಲಾ ವ್ಯಕ್ತಿಗಳೂ ಒಕ್ಕೊರಲ ಬೆಂಬಲ ಸೂಚಿಸುತ್ತಾರೆ. ಕರ್ನಾಟಕದ ರಾಜಕಾರಣಿಗಳಲ್ಲಿ ಈ ಒಮ್ಮತವಿಲ್ಲ. ಸಂಕಷ್ಟದಲ್ಲೂ ಕೂಡ ಅವರಿಗೆ ತಮ್ಮ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ. ಜಯಲಲಿತಾ ಅವರು 1991ರಲ್ಲಿ ಮೊದಲ ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾದರು. ಆಗ ಕರ್ನಾಟಕವು ಕಾವೇರಿ ವಿವಾದ ಎದುರಿಸಬೇಕಾಯಿತು. ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ಅಡಿ ನೀರು ಬಿಡಬೇಕೆಂದು ಕಾವೇರಿ ನ್ಯಾಯ ಮಂಡಳಿಯು ಆದೇಶಿಸಿದಾಗ, ಅದು ಕರ್ನಾಟಕಕ್ಕೆ ನುಂಗಲಾರದ ತುತ್ತಾಯಿತು. ಕರುಣಾನಿಯವರು ತಮಿಳುನಾಡಿನ ಮುಖ್ಯಮಂತ್ರಿಯಾದಾಗ , ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಯಿತು.
ಜಯಲಲಿತಾ ಅವರು ಮತ್ತೆ ಗದ್ದುಗೆ ಏರಿದಾಗ ಮಾತುಕತೆಯ ಹಾದಿಗೆ ತಡೆ ಉಂಟಾಯಿತು. ವಿವಾದವು ಸುಪ್ರೀಂಕೋರ್ಟ್ ಮೆಟ್ಟಿಲೇರಿತು. 1995ರಲ್ಲಿ ಕೂಡ ತಮಿಳುನಾಡು ಸರ್ವೋಚ್ಚ ನ್ಯಾಯಾಲಯದ ಮೊರೆ ಹೊಕ್ಕು ತನಗೆ 30 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ಕೋರಿತು. ಆಗಲೂ ಕೂಡ ಕರ್ನಾಟಕವು ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಿಸುತ್ತಿತ್ತು. ಆಗ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರ ಮಧ್ಯಪ್ರವೇಶದ ಫಲವಾಗಿ ಕರ್ನಾಟಕವು ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವು ಆರು ಟಿಎಂಸಿ ಅಡಿಗೆ ಇಳಿಯಿತು. 1996 ರಿಂದ 2011ರ ಅವಯಲ್ಲಿ ಕಾವೇರಿ ನದಿ ನೀರಿನ ಸಮಸ್ಯೆ ಅಷ್ಟಾಗಿ ಕಾಡಲಿಲ್ಲ. ಈ ಅವಯಲ್ಲಿ ಜಯಲಲಿತಾ ಅವರು ಅಕಾರದಲ್ಲಿ ಇರಲಿಲ್ಲ ಅನ್ನುವುದು ಗಮನಾರ್ಹ. ಪುನಃ ಜಯಾ ಅವರು ಅಕಾರಕ್ಕೆ ಬಂದರು. ಕಾವೇರಿ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ತಮಿಳುನಾಡಿನ ವಾದ ಆಲಿಸಿದ ನ್ಯಾಯಾಲಯವು ಪ್ರತಿ ದಿನ 1.2 ಟಿಎಂಸಿ ಅಡಿ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿತು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಿಂದ ಮಂಡ್ಯದವರೆಗೆ ಪಾದಯಾತ್ರೆ ನಡೆಸಿದರು. 2012ರಲ್ಲಿ ಇದೇ ಪರಿಸ್ಥಿತಿ ಮರು ಕಳಿಸಿತು. 2012ರ ಅಕ್ಟೋಬರ್ 6ರಂದು ಕರ್ನಾಟಕ ಬಂದ್ ನಡೆಸಲಾಯಿತು. ಈಗ ಮತ್ತೆ ಜಯಲಲಿತಾ ಅವರು ಅಕಾರದಲ್ಲಿದ್ದಾರೆ. ಜಯಾ ಅವರು ತಮ್ಮ ರಾಜ್ಯಕ್ಕೆ ಕಾವೇರಿ ನದಿ ನೀರು ಪಡೆಯುವ ವಿಷಯದಲ್ಲಿ ತುಂಬಾ ಕಟ್ಟು ನಿಟ್ಟು ಎಂದು ಈಗಾಗಲೇ ಸಾಬೀತಾಗಿದೆ. ಆದರೂ ಕೂಡ ನಮ್ಮ ಆಡಳಿತ ಎಚ್ಚೆತ್ತುಕೊಳ್ಳಲಿಲ್ಲ.
ಕಾವೇರಿಯಿಂದ ತಮಿಳುನಾಡಿಗೆ ಪ್ರತಿ ದಿನ ಹದಿನೈದು ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದರೂ ಕೂಡ, ಜಯಲಲಿತಾ ಅವರು ವಿರಮಿಸಿಲ್ಲ. ನಮಗೆ 61 ಟಿಎಂಸಿ ಅಡಿ ನೀರು ಬೇಕು. ಹಾಗೂ ಬೆಳೆ ಹಾನಿ ಪರಿಹಾರ ರೂಪದಲ್ಲಿ ಕರ್ನಾಟಕದಿಂದ 2250 ಕೋಟಿ ರೂ. ಕೊಡಿಸಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ. ಸೆಪ್ಟೆಂಬರ್ 20ರವರೆಗೆ ನೀರು ನಿರಂತರವಾಗಿ ಹರಿಯಲಿದೆ. ಜಯಲಲಿತಾ ಅವರು ಕಾವೇರಿ ಕ್ಯಾತೆ ಎತ್ತುವುದು ಶತಃಸಿದ್ಧ ಎಂಬ ಅರಿವಿದ್ದರೂ ಕೂಡ ನಮ್ಮ ರಾಜಕಾರಣಿಗಳು ಎಚ್ಚೆತ್ತುಕೊಳ್ಳಲಿಲ್ಲ. ಕಾವೇರಿ ಮೇಲುಸ್ತುವಾರಿ ಸಮಿತಿ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಮುಂಚಿತವಾಗಿ ನಮ್ಮ ಸಂಕಷ್ಟ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡಲಿಲ್ಲ. ಈ ವಿಷಯವನ್ನು ಲಘುವಾಗಿ ತೆಗೆದುಕೊಂಡದ್ದು ಕರ್ನಾಟಕದ ಜನರಿಗೆ ಕಂಟಕವಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಟ್ಟರೆ, ಮಂಡ್ಯ ಭಾಗದ ರೈತರು ಬೀದಿ ಪಾಲಾಗುತ್ತಾರೆ. ನಿಮ್ಮೊಂದಿಗೆ ನಾವಿದ್ದೇವೆ. ಪ್ರತಿ ಎಕರೆಗೆ ಇಷ್ಟದಂತೆ ನಿಮಗೆ ಬೆಳೆ ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಇದುವರೆಗೂ ಹೇಳಿಲ್ಲ. ಕೆಆರ್‌ಎಸ್‌ನ ಹೂಳೆತ್ತಿದರೆ ಕನಿಷ್ಠ ಪಕ್ಷ ಎರಡು ಟಿಎಂಸಿ ಅಡಿಗಳಷ್ಟು ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದು. ಆದರೆ ಯಾವ ಸರ್ಕಾರವೂ ಆ ಕಡೆ ಗಮನ ನೀಡಿಲ್ಲ. ಕನ್ನಂಬಾಡಿಯ ನೀರಿನಿಂದ ನಾವು ಬೆಳೆ ಬೆಳೆಯುತ್ತಿಲ್ಲ. ಅಲ್ಲಿರುವ ನೀರು ಮುಂದಿನ ಬೇಸಿಗೆ ಕಳೆಯುವವರೆಗೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಸುತ್ತಮುತ್ತಲ ನಗರಗಳ ನಾಗರಿಕರಿಗೆ ಕುಡಿಯಲು ಕೂಡ ಸಾಕಾಗುವುದಿಲ್ಲ ಎಂಬ ಕಟು ಸತ್ಯವನ್ನು ಸಂಬಂಧಪಟ್ಟವರಿಗೆ ನೇರವಾಗಿ ಮನವರಿಕೆ ಮಾಡಿಕೊಡಬೇಕು.
ಸೆಪ್ಟೆಂಬರ್ 6ರ ಅನ್ವಯ ಕೆಆರ್‌ಎಸ್‌ನಲ್ಲಿ 18.28 ಟಿಎಂಸಿ ಅಡಿ ನೀರಿದ್ದರೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 38.22 ಟಿಎಂಸಿ ಅಡಿ ನೀರಿದೆ. ಆ ರಾಜ್ಯದ ಕೃಷ್ಣಗಿರಿ ಜಲಾಶಯದಲ್ಲೂ ಸಾಕಷ್ಟು ನೀರಿನ ಸಂಗ್ರಹವಿದೆ. ಇದನ್ನು ಬಳಸಿಕೊಂಡು ಅವರು ಡಿಸೆಂಬರ್‌ವರೆಗೆ ನಿರಾತಂಕವಾಗಿ ಬೆಳೆ ಬೆಳೆಯಬಹುದು. ಈ ನಡುವೆ ಅಲ್ಲಿ ಮಳೆ ಕೂಡ ಆಗಲಿದೆ. ಸಂಕಷ್ಟ ಇರುವುದು ಕರ್ನಾಟಕಕ್ಕೇ ವಿನಃ ತಮಿಳುನಾಡಿನಲ್ಲ. ಈಗ ಕೆಆರ್‌ಎಸ್ ಸಂಗ್ರಹ ಪಾತಾಳಕ್ಕಿಳಿದಿದ್ದು, ತಮಿಳುನಾಡಿನ ಜಲಾಶಯ ತುಂಬಿ ತುಳುಕುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟಿರುವ ನಮ್ಮ ಸರ್ಕಾರಕ್ಕೆ ಗೋವಾದಿಂದ ಮಹದಾಯಿ ನೀರು ತರಿಸಲು ಸಾಧ್ಯವಾಗಿಲ್ಲ. ಇದು ವಿಪರ್ಯಾಸ. ರಾಜ್ಯದ ಎಲ್ಲಾ ನದಿ ಪಾತ್ರಗಳು, ಜಲಾಶಯಗಳು, ಆ ಭಾಗದ ಜನರ ನೀರಿನ ಅಗತ್ಯದ ಸಂಪೂರ್ಣ ಪರಿಚಯ ಇರುವ ವ್ಯಕ್ತಿಗಳು ಮಾತ್ರ ಈ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಇಲ್ಲದೆ ಹೋದರೆ, ಕಾವೇರಿ, ಮಹದಾಯಿ, ಎತ್ತಿನ ಹೊಳೆ, ಮೇಕೆದಾಟಿನಂಥಹ ಸಮಸ್ಯೆಗಳು ಪರಿಹಾರ ಕಾಣದೆ ನಿರಂತರವಾಗಿ ಕಾಡುತ್ತಿರುತ್ತವೆ.
ನೆಲ, ಜಲ, ಭಾಷೆಯ ವಿಷಯದಲ್ಲಿ ಯಾವೊಬ್ಬ ರಾಜಕಾರಣಿಯೂ ಸ್ವಾರ್ಥ ರಾಜಕಾರಣ ಮಾಡಬಾರದು. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸರ್ಕಾರವು ಪಕ್ಷದ ನೆರಳಿನಿಂದ ಹೊರ ಬಂದು ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು. ಪಾಕಿಸ್ತಾನದವರು ಹೇಗೆ ಸದಾ ಕಾಶ್ಮೀರದ ವಿಷಯ ಎತ್ತುತ್ತಿರುತ್ತಾರೋ ಹಾಗೆ ತಮಿಳುನಾಡಿನವರು ಕಾವೇರಿ ವಿಷಯ ಎತ್ತುತ್ತಾರೆ. ಅದು ಅವರ ಪ್ರಬಲ ಅಸ್ತ್ರ. ಅವರ ಈ ಬ್ರಹ್ಮಾಸ್ತ್ರದ ಎದುರು ನಾವು ನಿಃಶಸ್ತ್ರರಾಗಬಾರದು.
ನಾವು ಅಣೆಕಟ್ಟುಗಳನ್ನು ಕಟ್ಟಿರುವುದು ನೆರೆ ರಾಜ್ಯಗಳಿಗೆ ನೀರು ಬಿಡುವುದಕ್ಕಲ್ಲ. ನಮ್ಮ ರೈತರ ಬೆಳೆಗೆ ನೀರೊದಗಿಸಿ, ನಾಗರಿಕರ ಕುಡಿಯುವ ನೀರಿನ ಅಗತ್ಯ ಪೂರೈಕೆ ಆದ ನಂತರ ನೆರೆಯವರಿಗೆ ನೀರು ತಾನಾಗಿಯೇ ಹೋಗುತ್ತದೆ. ಕಾವೇರಿಯ ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ತಡೆಯುವ ಸಲುವಾಗಿ ತಮಿಳುನಾಡಿನವರು ಅಣೆಕಟ್ಟಬಹುದು. ಕಟ್ಟಿದರೆ ಆ ಭಾಗದ ರೈತರ ಜಮೀನು ಮುಳುಗಡೆ ಆಗುತ್ತದೆ. ಆದ್ದರಿಂದ ಆಣೆ ಬೇಡ, ಕರ್ನಾಟಕದವರು ಸಂಗ್ರಹಿಸಿರುವ ನೀರನ್ನೇ ಕೇಳೋಣ ಎಂಬ ಅವರ ಧೋರಣೆಗೆ ಅನೂಚಾನವಾಗಿ ತಾಳ ಹಾಕಿಕೊಂಡು ಬರಲಾಗುತ್ತಿದೆ. ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಅತ್ಯಗತ್ಯ. ಅಲ್ಲಿಯವರೆಗೆ ಕರ್ನಾಟಕಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

► Follow us on –  Facebook / Twitter  / Google+

Facebook Comments

Sri Raghav

Admin