ಕಾವೇರಿ ಕೊಳ್ಳದ ನಾಲೆಗಳಿಗೆ ಹೆಚ್ಚುವರಿ ನೀರು ಬಿಡಲು ಅಧಿವೇಶನದಲ್ಲಿ ನಿರ್ಣಯ ಸಾಧ್ಯತೆ
ಬೆಂಗಳೂರು, ಅ.3-ಸುಪ್ರೀಂಕೋರ್ಟ್ನ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರ್ಕಾರ ಕಾವೇರಿ ಕೊಳ್ಳದ ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳುವ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡಲು ಮುಂದಾಗಿದ್ದು, ಈ ಸಂಬಂಧ ಇಂದು ನಡೆಯುವ ವಿಶೇಷ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಹಾಲಿ ಜಲಾಶಯಗಳಲ್ಲಿರುವ ಹೆಚ್ಚುವರಿ ನೀರನ್ನು ಜಲಾನಯನದ ನಾಲೆಗಳಿಗೆ ಬಿಟ್ಟರೆ ಆ ನೀರು ಮತ್ತೆ ನದಿ ಮೂಲಕ ತಮಿಳುನಾಡಿಗೆ ಹರಿಯುತ್ತದೆ. ಸುಪ್ರೀಂಕೋರ್ಟ್ ಹೇಳಿರುವಂತೆ ನೀರು ಹರಿಸಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಇದೆ.
ಕುಡಿಯುವ ನೀರನ್ನು ಹೊರತುಪಡಿಸಿ ಉಳಿದ ಹೆಚ್ಚುವರಿ ನೀರನ್ನು ಈ ರೀತಿ ತಮಿಳುನಾಡಿಗೆ ಬಿಡುವ ಮೂಲಕ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡದಂತೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಈ ಬಗ್ಗೆ ಸುದೀರ್ಘವಾಗಿ ಉಭಯ ಸದನಗಳಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್ಎಸ್, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕೆಂದು ಕಳೆದ ಬಾರಿ ನಡೆದ ವಿಶೇಷ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಆದರೆ ಸುಪ್ರೀಂಕೋರ್ಟ್ ನಿರ್ಣಯವೇನೇ ಇರಲಿ ಅ.1 ರಿಂದ 6ರವರೆಗೆ ಪ್ರತಿದಿನ ಆರು ಸಾವಿರ ಕ್ಯೂಸೆಕ್ ನೀರು ಹರಿಸಬೇಕು. ನಾಲ್ಕು ದಿನಗಳೊಳಗಾಗಿ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ಆದೇಶ ನೀಡಿತ್ತಲ್ಲದೆ, ರಾಜ್ಯಸರ್ಕಾರಕ್ಕೆ ಕೊನೆಯ ಅವಕಾಶವೆಂದು ಕಟ್ಟಪ್ಪಣೆ ಮಾಡಿತ್ತು. ಇದರಿಂದ ಕಂಗಾಲಾದ ರಾಜ್ಯಸರ್ಕಾರ ಮತ್ತೆ ವಿಶೇಷ ಅಧಿವೇಶನ ಕರೆದಿದೆ.
ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿರಬೇಕೆಂದು ಪ್ರತಿಪಕ್ಷಗಳು ಹೇಳುತ್ತಿವೆ. ನೀರು ಬಿಡುವ ನಿರ್ಧಾರ ಕೈಗೊಂಡರೆ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ತಮಿಳುನಾಡಿಗೆ ನೀರು ಬಿಡುವುದಕ್ಕಿಂತ ನಮ್ಮ ನಾಲೆಗಳಿಗೆ ನೀರು ಹರಿಸುವುದು. ಅದರಿಂದ ಬರುವ ಬಸಿನೀರು ಹಾಗೂ ನಾಲೆ ನೀರು ಸೇರಿ ತಮಿಳುನಾಡಿಗೆ ಹರಿಯುತ್ತದೆ ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ.
ಇನ್ನು ಸರ್ಕಾರದ ಪರವಾಗಿ ನಮ್ಮ ವಕೀಲರ ತಂಡ ಸಮರ್ಥವಾಗಿ ವಾದ ಮಂಡಿಸಿಲ್ಲ. ಅವರ ಬದಲಾವಣೆ ಮಾಡಬೇಕೆಂಬ ಬಗ್ಗೆಯೂ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ. ಪ್ರತಿಪಕ್ಷಗಳು ಈ ಬಗ್ಗೆ ವಿಷಯ ಪ್ರಸ್ತಾಪಿಸಲಿವೆ.
► Follow us on – Facebook / Twitter / Google+