ಕಾವೇರಿ ಜಲವಿವಾದ ಮುತ್ಸದ್ಧಿಗಳು ಯಾರು?

kaveri000
ಕಾವೇರಿಯ ಜಲವಿವಾದದಲ್ಲಿ ಅತ್ಯುಚ್ಛ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ, ರಾಜ್ಯಕ್ಕಾದ ಅನ್ಯಾಯಕ್ಕೆ ಸಮಸ್ತ ಜನ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿದರು. ಕರ್ನಾಟಕ ಬಂದ್ ಮೂಲಕ ಪ್ರತಿಭಟನೆಗೆ ಮುಂದಾದರು. ಅದನ್ನು ಬೆಂಬಲಿಸಿ ಅತ್ಯಂತ ಯಶಸ್ವಿಗೊಳಿಸಿದರು. ಇದು ಅತ್ಯಂತ ಸ್ವಾಗತಾರ್ಹ. ಆದರೆ, ಕನ್ನಡ ನೆಲ-ಜಲ ವಿವಾದಗಳಿಗೆ, ಪ್ರಶ್ನೆ-ಪ್ರಮೇಯಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಸ್ತ ಕನ್ನಡಿಗರ ಪಾತ್ರವಷ್ಟೇ ಮುಖ್ಯವಲ್ಲ. ಜೊತೆಗೆ ಆಳುವ ರಾಜಕಾರಿಣಿಗಳ ಪಾತ್ರವು ಬಹಳ ಮಹತ್ವದ್ದು.

ನಾವು ಚುನಾಯಿಸಿದÀ ಯಾವುದೇ ಪಕ್ಷದ ಮುಖಂಡರು ರಾಜ್ಯದ ಸಮಸ್ಯೆಗಳೆಲ್ಲವನ್ನೂ ತಾವು ಅಧಿಕಾರಕ್ಕೆ ಬಂದ ಮೇಲೆ ಕೂಲಂಕಷವಾಗಿ ಅಭ್ಯಶಿಸಿ, ಪರಿಶೀಲಿಸಿ, ವಿಮರ್ಶಿಸಿ, ಚರ್ಚಿಸಬೇಕು. ಅಂಥ ಸಮಸ್ಯೆಗಳಿಗೆ ಹೇಗೆ ಸ್ಪಂಧಿಸಬೇಕು ಎಂಬ ಬಗ್ಗೆ ನಿರ್ಣಯಗಳನ್ನು ಆಯಾ ಕಾಲಕ್ಕೆ ಆಯಾ ಪಕ್ಷದ ನಾಯಕರು, ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆದ್ಯ ಕರ್ತವ್ಯವೂ ಹೌದು.ಅದನ್ನೆಲ್ಲಾ ಬಿಟ್ಟು, ಕಳೆದ ಸಲ ಬೇರೆ ಪಕ್ಷದವರು ಹಾಗೇ ಮಾಡಿದರು, ಹೀಗೆ ಮಾಡಿದರು ಎಂದು ಟೀಕಾಸ್ತ್ರವನ್ನೇ ಗುರಿಯಾಗಿಕೊಂಡು, ಟೀಕೆ ಮಾಡುತ್ತ ತಮ್ಮ ಅಧಿಕಾರ ಅವಧಿಯನ್ನು ಪೂರ್ತಿ ಮುಗಿಸಿ, ಸರಕಾರದಿಂದ ಪಗಾರ, ಭತ್ಯೆ, ಮತ್ತಿತರ ಸವಲತ್ತುಗಳನ್ನು ಅನುಭೋಗಿಸಿ, ವ್ಮಜ ಮಾಡುತ್ತ ಹೋದರೆ, ಜನತೆಯ ವಿಶ್ವಾಸಕ್ಕೆ ದ್ರೋಹ ಮಾಡಿದಂತಾಗುವದಿಲ್ಲವೇ? ಈಗ ಭಾರೀ ಚರ್ಚೆಯಾಗುತ್ತಿರುವುದು ಕಾವೇರಿ ನೀರಿನ ವಿವಾದ.

kavery00001

ಕಾವೇರಿ ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ಹಾಯ್ದು, ಬಂಗಾಲ ಉಪಸಾಗರಕ್ಕೆ ಕೂಡುವುದು. ಈ ನಾಲ್ಕೂ ರಾಜ್ಯಗಳಲ್ಲಿ ಅದು ಹಾಯ್ದು ಹೋದರೂ, ಜನತೆಗೆ ನದಿಯ ನೀರಿನ ಲಾಭ ತಟ್ಟಬೇಕಾದದ್ದು ನ್ಯಾಯ ಸಮ್ಮತ. ಆದರೆ ನೀರಿನ ಬಹುಮಟ್ಟಿನ ಬೇಡಿಕೆಯು ತಮಿಳುನಾಡು ರಾಜ್ಯದ್ದು. 1924ನೇ ಸಾಲಿನಲ್ಲಿ ಬ್ರಿಟಿಷ ಸರಕಾರದ ಅಧ್ಯಕತೆಯಲ್ಲಿ ಕರ್ನಾಟಕದ ಆಗಿನ ಮೈಸೂರು ಅಂದರೆ ಮಹಾರಾಜರು, ತಮಿಳುನಾಡು ಮತ್ತು ಉಳಿದ ಎರಡೂ ರಾಜ್ಯಗಳ ಮುತ್ಸದ್ಧಿಗಳ ಸದಸ್ಯರೊಂದಿಗೆ ಒಂದು ಸಮಿತಿ ನಿರ್ಮಾಣವಾಯಿತು.
ಉಭಯ ರಾಜ್ಯಗಳಿಗೆ ನೀರಿನ ಹಂಚಿಕೆಯಲ್ಲಿ ಒಪ್ಪಂದವಾಯಿತು. ಸಮಿತ ತನ್ನ ನಿರ್ಣಯಗಳಿಗೆ ಉಭಯ ರಾಜ್ಯಗಳ ಸದಸ್ಯರ ಸಹಿಯೊಂದಿಗೆ ಒಪ್ಪಿಗೆ ಪಡೆಯಿತು. ಆಗ ತಮಿಳರು ಕಾವೇರಿ ನೀರಿನಿಂದ ತಾವು 16.5 ಲಕ್ಷ ಹೆಕ್ಟೇರು ಜಮೀನಿಗೆ ಸಾಕಾಗುವಷ್ಟು ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಕುಡಿಯುವ ನೀರನ್ನಾಗಿಯೂ ಉಪಯೋಗಿಸಲು ನಿರ್ಣಯಿಸಲಾಯಿತು. ಕನ್ನಡಿಗರು 5 ಲಕ್ಷ ಹೆಕ್ಟೇರು ಜಮೀನು ನೀರಾವರಿಗೆ ಸಾಕಾಗುವಷ್ಟು ನೀರನ್ನು ಬಳಸಿಕೊಳ್ಳಲು ಹಾಗೂ ಕುಡಿಯಲು ಉಪಯೋಗಿಸಬೇಕೆಂಬ ನಿರ್ಣಯಕ್ಕೆ ಬರಲಾಯಿತು.

ಆಗ ಮಾನ್ಸೂನು ಕಾಲಕ್ಕೆ ಸರಿಯಾಗಿ ಮಳೆಯು ಸಾಕಷ್ಟಾಗಿ, ಎರಡು ರಾಜ್ಯಗಳಿಗೆ ತಮ್ಮ ನೀರಿನ ಬೇಡಿಕೆಗಳನ್ನು ಸಾಕಷ್ಟು ಪೂರೈಸಿ, ಹೆಚ್ಚಿನ ಪ್ರಮಾಣದ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿತ್ತು. ಈ ಒಪ್ಪಂದವು ಇಂದಿನವರೆಗೂ ರೂಢಿಯಲ್ಲಿರುತ್ತದೆ. ಈ ಹಿಂದಿನ ರಾಜಕಾರಿಣಿಗಳು ಹೆಚ್ಚು ನೀರಿನ ಪ್ರಮಾಣ ನದಿಯಲ್ಲಿದ್ದರಿಂದ ಯಾರು ನೀರಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಪ್ರಮೇಯವೇ ಬರಲಿಲ್ಲ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಕ್ರಮೇಣ ಮಳೆ ಪ್ರಮಾಣ ವರ್ಷವರ್ಷಕ್ಕೂ ಕಡಿಮೆಯಾಗುತ್ತ ಬರುತ್ತಿದೆ. ಕಾವೇರಿ ನೀರಿನ ಹಂಚಿಕೆ ಸಮಸ್ಯೆ ತೀಕ್ಷ್ಣವಾಗಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತಮಿಳರು ತಮಗೆ ಪ್ರತಿವರ್ಷ ಬರಬೇಕಾದ ನೀರಿನ ಹಂಚಿಕೆ ಪ್ರಮಾಣವನ್ನು ಉನ್ನತ ನ್ಯಾಯಾಲಯದ ಮೊರೆ ಹೋಗಿ, ಕಾಯ್ದೆಗನುಗುಣವಾಗಿ ತಮಗೆ ದೊರಕುತ್ತಿರುವ ನೀರಿನ ಪ್ರಮಾಣವನ್ನು ಪಡೆಯುತ್ತಲೇ ಬಂದಿದ್ದಾರೆ. ಆದರೆ ನಮ್ಮ ಪರಿಸ್ಥಿತಿ ಏನಾಗಿದೆ ಎಂದರೆ ಇದ್ದ ಒಂದು ಲಂಗೋಟಿಯನ್ನು ಪರರಿಗೆ ದಾನ ಮಾಡಿದಂತಾಗಿದೆ.

ಮೊನ್ನೆ ತಮಿಳುನಾಡು ಸರಕಾರ ಈ ವರ್ಷ ತಮಗೆ ಬರಬೇಕಾದ ಕಾವೇರಿ ನೀರಿನ ಪ್ರಮಾಣಕ್ಕಾಗಿ ಅತ್ಯುನ್ನತ ನ್ಯಾಯಾಲಯ ಮೊರೆಹೋಯಿತು. ತಮ್ಮ ಅನುಭವಿಕ ಮತ್ತು ಮುತ್ಸದ್ಧಿ ನ್ಯಾಯವಾದಿಗಳ ಮುಖಾಂತರ ನ್ಯಾಯ ಮಂಡಿಸಿ, ತಮಿಳನಾಡಿಗೆ ಕರ್ನಾಟಕ ಕೊಡಬೇಕಾದ ನೀರಿನ ಪ್ರಮಾಣ ಬಿಡಲು, ನ್ಯಾಯಾಲಯದ ನಿರ್ಣಯವನ್ನು ತರಲು ಯಶಸ್ವಿಯಾಗಿದ್ದಾರೆ. ಇದರರ್ಥ ನ್ಯಾಯಾಲಯದಲ್ಲಿ ಉಭಯ ರಾಜ್ಯಗಳ ನ್ಯಾಯವಾದಿಗಳು ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸುವದರ ಮೇಲೆ ನ್ಯಾಯಾಲಯದ ನಿರ್ಣಯಗಳು ಅವಲಂಬಿತವಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ. ಆದರೆ ಕರ್ನಾಟಕದ ನ್ಯಾಯವಾದಿಗಳ ತಂಡವು ಫಾಲಿ ನಾರಿಮನ್‍ರ ಮುಖಂಡತ್ವದಲ್ಲಿ ರಾಜ್ಯದ ಹಿತದೃಷ್ಟಿಯಿಂದ ವಾದ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಅಂದರೆ ನಮ್ಮ ರಾಜ್ಯದ ಕಾವೇರಿ ನದಿಯ ನೀರಿನಮಟ್ಟ, ಕನಿಷ್ಟ ಮಳೆ ಮತ್ತು ಇತರ ಸಮಸ್ಯೆಗಳ ಬಗ್ಗೆ ನ್ಯಾಯವಾದಿಗಳ ತಂಡಕ್ಕೆ ಸರಿಯಾದ ಮಾಹಿತಿ ನೀಡದಿದ್ದುದು, ನಮ್ಮ ಸರಕಾರದ ಮಂತ್ರಿಗಳ ಮತ್ತು ರಾಜಕಾರಿಣಿಗಳ ದೊಡ್ಡ ತಪ್ಪು!

ನ್ಯಾಯವಾದಿಗಳು ಎಲ್ಲಿಯೋ ಕುಳಿತು, ನ್ಯಾಯಾಲಯದಲ್ಲಿ ವಾದಿಸಬೇಕೆಂದರೆ, ವಸ್ತುಸ್ಥಿತಿ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿದ್ದರೆ ಇಂಥ ಪ್ರಮಾದಗಳು ಸಂಭವಿಸುತ್ತವೆ. ರಾಜ್ಯದ ರಾಜಕಾರಿಣಿಗಳು, ಮಂತ್ರಿಗಳು ಮತ್ತು ಸ್ಥಳೀಯ ರೈತ ಮುಖಂಡರೋ ಅಥವಾ ಕಾವೇರಿ ನೀರಾವರಿಯ ಕಾಲುವೆ ದಂಡೆಯಲ್ಲಿರುವ ಮುತ್ಸದ್ಧಿ ಮುಖಂಡರೊಂದಿಗೆ ಚರ್ಚಿಸಿ, ಸಮಸ್ಯೆಗಳ ಪಟ್ಟಿ ಮಾಡಿ, ಸಾಧ್ಯವಾದರೆ ಆ ತಂಡವನ್ನೇ ನ್ಯಾಯಾವಾದಿಗಳ ಹತ್ತಿರ ಕರೆದೊಯ್ದು, ಸಮಸ್ಯೆಗಳ ಬಗ್ಗೆ ತಿಳಿಸಿ, ಚರ್ಚಿಸಿ, ಅವರಿಗೆ ತಮ್ಮ ಬೇಕು-ಬೇಡಿಕೆಗಳನ್ನು ವಿವರಿಸಬೇಕಿತ್ತು. ಆ ಮೂಲಕ ಪರಿಣಾಮಕಾರಿಯಾಗಿ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ವಾದ ಮಾಡುವಂತೆ ಪಳಗಿಸುವ ಕಾರ್ಯವನ್ನು ಮಾಡಿದ್ದರೆ, ಇಂದಿನ ನಮ್ಮ ರಾಜ್ಯದ ವಿರುದ್ಧ ತೀರ್ಪು ಕೊಡುವ ಪರಿಸ್ಥಿತಿಯೇ ಬಂದೊಗುತ್ತಿರಲಿಲ್ಲ.

ಆದರೆ ನಮ್ಮ ರಾಜಕಾರಿಣಿಗಳು ಮಾಡಿದ್ದೇನು? ಕೆಲವರು ನ್ಯಾಯವಾದಿಗಳು ತಮಗೆ ಏನೂ ವಿಷಯ ತಿಳಿಸದೇ ಹೀಗೆ ಮಾಡಿದ್ದಾರೆಂದು, ತಮ್ಮ ಮಹತ್ತರ ಜವಾಬ್ದಾರಿಗಳಿಂದ ನುಸುಳಿಕೊಳ್ಳುತ್ತಿದ್ದಾರೆ. ನ್ಯಾಯವಾದಿಗಳಿಗೆ ಸರಿಯಾದ ಮಾಹಿತಿ ಪೂರೈಸುವುದು ನಾವು ಚುನಾಯಿಸಿದ ಜನಪ್ರತಿನಿಧಿಗಳ ಕೆಲಸ. ಆದರೆ ತಮಿಳರು ನ್ಯಾಯಾಲಯದಲ್ಲಿ ಮುತ್ಸದ್ಧಿ ನ್ಯಾಯವಾದಿಗಳ ಮುಖಾಂತರ ಅವರಿಗೆ ಮಾಹಿತಿಗಳನ್ನು ಸರಿಯಾದ ರೂಪದಲ್ಲಿ ಪೂರೈಸಿ, ತಮ್ಮ ಹಕ್ಕುಗಳನ್ನು ಪಡೆಯುವದರಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಯಾರು ಮುತ್ಸದ್ಧಿಗಳು? ಉತ್ತರ ಕರ್ನಾಟಕದಲ್ಲಿ ಒಂದು ಗಾದೆಯಿದೆ. ತನಗೆ ಕುಣಿಯಲು ಬಾರದಿದ್ದರೆ ಕುಣಿಯುವ ನೆಲ ಡೊಂಕು ಎಂದರಂತೆ.

ಈ ರೀತಿ ನಮ್ಮ ರಾಜಕಾರಿಣಿಗಳು ತಮ್ಮ ಜವಾಬ್ದಾರಿಗಳಿಂದ ನುಸುಳುವುದು ಸರಿಯೇ? ಈಗ ತಾವು ಯಾವುದೇ ರೀತಿಯಿಂದತಪ್ಪಿಸ್ಥರಲ್ಲವೆಂದು, ತಮ್ಮ ಚಾತುರ್ಯದ ಭಾಷಣಗಳಿಂದ ಇಡೀ ರಾಜ್ಯದ ಜನತೆಯನ್ನೇ ಪ್ರತಿಭಟಿಸಲು ಪ್ರಚೋದಿಸಿ, ಹಿಂದೆ ನಿಂತು ಮೋಜು ನೋಡುವುದು ಸರಿಯೇ? ಈ ಪ್ರತಿಭಟನೆಯಿಂದ ಜನರಿಗೆ ಎಷ್ಟೊಂದು ಅನಾನುಕೂಲತೆ? ರಾಜ್ಯದ ಆಸ್ತಿಪಾಸ್ತಿಗೆ ಧಕ್ಕೆ, ಜನತೆಯ ಪ್ರಾಣವನ್ನು ಪಣಕ್ಕಿಡುವುದು ಇವೆಲ್ಲ ದುಷ್ಕಾರ್ಯಗಳಿಗೆ ಯಾರು ಕಾರಣರು? ತಮಿಳು ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿದರೆ, ಅವರಿಗೇನು ಹಾನಿ? ಆ ರಾಜ್ಯಕ್ಕೇನು ಹಾನಿ? ನೀರಿನ ಲಾಭ ತೆಗೆದುಕೊಂಡು ಅವರು ಹಾಯಾಗಿ ಕುಳಿತು, ಮೋಜು ನೋಡುತ್ತಿದ್ದಾರೆ…!!! ಇಂಥ ಪರಿಸ್ಥಿತಿಗಳಲ್ಲಿ ಮೊದಲು ನಾವೆಲ್ಲರೂ ನಮ್ಮ ರಾಜಕಾರಿಣಿಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಶ್ನಿಸಬೇಕು ಅಲ್ಲವೇ? ಸುಮ್ಮನೆ ಪ್ರತಿಭಟಿಸಿದರೆ ಏನು ಲಾಭ ನೀವೇ ನಿರ್ಧರಿಸಿ. ಪ್ರಶ್ನೆ ಕೇಳುವ ಹಕ್ಕುದಾರರಾದ ತಮ್ಮಿಂದ ಇದು ಸಾಧ್ಯವೇ?

 

► Follow us on –  Facebook / Twitter  / Google+

Sri Raghav

Admin