ಕಾವೇರಿ ನದಿ ನೀರಿನ ವಿಚಾರದಲ್ಲಿ ನರೇಂದ್ರ ಮೋದಿಯವರು ಮಲತಾಯಿ ಧೋರಣೆ : ಡಿ.ಕೆ.ಸುರೇಶ್

kunigal

ಕುಣಿಗಲ್, ಸೆ.20- ಕಾವೇರಿ ನದಿ ನೀರಿನ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಎಲ್ಲ ಸಂಸದರು ಪಕ್ಷಭೇದ ಮರೆತು ಹೋರಾಟಕ್ಕೆ ಇಳಿಯಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದರು.ಕಾವೇರಿ ಗಲಭೆ ವೇಳೆ ಗುಂಡೇಟಿಗೆ ಬಲಿಯಾದ ಸಿಂಗೋನಹಳ್ಳಿ ಗ್ರಾಮದ ಉಮೇಶ್ ಮನೆಗೆ ಭೇಟಿ ನೀಡಿ ಕುಟುಂಬ ವರ್ಗವನ್ನು ಸಾಂತ್ವನಗೊಳಿಸಿ 2 ಲಕ್ಷ ರೂ. ಪರಿಹಾರ ಧನ ನೀಡಿ ನಂತರ ಅವರು ಮಾತನಾಡಿದರು.ನಮ್ಮ ಕ್ಷೇತ್ರ ವ್ಯಾಪ್ತಿಯ ಮಾಗಡಿ ಹಾಗೂ ಕುಣಿಗಲ್‍ನಲ್ಲಿ ಕಾವೇರಿ ಗಲಭೆ ವೇಳೆ ಇಬ್ಬರು ಮೃತಪಟ್ಟು, ಒಬ್ಬ ತೀವ್ರ ಗಾಯಗೊಂಡಿದ್ದು ವಿಷಾದನೀಯ ಎಂದರು.

ವಯುಕ್ತಿಕವಾಗಿ ನಾನು ಉಮೇಶ್ ಹಾಗೂ ಕಲ್ಕೆರೆಕುಮಾರ್ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡುತ್ತಿದ್ದೇನೆ. ಗಾಯಗೊಂಡಿರುವ ಪ್ರದೀಪ್‍ಕುಮಾರನ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಭರಿಸುತ್ತೇನೆ ಎಂದು ತಿಳಿಸಿದರು.ಸರ್ಕಾರಗಳು ಗಲಾಟೆ ಸಂದರ್ಭದಲ್ಲಿ ಮುಂಜಾಗರೂಕತಾ ಕ್ರಮ ಅನುಸರಿಸಬೇಕು. ಇಲ್ಲದಿದ್ದರೆ ಅಮಾಯಕರ ಸಾವಿಗೆ ಕಾರಣವಾಗುತ್ತದೆ ಎಂದು ಹೇಳಿದರು.ಇಂದು ಬರುವ ತೀರ್ಪಿಗೆ ಸರ್ಕಾರ ಜಗ್ಗದೆ ನಾಡಿನ ಜನ ಹಾಗೂ ಜಲದ ರಕ್ಷಣೆಗೆ ಸಿದ್ಧವಾಗಿರಬೇಕು ಹಾಗೂ ಎಂತಹ ತ್ಯಾಗಕ್ಕೂ ರೆಡಿಯಾಗಿರಬೇಕು ಎಂದು ತಿಳಿಸಿದರು.ಈ ವೇಳೆ ಜಿಪಂ ಸದಸ್ಯರಾದ ಅನುಸೂಯಮ್ಮ, ಪದ್ಮಾಪಾಪಣ್ಣ, ತಾಪಂ ಸದಸ್ಯ ಅಲ್ಲಾಬಕಾಶ್, ತಹಸೀಲ್ದಾರ್ ರಮೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಬಾಳೇಗೌಡ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin