ಕಾವೇರಿ ನೀರಿಗಾಗಿ ತಮಿಳುನಾಡು ಬಂದ್ : ಎರಡೂ ರಾಜ್ಯಗಳ ಮಧ್ಯೆ ಬಸ್ ಸಂಚಾರಕ್ಕೆ ಬ್ರೇಕ್
ಚಾಮರಾಜನಗರ/ಬೆಂಗಳೂರು, ಆ.30-ತಮಿಳುನಾಡಿನ ಸಾಂಬಾ ಬೆಳೆಗೆ ಕಾವೇರಿ ನೀರು ಬಿಡುವಂತೆ ಆಗ್ರಹಿಸಿ ತಮಿಳುನಾಡು ರೈತರು ಇಂದು ಬಂದ್ ನಡೆಸುತ್ತಿರುವುದನ್ನು ಖಂಡಿಸಿ ಚಾಮರಾಜನಗರ ಹಾಗೂ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜನಗರ, ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಬೇಕಾಗಿದ್ದ ಎಲ್ಲಾ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಹೊರರಾಜ್ಯಗಳಿಗೆ ಹೋಗಬೇಕಾದ ಪ್ರಯಾಣಿಕರಿಗೆ ತೊಂದರೆಯಾಯಿತು. ನಿನ್ನೆಯಿಂದಲೇ ತಮಿಳುನಾಡಿಗೆ ಹೋಗಬೇಕಾಗಿದ್ದ 420 ಸಾರಿಗೆ ಬಸ್ಗಳನ್ನು ನಿಲ್ಲಿಸಲಾಗಿತ್ತು. ತಮಿಳುನಾಡು ಸರ್ಕಾರವೂ ಕೂಡ ಅಲ್ಲಿಂದ ರಾಜ್ಯದ ವಿವಿಧೆಡೆಗೆ ಬರಬೇಕಾಗಿದ್ದ ಎಲ್ಲಾ ಬಸ್ಗಳನ್ನು ಸ್ಥಗಿತಗೊಳಿಸಿತ್ತು. ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗಳಿಗೆ ರಾಜ್ಯದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಅದೇ ರೀತಿ ರಾಜ್ಯದಿಂದ ತೆರಳಿರುವ ರಾಜ್ಯ ಸಾರಿಗೆ ಬಸ್ಗಳಿಗೂ ಕೂಡ ತಮಿಳುನಾಡಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಮೈಸೂರು, ಮಂಡ್ಯ, ಮದ್ದೂರು ಮುಂತಾದೆಡೆ ತಮಿಳುನಾಡಿಗೆ ನೀರು ಹರಿಸಬಾರದೆಂದು ರೈತರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಅಣೆಕಟ್ಟುಗಳಲ್ಲಿ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಲಾಭಕ್ಕೋಸ್ಕರ ನೀರಿಗಾಗಿ ಹೋರಾಟ ನಡೆಯುತ್ತಿದೆ. ಅಣೆಕಟ್ಟುಗಳಲ್ಲಿರುವ ನೀರು ಕುಡಿಯುವ ನೀರಿಗೆ ಸಾಕಾಗುವುದಿಲ್ಲ. ಯಾವುದೇ ಕಾರಣಕ್ಕೂ ನೀರು ಬಿಡಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಒಕ್ಕಲಿಗರ ಒಕ್ಕೂಟದ ಸದಸ್ಯರು ಹಾಗೂ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಮಿಳುನಾಡಿನ ಧೋರಣೆಯನ್ನು ಖಂಡಿಸಲಾಯಿತು.
ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ರೈತರಿಗೆ ಬೆಳೆ ಬೆಳೆಯದಂತೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ನೀರಿಗಾಗಿ ತಮಿಳುನಾಡು ಸರ್ಕಾರ ಬಂದ್ ಆಚರಿಸುತ್ತಿದೆ. ರಾಜ್ಯಸರ್ಕಾರ ಸುಪ್ರೀಂಕೋರ್ಟ್ಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ತಮಿಳುನಾಡು ಅನಗತ್ಯ ಕ್ಯಾತೆ ತೆಗೆಯುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ನಲ್ಲಿ ಸಮರ್ಪಕವಾಗಿ ವಾದ ಮಂಡಿಸುವ ಮೂಲಕ ರಾಜ್ಯದ ರೈತರ ಹಿತ ಕಾಪಾಡಬೇಕಾದ ಅಗತ್ಯವಿದೆ ಎಂದು ಪ್ರತಿಭಟನಾಕಾರರು ಹೇಳಿದರು.